ಯಾವುದಕ್ಕೂ ಗವಿಸಿದ್ದಪ್ಪಜ್ಜನ ಹೆಸರು ಬೇಡ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಾವುಕ ನುಡಿ

| Published : Jan 18 2025, 12:46 AM IST

ಯಾವುದಕ್ಕೂ ಗವಿಸಿದ್ದಪ್ಪಜ್ಜನ ಹೆಸರು ಬೇಡ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಾವುಕ ನುಡಿ
Share this Article
  • FB
  • TW
  • Linkdin
  • Email

ಸಾರಾಂಶ

ಗವಿಸಿದ್ದಪ್ಪಜ್ಜನ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡಬೇಕು ಎಂದು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡುವುದು, ಆ ಸಂಘಟನೆ ಮನವಿ ಕೊಡುವುದು, ಈ ಸಂಘಟನೆ ಮನವಿ ಕೊಡುವುದು ಮಾಡಿದರು. ದಯವಿಟ್ಟು ಗವಿಸಿದ್ದಪ್ಪಜ್ಜನ ಮಠವನ್ನು ನಮ್ಮ ಆವರಣ ಬಿಟ್ಟು ಹೊರಗೆ ಕರೆದುಕೊಂಡು ಹೋಗಬೇಡಿ.

-ಕಣ್ಣೀರಿಟ್ಟ ಸ್ವಾಮೀಜಿಗಳು

-ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ, ಯಾವುದರಲ್ಲಿಯೂ ಎಳೆದುತರಬೇಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ರೈಲ್ವೆ ನಿಲ್ದಾಣ ಸೇರಿದಂತೆ ಯಾವುದೇ ಸಾರ್ವಜನಿಕ ಯೋಜನೆಗಳಿಗೆ ಗವಿಸಿದ್ಧೇಶ್ವರರ ಹೆಸರನ್ನು ನಾಮಕರಣ ಮಾಡದಂತೆ ಅಭಿನವ ಗವಿದ್ಧೇಶ್ವರ ಮಹಾಸ್ವಾಮೀಜಿ ಜನತೆಯಲ್ಲಿ ಮನವಿ ಮಾಡಿದರು.

ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಶುಕ್ರವಾರ ರಾತ್ರಿ ಜರುಗಿದ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ತೀರಾ ಭಾವುಕರಾಗಿ ಈ ಮಾತನ್ನು ಹೇಳಿ ಶ್ರೀಗಳು ಕಣ್ಣೀರಿಟ್ಟರು.

2 ಸೂಚನೆಗಳಿವೆ ಎಂದು ಮಾತು ಆರಂಭಿಸಿದ ಶ್ರೀಗಳು, ವೇದಿಕೆಯಲ್ಲಿ ಹೇಳಬಾರದು ಎಂದು ಅಂದುಕೊಂಡಿದ್ದೆ, ಹೇಳದೆ ಇರದೆ ಇದ್ದರೆ ನಡೆಯವುದಿಲ್ಲ. ಗವಿಸಿದ್ದಪ್ಪಜ್ಜನ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡಬೇಕು ಎಂದು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡುವುದು, ಆ ಸಂಘಟನೆ ಮನವಿ ಕೊಡುವುದು, ಈ ಸಂಘಟನೆ ಮನವಿ ಕೊಡುವುದು ಮಾಡಿದರು. ದಯವಿಟ್ಟು ಗವಿಸಿದ್ದಪ್ಪಜ್ಜನ ಮಠವನ್ನು ನಮ್ಮ ಆವರಣ ಬಿಟ್ಟು ಹೊರಗೆ ಕರೆದುಕೊಂಡು ಹೋಗಬೇಡಿ ಎಂದರು.

ಇವತ್ತು ರೈಲ್ವೆ ನಿಲ್ದಾಣಕ್ಕೆ ಅಂತೀರಿ, ವಿಮಾನ ನಿಲ್ದಾಣಕ್ಕೆ ಅಂತೀರಿ, ವಿವಿಗೆ ಅಂತೀರಿ ಏನು ಅವರ ಜತೆ ಗುದ್ದಾಡಲು ಆಗುತ್ತಾ? ಎಷ್ಟೋ ಮಂದಿ ಹೋರಾಟ ಮಾಡುವವರು ಅಲ್ಲೆ ಕುಳಿತಿದ್ದಾರೆ. ಗವಿಸಿದ್ದಪ್ಪಜ್ಜ ನಿಮ್ಮಲ್ಲೆರ ಉಸಿರಿನಲ್ಲಿರುವಾಗ, ಮತ್ತೊಂದಕ್ಕೆ ಅವನ ಹೆಸರು ಏನಕ್ಕೆ? ಇದೇ ಕೊನೆ ನಾನು ಎಂದೂ ಹೇಳುವುದಿಲ್ಲ. ನೀವು ಪೋಸ್ಟ್ ಮಾಡಿ ನಮ್ಮನ್ನು ಪೋಸ್ಟ್‌ ಮಾರ್ಟಮ್ ಮಾಡುತ್ತೀರಿ ಅಷ್ಟೆ ಎಂದು ಭಾವುಕರಾದರು.

ಇನ್ನೊಂದು ವಿಷಯ, ಗವಿಮಠವನ್ನು ಇನ್ನೊಂದು ಮಠದ ಜತೆ ಹೋಲಿಸುವುದು, ಗವಿಮಠದ ಸ್ವಾಮೀಜಿಯವರನ್ನು ಬೇರೆ ಸ್ವಾಮೀಜಿ ಜತೆಗೆ ಹೋಲಿಸುವುದು, ಅದಕ್ಕೆ ಪೋಸ್ಟ್ ಹಾಕುವುದು ಬೇಡ. ನಾನು ತಿಳಿದುಕೊಂಡಿರುವುದು ಇಡೀ ನಾಡಿನ ಎಲ್ಲ ಶರಣದ ಪಾದದ ಧೂಳಾಗಿ ನಾನಿದ್ದೇನೆ ಅಷ್ಟೆ. ಯಾರಿಗೂ ಹೋಲಿಸಬೇಡಿ ಎಂದು ಮನವಿ ಮಾಡಿದರು.

ಮೂರನೆಯದ್ದು, ನೀವು ಸುಮ್ಮನೆ ಕೂಡುವ ಮಂದಿಯಲ್ಲ. ಅಜ್ಜಾರಿಗೆ ಆ ಪ್ರಶಸ್ತಿ ಕೊಡ್ರಿ, ಈ ಪ್ರಶಸ್ತಿ ಕೊಡ್ರಿ ಎಂದು ಹೇಳೋಕೆ ಶುರು ಮಾಡ್ತೀರಿ. ಬರುವ ಪ್ರಶಸ್ತಿ ತಿರಸ್ಕರಿಸುವಷ್ಟು ದೊಡ್ಡವ ನಾನಲ್ಲ. ಅದನ್ನು ಸ್ವೀಕರಿಸುವ ಅರ್ಹತೆಯೂ ನನಗಿಲ್ಲ ಎಂಬ ವಿನಯತೆ, ವಿನಮ್ರತೆ ಇದೆ. ಅರ್ಹತೆ ನನಗಿಲ್ಲ. ನಮ್ಮ ಅಜ್ಜಾರ ಮಠದಲ್ಲಿ ಇರಲು ಜಾಗ ಕೊಟ್ಟಿದ್ದೀರಲ್ಲ, ಅದೇ ನನಗೆ ದೊಡ್ಡ ಪ್ರಶಸ್ತಿ. ದಯವಿಟ್ಟು ಇನ್ನು ಮುಂದೆ ಯಾರೂ ಈ ಮೂರು ವಿಷಯ ಕುರಿತು ಮಾತಾಡಬೇಡಿ ಎಂದು ನಮಸ್ಕಾರ ಮಾಡಿ ಹೊರಟರು. ಮತ್ತೆ ಭಾವುಕರಾಗಿ ಮೈಕ್ ಕಡೆ ಬಂದು, ಅಜ್ಜಾರು ನನಗೆ ಹೇಳಿಬಿಟ್ಟಿದ್ದಾರೆ ಇದನ್ನು, ಪೂಜೆ, ಓದು ಮತ್ತು ಸೇವೆ ಮಾಡಲು ಹೇಳಿದ್ದಾರೆ. ನನ್ನನ್ನು ಆ ಜಾತಿ, ಆ ಧರ್ಮದ, ಈ ಧರ್ಮ, ಈ ಜಾತಿಗೆ ಸೆಳೆಯಬೇಡಿ, ನನ್ನ ಧರ್ಮದ ಪರಿಭಾಷೆ ಎಂದರೆ ಎಲ್ಲರನ್ನು ಪ್ರೀತಿಸು, ಎಲ್ಲರ ಸೇವೆ ಮಾಡೋದು ಎಂಬುದು. ನನಗೆ ಗೊತ್ತಿರೋದು ಇಷ್ಟೆ. ಇದನ್ನು ಬಿಟ್ಟು ನನಗೆ ಯಾರೂ ಹೊರಗಡೆ ಕರೆದುಕೊಂಡು ಹೋಗಬೇಡಿ ಎನ್ನುವಾಗ ಕಣ್ಣಂಚಲ್ಲಿ ನೀರಿತ್ತು.ಶಿಕ್ಷಣ, ಮಠ, ಪತ್ರಿಕೆಯಲ್ಲಿ ನನ್ನ ಫೋಟೋ ಇಲ್ಲ. ಗುಲಬುರ್ಗಾದ ಯಾರೋ ಒಬ್ಬರು ಕೇಳಿದರು, ನಿಮ್ಮ ಫೋಟೋ ಇಲ್ಲವಲ್ಲ ಎಂದು. ಯಾರದು ಕಂಡಿತು ಎಂದೆ, ಗುರುಗಳಾದ ಶಿವಶಾಂತವೀರರ ಫೋಟೋ ಕಂಡಿತು ಎಂದರು. ನಾನು ಹೇಳಿದೆ, ಮನೆಯಲ್ಲಿ ಮಾಲೀಕರ ಫೋಟೋ ಇರುತ್ತದೆ. ಸೇವಕರದು ಇರಲ್ಲ. ಸೇವೆ ಮಾಡೋದು ಅಷ್ಟೆ ನನಗೆ ಗೊತ್ತಿದೆ. ನನ್ನ ಭಾವನೆ ಅರ್ಥ ಮಾಡಿಕೊಳ್ಳಿ. ಸಮಾಜ ಅತಿ ಸೂಕ್ಷ್ಮದಿಂದ ಹೋಗುತ್ತಿದೆ. ನನಗೆ ಹೊರಗಡೆ ವಿಷಯಗಳಿಗೆ ಆಸಕ್ತಿ ಇಲ್ಲ ಎಂದರು. ಮತ್ತೆ ನಾನು ಈ ಕುರಿತು ಮಾತನಾಡುವುದಿಲ್ಲ, ಮಾತನಾಡುವಂತೆ ಮಾಡಬೇಡಿ ಎಂದರು.

ಸೇರಿದ್ದ ಭಕ್ತರು ನೀವು ಭಾವುಕರಾಗಬೇಡಿ, ನೀವು ದುಃಖ ಮಾಡಿಕೊಳ್ಳಬೇಡಿ ಎಂದು ಕೂಗಿದರು. ನೀವು ಇರುವಂತೆ ಇರಿ, ಯಾರು ಏನಾದರೂ ಮಾಡಿಕೊಳ್ಳಲಿ ಎನ್ನುವ ಮಾತು ಕೇಳಿ ಬಂದಿತು.