ಏನಿಲ್ಲಾ ಏನಿಲ್ಲಾ... ಬಜೆಟ್‌ನಲ್ಲಿ ಏನಿಲ್ಲಾ: ಬಿಜೆಪಿ ಪ್ರತಿಭಟನೆ

| Published : Feb 17 2024, 01:20 AM IST / Updated: Feb 17 2024, 12:40 PM IST

BJP PROTEST Karnataka

ಸಾರಾಂಶ

ಬಜೆಟ್‌ನಲ್ಲಿ ಏನಿಲ್ಲಾ ಎಂದು ಬಿಜೆಪಿ-ಜೆಡಿಎಸ್‌ ಪಕ್ಷಗಳ ಸದಸ್ಯರು ಟೀಕೆ ಮಾಡಿ, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು 

‘ಏನಿಲ್ಲ... ಏನಿಲ್ಲ... ಬಜೆಟ್‌ನಲ್ಲಿ ಏನಿಲ್ಲ...’ ಇತ್ತೀಚೆಗೆ ವೈರಲ್‌ ಆಗಿರುವ ಸಿನಿಮಾದ ಹಾಡಿಗೆ ಬಜೆಟ್‌ ಹೋಲಿಕೆ ಮಾಡಿ ಬಿಜೆಪಿ-ಜೆಡಿಎಸ್‌ ಪಕ್ಷಗಳ ಸದಸ್ಯರು ಟೀಕೆ ಮಾಡಿದ ಪರಿ ಇದು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಓದಲು ಆರಂಭಿಸಿದ ಕೆಲವೇ ನಿಮಿಷದಲ್ಲಿ ಕೇಂದ್ರದಿಂದ ಬರಬೇಕಿರುವ ಅನುದಾನದ ಕುರಿತ ಪ್ರಸ್ತಾಪಿಸುತ್ತಿದ್ದಂತೆ ಬಿಜೆಪಿ-ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿದವು. 

ಈ ವೇಳೆ ‘ಏನಿಲ್ಲ... ಏನಿಲ್ಲ... ಬಜೆಟ್‌ನಲ್ಲಿ ಏನಿಲ್ಲ... ಹಾದಿ ತಪ್ಪಿದ ಹಣಕಾಸು ಸ್ಥಿತಿ, ಹಳಿ ತಪ್ಪಿದ ಬಜೆಟ್‌’ ಎಂದು ಕಿಡಿಕಾರಿ ಸಭಾತ್ಯಾಗ ಮಾಡಿದರು. 

ಬಳಿಕ ಸದನದ ಪ್ರವೇಶದ ದ್ವಾರಕ್ಕೆ ಆಗಮಿಸಿ ಬಿತ್ತಿಪತ್ರಗಳನ್ನು ಹಿಡಿದು ಸರ್ಕಾರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು. ನಂತರ ಜಂಟಿಯಾಗಿ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಬಳಿ ತೆರಳಿದ ಉಭಯ ಪಕ್ಷಗಳ ಮುಖಂಡರು ಧರಣಿ ನಡೆಸಿದರು. 

ಸುಳ್ಳುರಾಮಯ್ಯನ ಬೋಗಸ್‌ ಬಜೆಟ್‌, ಏನಿಲ್ಲ.. ಏನಿಲ್ಲ.. ಬಜೆಟ್‌ನಲ್ಲಿ ಏನಿಲ್ಲ.. ಹೇಳುವುದೆಲ್ಲ ನಿಜವಲ್ಲ ಎಂದು ಘೋಷಣೆ ಕೂಗಿ ಬಜೆಟ್‌ ಅನ್ನು ಟೀಕಿಸಲಾಯಿತು. 

ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಎರಡು ಪಕ್ಷಗಳ ನಾಯಕರು ಭಾಗವಹಿಸಿದ್ದರು. 

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಕಳೆದ ಮೂರು ವರ್ಷದ ಅವಧಿಯಲ್ಲಿ ಬಿಜೆಪಿ ಆಡಳಿತದಲ್ಲಿ ಯಾವ ಯೋಜನೆ ರೂಪಿಸಿದ್ದರು, ಅದೇ ಯೋಜನೆಗಳನ್ನೇ ಮತ್ತೆ ಉಲ್ಲೇಖ ಮಾಡಿದ್ದಾರೆ. 

ಯಾವುದೇ ಹೊಸ ವಿಚಾರ, ಅಭಿವೃದ್ಧಿ ಯಾವುದೂ ಇಲ್ಲ. ಮೇಕೆದಾಟಿಗೆ ಪಾದಯಾತ್ರೆ ಮಾಡಿದರು. ಆದರೆ, ಅಧಿಕಾರಕ್ಕೆ ಬಂದು ಏನು ಮಾಡಲಿಲ್ಲ. 

ಪೆರಿಫರೆಲ್ ರಿಂಗ್ ರಸ್ತೆಯನ್ನು ಪ್ರಾರಂಭನೇ ಮಾಡಿಲ್ಲ. ಬಜೆಟ್ ಹಿಂದೆ ರಾಜ್ಯವನ್ನು ಸರ್ವನಾಶ ಮಾಡುವ ಕೆಲ ಹಿತಾಸಕ್ತಿಗಳು ಇದ್ದಾರೆ. ದುರಂಹಕಾರ, ಧಮನಕಾರಿ ಧೋರಣೆಯು ಸಿದ್ದರಾಮಯ್ಯ ಅವರನ್ನು ಬಲಿ ತೆಗೆದುಕೊಳ್ಳುತ್ತವೆ. 

ಈ ಧೋರಣೆಯಿಂದ ರಾಜ್ಯವನ್ನು ಸರ್ವನಾಶಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಕಿಡಿಕಾರಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಇದು ಬಜೆಟ್ ಅಲ್ಲ, ರಾಜಕೀಯ ಭಾಷಣವಾಗಿದೆ. 

ಕೇಂದ್ರದ ಮೇಲೆ ಗೂಬೆ ಕೂರಿಸಿದ್ದಾರೆ. ಕೇಂದ್ರದಿಂದ ತೆರಿಗೆ ಪಾಲಿನಿಂದ ಮೂರು ಸಾವಿರ ಕೋಟಿ ರೂ. ಹೆಚ್ಚಿಗೆ ಬಂದಿದೆ ಎಂದು ಬಜೆಟ್‌ನಲ್ಲಿ ಹೇಳಿದ್ದಾರೆ. 

ನೀರಾವರಿಗೆ ಸಮರ್ಪಕ ಅನುದಾನ ನೀಡಿಲ್ಲ. ರೈತರಿಗೆ ರಾಜ್ಯ ಸರ್ಕಾರ ಮೋಸ ಮಾಡಿದೆ. ಅನುಪಯುಕ್ತ ವೆಚ್ಚಕ್ಕೆ ಸಾಲ ಮಾಡಲಾಗಿದ್ದು, ಸಾಲ ಮಾಡಿ ತುಪ್ಪ ತಿನ್ನಿ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು. 

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಜನರ ಹಿತಾಸಕ್ತಿ ಇಟ್ಟುಕೊಂಡು ಬಜೆಟ್ ಮಾಡಬೇಕು. ಆದರೆ, ರಾಜ್ಯ ಸರ್ಕಾರ ಬಜೆಟ್ ನಲ್ಲಿ ಪಾವಿತ್ರತೆಯನ್ನು ಕಡೆಗಣಿಸಲಾಗಿದೆ. ಪದೇ ಪದೇ ಕೇಂದ್ರ ಸರ್ಕಾರವನ್ನು ಹಿಯಾಳಿಸಲಾಗುತ್ತಿದೆ ಎಂದು ಕಿಡಿಕಾರಿದರು. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯದ ಜನರ ಪಾಲಿಗೆ ಮುಖ್ಯಮಂತ್ರಿ ಬದುಕ್ಕಿದ್ದು ಸತ್ತಂತೆ ಎಂಬುದು ರುಜುವಾತು ಮಾಡಿದ್ದಾರೆ. ಬಜೆಟ್ ಸಂಪೂರ್ಣ ರಾಜ್ಯದ ಜನರಿಗೆ ನಿರಾಶೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.