ಹತ್ತು ಕೆಜಿ ಅಲ್ಲ, ಹತ್ತು ಕಾಳು ಅಕ್ಕಿ ಕೊಟ್ಟಿಲ್ಲ

| Published : Jan 25 2024, 02:03 AM IST

ಹತ್ತು ಕೆಜಿ ಅಲ್ಲ, ಹತ್ತು ಕಾಳು ಅಕ್ಕಿ ಕೊಟ್ಟಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಿಎಂ ಬೊಮ್ಮಾಯಿ ಅವರು ತಮ್ಮ ಕೊನೆಯ ಬಜೆಟ್ಟಿನಲ್ಲಿ ರೈತರಿಗಾಗಿ ₹ 7500 ಕೋಟಿ ಘೋಷಿಸಿದ್ದರು. ಸಿದ್ದರಾಮಯ್ಯ ಸರ್ಕಾರ ತಮ್ಮ ಬಜೆಟ್ ನಲ್ಲಿ ₹ 3500 ಕೋಟಿ ಮಾತ್ರ ಮೀಸಲಿಟ್ಟು, ರೈತರಿಗೆ ಅನ್ಯಾಯ ಮಾಡಿದ್ದಾರೆ

ಗದಗ: ಚುನಾವಣೆ ಪೂರ್ವದಲ್ಲಿ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು 6 ತಿಂಗಳು ಗತಿಸಿದರೂ 10 ಕಾಳು ಅಕ್ಕಿ ಕೊಟ್ಟಿಲ್ಲ, ಬದಲಾಗಿ ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಹಣವನ್ನು ಮರಳಿ ಪಡೆದು ಇನ್ನೊಂದು ಸಮುದಾಯಕ್ಕೆ ₹10 ಸಾವಿರ ಕೋಟಿ ಕೊಡುತ್ತೇನೆ ಎಂದು ತುಷ್ಟೀಕರಣ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಆರೋಪಿಸಿದರು.

ಬುಧವಾರ ಬಿಜೆಪಿ ನೂತನ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಇದೊಂದು ಜನ ವಿರೋಧಿ ಸರ್ಕಾರ. ಸಚಿವರೋರ್ವರು ದುಡ್ಡಿನ ಆಮಿಷಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ಹಾಗಾದರೆ 750 ಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಇವರಿಗೆ ಹುಡುಗಾಟಿಕೆಯಾಗಿದೆಯೇ? ಎಂದು ಪ್ರಶ್ನಿಸಿದರು.

ಮಾನವ ಬಂಧುತ್ವ ವೇದಿಕೆ ಮೂಲಕ ತತ್ವ ಸಿದ್ಧಾಂತ ಹೇಳುವ ಸಚಿವ ಸತೀಶ ಜಾರಕಿಹೊಳಿ ಕ್ಷೇತ್ರದಲ್ಲಿಯೇ ದಲಿತ ಮಹಿಳೆ ವಿವಸ್ತ್ರಗೊಳಿಸಿದ್ದು, ದೇಶವೇ ತಲೆತಗ್ಗಿಸುವ ಘಟನೆಯಾಗಿದೆ. ಮಾಜಿ ಸಿಎಂ ಬೊಮ್ಮಾಯಿ ಅವರು ತಮ್ಮ ಕೊನೆಯ ಬಜೆಟ್ಟಿನಲ್ಲಿ ರೈತರಿಗಾಗಿ ₹ 7500 ಕೋಟಿ ಘೋಷಿಸಿದ್ದರು. ಸಿದ್ದರಾಮಯ್ಯ ಸರ್ಕಾರ ತಮ್ಮ ಬಜೆಟ್ ನಲ್ಲಿ ₹ 3500 ಕೋಟಿ ಮಾತ್ರ ಮೀಸಲಿಟ್ಟು, ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರದ ಅಧಿಕಾರವಧಿಯಲ್ಲಿ ದೇಶದಲ್ಲಿ ಲಸಿಕೆಗಳ ಸಂಶೋಧನೆ ನಡೆಯಲಿಲ್ಲ. ವಿದೇಶದಲ್ಲಿ ಸಂಶೋಧನೆ ಆಗಿರುವ ಲಸಿಕೆಗಳನ್ನು ಹತ್ತಾರು ವರ್ಷಗಳ ನಂತರ ಭಾರತ ಸರ್ಕಾರ ಖರೀದಿ ಮಾಡುತ್ತಿತ್ತು. ಆದರೆ ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಲಸಿಕೆಗಳ ಸಂಶೋಧನೆ ನಮ್ಮಲ್ಲೇ ನಡೆಯುತ್ತಿವೆ. ಕೋವಿಡ್ ಕಾಲದಲ್ಲಿ ಲಸಿಕೆ ಸಂಶೋಧಿಸಿ 80ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಸಿದ ಕೀರ್ತಿಗೆ ಭಾರತ ಪಾತ್ರವಾಗಿದೆ. ಜಗತ್ತಿನಲ್ಲಿ ಹಲವು ದೇಶಗಳು ದಿವಾಳಿತನ ಅನುಭವಿಸುತ್ತಿವೆ. ಭಾರತ ಆರ್ಥಿಕತೆಯಲ್ಲಿ ಮುನ್ನುಗುತ್ತಿದೆ. ಇದು ಮೋದಿ ಮತ್ತು ಭಾರತದ ತಾಕತ್ತು ಎಂದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ನೂತನ ಅಧ್ಯಕ್ಷ ರಾಜು ಕುರಡಗಿ ಸೌಮ್ಯ ಸ್ವಭಾವದ ವ್ಯಕ್ತಿ. ಜಿಲ್ಲಾಧ್ಯಕ್ಷ ಸ್ಥಾನ ನಿಭಾಯಿಸುವ ಶಕ್ತಿ ಅವರಲ್ಲಿದೆ. ಪಕ್ಷದ ನಿರ್ಧಾರ ಸೂಕ್ತವಾಗಿದೆ. ಸಂಸದ ಶಿವಕುಮಾರ್ ಉದಾಸಿ ಚುನಾವಣೆ ಪೂರ್ವದಲ್ಲಿ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಟಿಕೆಟ್ ಸಿಗದ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸುವ ಸ್ಥಿತಿ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಅದೇನೆ ಇರಲಿ ನಮ್ಮ ಅಭ್ಯರ್ಥಿ ಕಮಲ ಎಂದು ಚುನಾವಣೆ ಎದುರಿಸಬೇಕು ಎಂದರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಜಿಪಂ, ತಾಪಂ, ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸೋಣ, ರಾಜ್ಯಾಧ್ಯಕ್ಷ ಬದಲಾವಣೆ ನಂತರ ಹುರುಪು ಮೂಡಿದೆ ಎಂದರು.

ವಿಪ ಸದಸ್ಯ ಎಸ್.ವಿ. ಸಂಕನೂರ ನೂತನ ಅಧ್ಯಕ್ಷರಿಗೆ ಸಾಕಷ್ಟು ಸವಾಲುಗಳಿದ್ದು, ಅದನ್ನು ಸಮರ್ಥವಾಗಿ ಎದುರಿಸಬೇಕು. ಎಲ್ಲರೂ ಸೇರಿ ಗದಗ ಕಾಂಗ್ರೆಸ್ ಮುಕ್ತ ಜಿಲ್ಲೆ ಮಾಡಬೇಕಿದೆ ಎಂದರು.

ಕಳಕಪ್ಪ ಬಂಡಿ ಮಾತನಾಡಿದರು. ನೂತನ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಅಧಿಕಾರ ವಹಿಸಿಕೊಂಡು ಮಾತನಾಡಿ, ಪಕ್ಷ ಮತ್ತು ಜಿಲ್ಲೆಯ ನಾಯಕರ ಸಹಕಾರ ನೀಡಬೇಕು ಎಂದರು.

ಸಿದ್ರಾಮಪ್ಪ ಮೊರಬದ ನಿರೂಪಿಸಿದರು. ಹಿಂದಿನ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಸುನಂದಾ ಬಾಕಳೆ, ಶ್ರೀಪತಿ ಉಡುಪಿ, ಹೇಮಗೀರಿಶ ಹಾವನಾಳ, ಲಿಂಗರಾಜಗೌಡ ಪಾಟೀಲ ಸೇರಿದಂತೆ ಇತರರು ಹಾಜರಿದ್ದರು.

ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ ಮೋದಿ ಅವರಂತ ನಾಯಕರಿಲ್ಲ, ನಾವು ಕೂಡ ಮೋದಿಯನ್ನು ಗೆಲ್ಲಿಸುತ್ತೇವೆ ಎಂದು. ಇದು ನಮ್ಮನ್ನು ದಾರಿತಪ್ಪಿಸುವ ಕೆಲಸವಾಗಿದೆ.‌ ಕಾಂಗ್ರೆಸ್ ಕುತಂತ್ರ ನಂಬಿ ಮನೆಯಲ್ಲಿ ಕುಳಿತರೆ ಮೋದಿ ಅವರಂತ ನಾಯಕತ್ವ ಕಳೆದುಕೊಳ್ಳುತ್ತೇವೆ. ಎಚ್ಚರ ವಹಿಸಿ, ನಿರ್ಲಕ್ಷ್ಯ ಮಾಡಬೇಡಿ. ಸದ್ಯದಲ್ಲಿಯೇ ಲೋಕಸಭಾ ಚುನಾವಣೆ ನಡೆಯಲಿದೆ. ಕಾರ್ಯಕರ್ತರು ವಿಶ್ರಮಿಸದೇ ಮೋದಿ ಅವರನ್ನು ಅಧಿಕಾರಕ್ಕೆ ತರಬೇಕು ಇಲ್ಲವಾದಲ್ಲಿ ನಮ್ಮ ದೇಶ ಮತ್ತೆ 30 ವರ್ಷ ಹಿಂದಕ್ಕೆ ಹೋಗುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಹೇಳಿದ್ದಾರೆ.