ಯಾರನ್ನೋ ಸೋಲಿಸಲಲ್ಲ, ನಾನು ಗೆಲ್ಲಲು ಸ್ಪರ್ಧೆ: ವಿನಯ್‌ಕುಮಾರ

| Published : Mar 29 2024, 12:49 AM IST

ಯಾರನ್ನೋ ಸೋಲಿಸಲಲ್ಲ, ನಾನು ಗೆಲ್ಲಲು ಸ್ಪರ್ಧೆ: ವಿನಯ್‌ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕೀಯ ಮಾಡಲೆಂದೇ ನಾನು ಬಂದವನಲ್ಲ. ಕ್ಷೇತ್ರದಲ್ಲಿ ಬದಲಾವಣೆ ತರುವ ಸದುದ್ದೇಶದಿಂದ ರಾಜಕೀಯಕ್ಕೆ ಬಂದವನು. ಸ್ವತಃ ಕಾಂಗ್ರೆಸ್ ವರಿಷ್ಠರೇ ದಾವಣಗೆರೆ ಅಭ್ಯರ್ಥಿ ಎಂದು ನನ್ನನ್ನು ಕರೆಯುತ್ತಿದ್ದರೂ, ಕಡೇ ಘಳಿಗೆಯಲ್ಲಿ ನನ್ನ ಹೆಸರನ್ನು ಬದಲಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್‌ನ ಔಟ್‌ ರೀಚ್‌ನ ರಾಜ್ಯ ಉಪಾಧ್ಯಕ್ಷ ಜಿ.ಬಿ.ವಿನಯಕುಮಾರ ದಾವಣಗೆರೆಯಲ್ಲಿ ಬೇಸರ ಹೊರಹಾಕಿದರು.

- ದಾವಣಗೆರೆ ತಾಲೂಕು ಕಕ್ಕರಗೊಳ್ಳದವನು ನಾನು, ಇಲ್ಲೇ ನನ್ನ ಬೇರುಗಳಿವೆ - ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಂಚರಿಸಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜಕೀಯ ಮಾಡಲೆಂದೇ ನಾನು ಬಂದವನಲ್ಲ. ಕ್ಷೇತ್ರದಲ್ಲಿ ಬದಲಾವಣೆ ತರುವ ಸದುದ್ದೇಶದಿಂದ ರಾಜಕೀಯಕ್ಕೆ ಬಂದವನು. ಸ್ವತಃ ಕಾಂಗ್ರೆಸ್ ವರಿಷ್ಠರೇ ದಾವಣಗೆರೆ ಅಭ್ಯರ್ಥಿ ಎಂದು ನನ್ನನ್ನು ಕರೆಯುತ್ತಿದ್ದರೂ, ಕಡೇ ಘಳಿಗೆಯಲ್ಲಿ ನನ್ನ ಹೆಸರನ್ನು ಬದಲಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್‌ನ ಔಟ್‌ ರೀಚ್‌ನ ರಾಜ್ಯ ಉಪಾಧ್ಯಕ್ಷ ಜಿ.ಬಿ.ವಿನಯಕುಮಾರ ಬೇಸರ ಹೊರಹಾಕಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನಗೆ ಒಂದು ಸಲ ಅವಕಾಶ ಕೊಡಿ. ಇಡೀ ಕ್ಷೇತ್ರವನ್ನೇ ಅಭಿವೃದ್ಧಿಪಡಿಸಿ, ತೋರಿಸುತ್ತೇನೆ. ಸದ್ಯಕ್ಕೆ ತಮಗೆ ಟಿಕೆಟ್ ತಪ್ಪಿದ್ದು, ಇನ್ನೂ ಐದಾರು ದಿನದಲ್ಲಿ ಹರಪನಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಂಚರಿಸಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಪಕ್ಷೇತರನಾಗಿ ನಿಂತು ಗೆಲ್ಲಬಲ್ಲೆ ಎಂಬ ವಿಶ್ವಾಸ ಬಂದರೆ ಮಾತ್ರ ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣೆಗೆ ಸ್ಪರ್ಧಿಸುತ್ತೇನೆ. ದಾವಣಗೆರೆಯಲ್ಲಿ ಪ್ರಬಲವಾಗಿರುವ ಕುಟುಂಬಕ್ಕೆ ಪರ್ಯಾಯವಾಗಿ ಬೇರೊಬ್ಬರು ಬೆಳೆಯುತ್ತಾರೆಂಬ ಭಯದಲ್ಲಿ ಕೆಲವರಿದ್ದಾರೆ. ನನ್ನ ಬೆಳವಣಿಗೆ ಸಹಿಸದೇ, ದೂರವಿಡುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.

ಇಡೀ ಕ್ಷೇತ್ರದಲ್ಲಿ ಸುಮಾರು 700 ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಹಾಲಿ ಸಂಸದರಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಗ್ರಾಮಾಂತರ ಪ್ರದೇಶಕ್ಕೆ ಭೇಟಿ ನೀಡಿ, ಸಮಸ್ಯೆಗಳ ಆಲಿಸಿಲ್ಲ. ದಾವಣಗೆರೆ ಕ್ಷೇತ್ರದಲ್ಲಿ ಶೇ.80ರಷ್ಟು ಜನರ ಒಲವು ನನ್ನ ಪರವಾಗಿದೆ. ಇದನ್ನೆಲ್ಲಾ ಪರಿಗಣಿಸಿ, ಕಾಂಗ್ರೆಸ್ ನನಗೆ ಟಿಕೆಟ್ ನೀಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ನಾನು ದಾವಣಗೆರೆಯವನಲ್ಲ. ಅದಕ್ಕಾಗಿಯೇ ಟಿಕೆಟ್ ತಪ್ಪಿಸಿದ್ದೇನೆಂದು ಹೇಳುತ್ತಿದ್ದಾರೆ. ನಾನು ದಾವಣಗೆರೆಯವರೇ. ಇದೇ ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಹುಟ್ಟಿ, ಬೆಳೆದವನು ನಾನು. ನನ್ನ ಬೇರುಗಳು ಇಲ್ಲಿಯೇ ಇವೆ. ನಾನು ಅತ್ಯಲ್ಪ ಅವಧಿಯಲ್ಲೇ ರಾಜಕೀಯದಲ್ಲಿ ಪ್ರಚಲಿಚತ ಆಗಿದ್ದೇನೆಂದರೆ, ಅದು ಕೇವಲ ನನ್ನ ಶ್ರಮದಿಂದಲೇ ಹೊರತು, ಬೇರೆ ಏನಲ್ಲ. ಪಕ್ಷದ ವರಿಷ್ಠರು ನನಗೊಂದು ಅವಕಾಶ ಕೊಟ್ಟು ನೋಡಲಿ ಎಂದು ಜಿ.ಬಿ.ವಿನಯಕುಮಾರ ಪುನರುಚ್ಚರಿಸಿದರು.

ಮುಖಂಡರಾದ ದಳವಾಯಿ ಹೇಮಂತ್, ಜಿ.ರಂಗಸ್ವಾಮಿ, ಎಚ್.ಸಿ.ಮಲ್ಲಪ್ಪ, ಶರತಕುಮಾರ, ರವಿಕುಮಾರ, ಪುರಂದರ ಲೋಕಿಕೆರೆ, ಕೆ.ಎಚ್‌.ಮಂಜುನಾಥ ಇತರರು ಇದ್ದರು.

- - - -28ಕೆಡಿವಿಜಿ61:

ದಾವಣಗೆರೆಯಲ್ಲಿ ಕಾಂಗ್ರೆಸ್ ಔಟ್ ರೀಚ್‌ ರಾಜ್ಯ ಉಪಾಧ್ಯಕ್ಷ ಜಿ.ಬಿ.ವಿನಯಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.