ನಾವಲ್ಲ, ಕಾರ್ಯಕರ್ತರು ಗಿಫ್ಟ್ ಕೊಟ್ಟಿರಬಹುದು

| Published : Feb 25 2024, 01:46 AM IST

ನಾವಲ್ಲ, ಕಾರ್ಯಕರ್ತರು ಗಿಫ್ಟ್ ಕೊಟ್ಟಿರಬಹುದು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ನಾವ್ಯಾರು ಗಿಫ್ಟ್ ಬಾಕ್ಸ್ ಗಳನ್ನು ಕೊಡುತ್ತಿಲ್ಲ. ಪಕ್ಷದ ಕಾರ್ಯಕರ್ತರು ತಮ್ಮ ಖುಷಿಗಾಗಿ ಗಿಫ್ಟ್ ಗಳನ್ನು ಕೊಡುತ್ತಿರಬಹುದು ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದರು.

ರಾಮನಗರ: ನಾವ್ಯಾರು ಗಿಫ್ಟ್ ಬಾಕ್ಸ್ ಗಳನ್ನು ಕೊಡುತ್ತಿಲ್ಲ. ಪಕ್ಷದ ಕಾರ್ಯಕರ್ತರು ತಮ್ಮ ಖುಷಿಗಾಗಿ ಗಿಫ್ಟ್ ಗಳನ್ನು ಕೊಡುತ್ತಿರಬಹುದು ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದರು.

ತಾಲೂಕಿನ ಕಾಳೇಗೌಡನದೊಡ್ಡಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಇಕ್ಬಾಲ್ ಹುಸೇನ್ ಅವರಿಗೆ ಸುದ್ದಿಗಾರರು ಮತದಾರರಿಗೆ ಗಿಫ್ಟ್ ಬಾಕ್ಸ್ ಹಂಚುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಗಿಫ್ಟ್ ಬಾಕ್ಸ್ ಗಳ ಹಂಚುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಕಾರ್ಯಕರ್ತರು ತಮ್ಮ ಖುಷಿಗಾಗಿ ಏನಾದರು ಕೊಡುತ್ತಿರಬೇಕು ಎಂದರು.

ಬೇರೆ ಪಕ್ಷದವರು ಯಾರೂ ಕೊಡುತ್ತಿಲ್ಲವೇ, ಕೊಡಬಾರದೆಂದು ಏನಾದರು ಇದೆಯಾ. ಚುನಾವಣೆ ಬರುತ್ತವೆ ಹೋಗುತ್ತವೆ. ಡೇರಿ, ವಿಎಸ್ಎಸ್ಎನ್ ಚುನಾವಣೆ ನಡೆಯುತ್ತವೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ ನಡೆಯಿತು. ಎಲ್ಲ ಚುನಾವಣೆಗಳಿಗೂ ಗಿಫ್ಟ್ ಕೊಡುತ್ತಾರಾ, ಕೊಡಲು ಸಾಧ್ಯವೇ. ಹಬ್ಬ ಹುಣ್ಣಿಮೆ, ಗಣೇಶ, ರಾಮನ ಹೆಸರಿನಲ್ಲಿ ಗಿಫ್ಟ್ ಕೊಡುತ್ತಾರೆ. ಬಿಜೆಪಿಯವರು ಮೊದಲು ಕೆಲಸ ಮಾಡಲಿ ಹೇಳಿ ಎಂದು ತಿರುಗೇಟು ನೀಡಿದರು.

ಕಸಬಾ ಹೋಬಳಿ ಭಾಗದ ಕೆರೆಕಟ್ಟೆಗಳನ್ನು ತುಂಬಿಸಲು ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆಗೆ 14 ವರ್ಷಗಳಿಂದಲೂ ಬೇಡಿಕೆ ಇತ್ತು. ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದ ಅವಧಿಯಿಂದಲೂ ರೈತರು ಬೇಡಿಕೆ ಇಡುತ್ತಲೇ ಬಂದಿದ್ದರು. ಸಂಸದ ಡಿ.ಕೆ.ಸುರೇಶ್ ರವರ ಪರಿಶ್ರಮ, ಹೋರಾಟದಿಂದಾಗಿ ಸುಮಾರು 28 ಕೋಟಿ ರು.ವೆಚ್ಚದಲ್ಲಿ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಮೂರು ನಾಲ್ಕು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಅರ್ಕಾವತಿ ನದಿಯಿಂದ 11.4 ಕಿ.ಮೀ ದೂರ ಸ್ಟೀಲ್ ಪೈಪ್ ಲೈನ್ ಕಾಮಗಾರಿ ನಡೆಯಲಿದೆ. ಕಾಳೇಗೌಡನದೊಡ್ಡಿ, ಬಿಳಗುಂಬ, ಅರೆಹಳ್ಳಿ, ಕೂನಮುದ್ದನಹಳ್ಳಿ, ಪಾದರಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕೆರೆಗಳಿಗೆ ಏತನೀರಾವರಿ ಮೂಲಕ ನೀರು ಹರಿಸಲಾಗುವುದು. ರೈತರಿಗೆ ಅನುಕೂಲವಾಗುವ ಇಂತಹ ಜನೋಪಯೋಗಿ ಕಾರ್ಯಗಳ ಮೂಲಕ ನಾವು ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಗ್ಯಾರಂಟಿಗಳ ನಡುವೆಯೂ ರಾಮನಗರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಸಿಗುತ್ತಿದೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆ ಅನುದಾನದಿಂದಲೇ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿದ್ದೇವೆ. ಈ ಕಾರ್ಯಗಳು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಯಾರು ಗಮನ ಹರಿಸಲಿಲ್ಲ ಎಂಬುದು ಜನರಿಗೂ ಗೊತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಈಗಾಗಲೇ ರಾಮನಗರ ಕ್ಷೇತ್ರಕ್ಕೆ ನಿರೀಕ್ಷೆಗೂ ಮೀರಿ ಸಾಕಷ್ಟು ಅನುದಾನ ಬಂದಿದೆ. ರಾಮನಗರ ಟೌನ್, ಕಸಬಾ, ಕೈಲಾಂಚ ಹೋಬಳಿಗಳಿಗೆ ಸುಮಾರು 700 ಕೋಟಿ, ಹಾರೋಹಳ್ಳಿ - ಮರಳವಾಡಿಯಲ್ಲಿ ಕುಡಿಯುವ ನೀರಿಗೆ 300 ಕೋಟಿ, ಟೌನಿನಲ್ಲಿ ಚರಂಡಿ, ರಸ್ತೆಗೆ 82 ಕೋಟಿ, ಅರ್ಕಾವತಿ ದಡದಲ್ಲಿ ವಾಕಿಂಗ್ ಪಾಥ್ ನಿರ್ಮಾಣಕ್ಕೆ 157 ಕೋಟಿ, ಯುಜಿಡಿ ಕಾರ್ಯಕ್ಕೆ 22 ಕೋಟಿ ರು. ಅನುದಾನ ಬಂದಿದೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶೇಷ ಅನುದಾನ ಕೊಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

ಬೇಸಿಗೆ ಹೆಚ್ಚುತ್ತಿರುವ ಕಾರಣ ಕುಡಿಯುವ ನೀರು ಹಾಗೂ ಮೇವಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ತಾಪಂ ಇಒಗಳಿಗೆ ಸೂಚನೆ ನೀಡಿದ್ದೇವೆ. ಕುಡಿಯುವ ನೀರು ಮತ್ತು ಮೇವು ಪೂರೈಸಲು ಹಣಕಾಸಿನ ಕೊರತೆ ಇಲ್ಲ. ಈ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರದಲ್ಲಿಯೇ ಸಹಾಯವಾಣಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ರಾಮನಗರ ಟೌನ್‌ನಲ್ಲಿ 8 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಈಗ ಸಂಸದ ಡಿ.ಕೆ.ಸುರೇಶ್ ರವರ ಸೂಚನೆ ಮೇರೆಗ 22 ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ನಗರ ವ್ಯಾಪ್ತಿಯಲ್ಲಿ 20 ಬೋರ್ ವೆಲ್ ಗಳನ್ನು ಕೊರೆಸಲಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಜಿ ಶಾಸಕ ಕೆ.ರಾಜು, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಹರೀಸಂದ್ರ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷ ಕೆ.ಎನ್ .ವೀರಭದ್ರಸ್ವಾಮಿ, ಸುಗ್ಗನಹಳ್ಳಿ ಗ್ರಾಪಂ ಅಧ್ಯಕ್ಷೆ ಅರ್ಪಿತಾ, ಉಪಾಧ್ಯಕ್ಷ ಚಿಕ್ಕಸ್ವಾಮಿ, ಮುಖಂಡರಾದ ದೊಡ್ಡವೀರಯ್ಯ, ಚಂದ್ರಶೇಖರ್ , ರವಿ, ಮಂಚೇಗೌಡ, ಪುಟ್ಟಣ್ಣ, ಮಹದೇವು, ಎ.ಬಿ.ಚೇತನ್ ಕುಮಾರ್, ಗುರುಪ್ರಸಾದ್, ಪುನೀತ್ , ಬೈರೇಗೌಡ, ಉಮೇಶ್ , ಕಗ್ಗಲಯ್ಯ ಮತ್ತಿತರರು ಹಾಜರಿದ್ದರು.

24ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ಕ್ಷೇತ್ರ ವ್ಯಾಪ್ತಿಯ ಕಾಳೇಗೌಡನದೊಡ್ಡಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿಪೂಜೆ ನೆರವೇರಿಸಿದರು.