ಚುನಾವಣೆ ಬಳಿಕ ಸಿಎಂ ಸ್ಥಾನದಲ್ಲಿ ಸಿದ್ದು ಇರಲ್ಲ: ಎಚ್.ಡಿ.ರೇವಣ್ಣ

| Published : Apr 21 2024, 02:24 AM IST / Updated: Apr 21 2024, 12:32 PM IST

ಸಾರಾಂಶ

ಸಿದ್ದರಾಮಯ್ಯ ಅವರನ್ನು ಇಳಿಸ್ತೀನಿ ಅಂತ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮೈಸೂರಿನಲ್ಲಿ ಹೇಳಿದ್ದಾರೆ’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ. ಬೇಲೂರಲ್ಲಿ ಶಾಸಕ ಸುರೇಶ್ ಅವರ ಸ್ವಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

 ಬೇಲೂರು :  ‘ಲೋಕಸಭೆ ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಅವರನ್ನು ಇಳಿಸ್ತೀನಿ ಅಂತ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮೈಸೂರಿನಲ್ಲಿ ಹೇಳಿದ್ದಾರೆ’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ.

ಬೇಲೂರಿನಲ್ಲಿ ಶಾಸಕ ಸುರೇಶ್ ಅವರ ಸ್ವಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಚುನಾವಣೆ ಮುಗಿದ ತಕ್ಷಣ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಅವರೇ ಸ್ವಷ್ಟಪಡಿಸಿದ್ದಾರೆ. ಹೀಗಾದರೆ ಇವರ ಸರ್ಕಾರವೇ ಇರಲ್ಲ. ಇನ್ನೂ ಗ್ಯಾರಂಟಿ ಎಲ್ಲಿ ಇರುತ್ತೆ, ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಏಕೆ ಸೋತರು, ಬಾದಾಮಿಯಲ್ಲಿ ಎಷ್ಟು ಲೀಡ್ ಬಂತು ಎಂದು ಅವರು ಉತ್ತರ ಹೇಳಲಿ, ಮೊದಲು ಅವರ ರಾಹುಲ್‌ ಗಾಂಧಿ ಅವರನ್ನು ಗೆಲ್ಲಿಸಿಕೊಳ್ಳಲಾಗದೇ ಉತ್ತರ ಭಾರತ ಬಿಟ್ಟು ಕೇರಳಕ್ಕೆ ಬಂದು ಸ್ಪರ್ಧಿಸಿದ್ದಾರೆ’ ಎಂದು ಅಣಕವಾಡಿದರು.

‘ಜೆಡಿಎಸ್, ಬೆಂಗಳೂರು ಗ್ರಾಮಾಂತರ ಸೇರಿದಂತೆ ಡಾ.ಮಂಜುನಾಥ್ ಅವರೂ ಸಹ ಗೆಲ್ಲಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರೇನು ಜ್ಯೋತಿಷ್ಯ ಪ್ರವೀಣನಾ? ಕೇರಳಕ್ಕೆ ಹೋಗಿದ್ದಾಗ ಜ್ಯೋತಿಷ್ಯ ಹೇಳುವುದನ್ನು ಕಲಿತಿರಬಹುದು. ನಾವು ಜಿಲ್ಲೆಯ ಜನರ ಸೇವೆ ಮಾಡಿದ್ದೇವೆ. ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರಕ್ಕೆ ಮೊದಲೇ ಬಂದಿದ್ದರೆ ಕಾಂಗ್ರೆಸ್ ಅಭ್ಯರ್ಥಿಗೆ ಇನ್ನೂ ಹೆಚ್ಚು ಮತ ಬರುತ್ತಿತ್ತು ಎಂದಿದ್ದಾರೆ. ಈಗ ಸಿದ್ದರಾಮಯ್ಯ ಬಂದು ಹೋಗಿದ್ದು ಹೊಳೆನರಸೀಪುರದ ಜನ ಏನು ತೀರ್ಪು ಕೊಡುತ್ತಾರೆಂದು ಅವರಿಗೆ ಜೂ.4 ಕ್ಕೆ ಗೊತ್ತಾಗುತ್ತದೆ. ಜಿಲ್ಲೆಯ ಜನರ ಋಣ ನಮ್ಮ ಮೇಲಿದೆ ಅದನ್ನು ತೀರಿಸಬೇಕು’ದೆಂದು ಹೇಳಿದರು.

ಶಾಸಕ ಹುಲ್ಲಳ್ಳಿ ಸುರೇಶ್ ಮಾತನಾಡಿ, ‘ಇಡೀ ಜಿಲ್ಲೆ ಮೋದಿ ಪರವಾಗಿದೆ. ೪೯೦೦ ಕೋಟಿ ರುಗಳಲ್ಲಿ ಮೋದಿಯವರು ಮನೆ ಮನೆಗೆ ಗಂಗೆ ಎಂಬ ಯೋಜನೆ ತಂದಿದ್ದಾರೆ. ಕೆಂದ್ರ ಸರ್ಕಾರದ ಅನುಷ್ಠಾನಕ್ಕೆ ತಂದ ಯೋಜನೆಗಳು ಹಲವಾರಿದೆ. ಹಾಸನ ಲೋಕಸಭಾ ಕ್ಷೇತ್ರ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರು ೨ ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ’ ಎಂದು ಹೇಳಿದರು.

ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ. ರಾಜ್ಯ ಸರ್ಕಾರ ಕರ್ತವ್ಯ ಬಿಟ್ಟು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರು ದಾರಿತಪ್ಪಿಸುವ ಕೆಲಸ ಮಾಡುತ್ತ ಇದ್ದಾರೆ. ಜವಾಬ್ದಾರಿ ನುಣಚಿಕೊಳ್ಳಲು ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇದೇ ೨೨ ರಂದು ಹಳೇಬೀಡಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬರುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಡಿಎ ಕಾರ್ಯಕರ್ತರು ಆಗಮಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ.ಅನಂತ ಸುಬ್ಬರಾಯ್, ಎಂ.ಎ.ನಾಗರಾಜ್, ನಾಗೇಶ್ ಯಾದವ್, ಇತರರು ಹಾಜರಿದ್ದರು.

ಬೇಲೂರಿನ ಶಾಸಕ ಸುರೇಶ್ ಅವರ ಸ್ವಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿದರು.