ಡಿಕೆಶಿ ಆರ್‌ಎಸ್‌ಎಸ್‌ ಗೀ ತೆ ಹಾಡಿದ್ದರಿಂದ ಏನು ನಷ್ಟ ಆಗಿಲ್ಲ

| Published : Aug 26 2025, 01:02 AM IST

ಸಾರಾಂಶ

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರ್‌ಎಸ್ಎಸ್ ಗೀತೆ ಹಾಡಿದ್ದರಿಂದ ಸರ್ಕಾರಕ್ಕಾಗಲಿ ಅಥವಾ ಹೈಕಮಾಂಡ್‌ಗಾಗಲಿ ಏನು ನಷ್ಟ ಆಗಿಲ್ಲ. ಬಿಜೆಪಿಯವರಿಗೆ ಟಾಂಗ್ ಕೊಡಲು ಗೀತೆ ಹಾಡಿದ್ದಾರೆ ಎಂದು ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದರು.

-ಬಿಜೆಪಿಯವರಿಗೆ ಟಾಂಗ್ ಕೊಡಲು ಡಿಕೆಶಿ ಗೀತೆ ಹಾಡಿದ್ದಾರೆ: ಶಾಸಕ ಬಾಲಕೃಷ್ಣ ಸಮರ್ಥನೆ

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರ್‌ಎಸ್ಎಸ್ ಗೀತೆ ಹಾಡಿದ್ದರಿಂದ ಸರ್ಕಾರಕ್ಕಾಗಲಿ ಅಥವಾ ಹೈಕಮಾಂಡ್‌ಗಾಗಲಿ ಏನು ನಷ್ಟ ಆಗಿಲ್ಲ. ಬಿಜೆಪಿಯವರಿಗೆ ಟಾಂಗ್ ಕೊಡಲು ಗೀತೆ ಹಾಡಿದ್ದಾರೆ ಎಂದು ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಾಜಣ್ಣನವರು ಡಿ.ಕೆ.ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಗೆ ನಾವು ತಕರಾರು ಮಾಡುವುದಿಲ್ಲ. ಇದು ತಲೆ ಹೋಗುವ ಕೆಲಸ ಏನಲ್ಲ ಎಂದರು.

ನಾವು ಎಲ್ಲಾ ವಿದ್ಯೆಯನ್ನೂ ಕಲಿತಿದ್ದೀವಿ, ಬಿಜೆಪಿಗೆ ಗೊತ್ತಿಲ್ಲದ ವಿಚಾರ ನಮಗೆ ಗೊತ್ತು ಅಂತ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಅಷ್ಟೇ. ಹಾಗಂತ ಅವರು ಬಿಜೆಪಿ, ಆರ್‌ಎಸ್‌ಎಸ್ ಅನ್ನು ಓಲೈಸುವ ರೀತಿ ಮಾತನಾಡಿಲ್ಲ. ಮೊದಲಿನಿಂದಲೂ ಡಿ.ಕೆ.ಶಿವಕುಮಾರ್ ಆರ್‌ಎಸ್‌ಎಸ್ ಗೆ ವಿರೋಧವಾಗಿದ್ದಾರೆ. ರಾಜಣ್ಣ ಅವರ ಕೇಸೇ ಬೇರೆ, ಡಿಕೆಶಿಯವರ ಕೇಸೇ ಬೇರೆ. ರಾಜಣ್ಣ ನಮ್ಮ ಸರ್ವೋಚ್ಚ ನಾಯಕ ರಾಹುಲ್ ಗಾಂಧಿಯವರ ಹೋರಾಟಕ್ಕೆ ವ್ಯಂಗ್ಯ ಮಾಡಿದರು.

ಅದನ್ನು ಗಂಭೀರವಾಗಿ ಪರಿಗಣಿಸಿ ಪಕ್ಷ ಶಿಸ್ತು ಕ್ರಮವಹಿಸಿತು. ಆದರೆ, ಪಾಪ ರಾಜಣ್ಣ ಅನ್ಯಾಯ ಆಯ್ತು ಅಂತ ಇದನ್ನು ಈ ರೀತಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಕೆ.ಎನ್.ರಾಜಣ್ಣ ಹೇಳಿಕೆಗೆ ಬಾಲಕೃಷ್ಣ ತಿರುಗೇಟು ನೀಡಿದರು.

ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಆಯ್ಕೆಗೆ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಬಾಲಕೃಷ್ಣ ಪ್ರತಿಕ್ರಿಯಿಸಿ, ಬಿಜೆಪಿಯವರು ಯಾವುದನ್ನು ಸ್ವಾಗತ ಮಾಡುತ್ತಾರೆ. ಅವರು ಎಲ್ಲವನ್ನೂ ವಿರೋಧ ಮಾಡೋಕೆ ಇರೋದು, ನಾವು ಕೆಲಸ ಮಾಡೋಕೆ ಇರೋದು ಎಂದರು.

ಬಾನುಮುಸ್ತಾಕ್ ಈ ದೇಶದ ಪ್ರಜೆ, ರಾಜ್ಯದ ಪ್ರಜೆ. ಅವರಿಗೂ ಬೂಕರ್ ಪ್ರಶಸ್ತಿ ಬಂದಿದೆ. ಯಾರನ್ನೂ ಜಾತಿ, ಧರ್ಮದ ಆಧಾರದ ಮೇಲೆ ಗುರುತಿಸಲು ಆಗಲ್ಲ. ಅವರ ವಿಚಾರಧಾರೆಗಳ ಮೇಲೆ ಅವರನ್ನು ಗುರುತಿಸಬೇಕೆ ಹೊರತು ಜಾತಿ ಆಧಾರದ ಮೇಲೆ ಗುರುತಿಸಬಾರದು. ಹೀಗೆ ಜಾತಿ ಆಧಾರದಲ್ಲಿ ಗುರುತಿಸುವುದು ಬಿಜೆಪಿ ಸಂಸ್ಕೃತಿ. ಅದನ್ನು ಮಾಡಲಿಲ್ಲ ಅಂದರೆ ಅವರಿಗೆ ಊಟ ಸೇರಲ್ಲ, ನಿದ್ದೆ ಬರಲ್ಲ ಎಂದು ಬಾಲಕೃಷ್ಣ ಟೀಕಿಸಿದರು.