ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ: ರಾಘವೇಶ್ವರ ಸ್ವಾಮೀಜಿ

| Published : Aug 08 2024, 01:44 AM IST

ಸಾರಾಂಶ

ಯಮಯಾತನೆಯಿಂದ ಮುಕ್ತಿ ಪಡೆಯಲು ದಾನವೊಂದೇ ಮಾರ್ಗ. ಜೀವನದಲ್ಲಿ ದಾನ ಮಾಡಿದವನು ಯಮನ ಕೃಪೆಗೂ ಪಾತ್ರನಾಗುತ್ತಾನೆ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.

ಗೋಕರ್ಣ: ಸೃಷ್ಟಿಯಲ್ಲಿ ಶಾಶ್ವತ ಯಾವುದೂ ಅಲ್ಲ, ಸೃಷ್ಟಿ ಅದಕ್ಕೆ ಅವಕಾಶ ನೀಡುವುದಿಲ್ಲ. ಸ್ವತಃ ದೇವರೇ ಅವತಾರವೆತ್ತಿ ಬಂದರೂ ಅಂತ್ಯ ಇರುತ್ತದೆ. ಅಂತೆಯೇ ಯಾವುದೂ ಮೂಲಸ್ವರೂಪದಲ್ಲಿ ಉಳಿಯುವುದಿಲ್ಲ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 18ನೇ ದಿನವಾದ ಬುಧವಾರ ಜೀವಯಾನ ಮಾಲಿಕೆಯಲ್ಲಿ ಯಮನನ್ನು ಗೆದ್ದವರುಂಟೇ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದರು.ಯಮಯಾತನೆಯಿಂದ ಮುಕ್ತಿ ಪಡೆಯಲು ದಾನವೊಂದೇ ಮಾರ್ಗ. ಜೀವನದಲ್ಲಿ ದಾನ ಮಾಡಿದವನು ಯಮನ ಕೃಪೆಗೂ ಪಾತ್ರನಾಗುತ್ತಾನೆ. ಜೀವಯಾನ ಎನ್ನುವುದು ಕಾಲಕ್ಕೆ ಅನುಗುಣವಾಗಿ ನಡೆಯುತ್ತಾರೆ. ಪುಣ್ಯಾತ್ಮರು ಕಾಲವನ್ನು ದಾಟಿ ಮುನ್ನಡೆಯುತ್ತಾರೆ. ಜೀವಗಳ ದುರವಸ್ಥೆ ಬಗ್ಗೆ ಒಂದನೇ ಮಾಲಿಕೆಯಲ್ಲಿ ಪ್ರವಚನ ನೀಡಲಾಗಿತ್ತು. ಪ್ರತಿಯೊಬ್ಬರೂ ಯಮನ ಕೈವಶ. ಆದರೆ ಯಮನೊಂದಿಗೆ ಹೋರಾಡಿ ಗೆದ್ದ ಮಹಾತ್ಮರ ಕಥಾ ಸರಣಿ ಈ ಪ್ರವಚನ ಮಾಲಿಕೆಯಲ್ಲಿ ಪ್ರವಚನ ನೀಡಲಾಗುತ್ತಿದೆ ಎಂದರು.ಎಲ್ಲರೂ ಕಾಲವಶವೇ ಸರಿ. ಶ್ರೀರಾಮ, ಪಾಂಡವರು, ಶ್ರೀಕೃಷ್ಣ, ಬಲಿ ಚಕ್ರವರ್ತಿ, ನಳ, ರಾವಣನಂಥವರು ಕೂಡಾ ಕಾಲನ ಕಾರಣದಿಂದ ಸಂಕಷ್ಟ ಎದುರಿಸಬೇಕಾಯಿತು. ಯಮನಿಗೆ ತುತ್ತಾಗದವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದರು.ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಮಾತೃ ಪ್ರಧಾನರಾದ ವೀಣಾ ಗೋಪಾಲಕೃಷ್ಣ ಪುಳು, ಯುವ ಪ್ರಧಾನ ಕೇಶವ ಪ್ರಕಾಶ್ ಮುಣ್ಚಿಕಾನ, ವಿವಿವಿ ಕೇಂದ್ರೀಯ ಸಮಿತಿ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಚಾತುರ್ಮಾಸ್ಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಮೋಹನ ಭಟ್ ಹರಿಹರ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ಮುರೂರು, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ. ಹೆಗಡೆ ಹೊಸಾಕುಳಿ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಮುಖ್ಯಸ್ಥರಾದ ನರಸಿಂಹ ಭಟ್ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಭಟ್ ಸೂರಿ ನಿರೂಪಿಸಿದರು.