ಸಾರಾಂಶ
ಕಂಪ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಏಳ್ಗೆ ಸಹಿಸಲಾಗದೇ ವಿಪಕ್ಷದವರು ಮುಡಾ ಹಗರಣದಲ್ಲಿ ಅವರನ್ನು ಸಿಕ್ಕಿಹಾಕಿಸುವ ಹುನ್ನಾರ ನಡೆಸಿದ್ದಾರೆ. ಜನತೆಯ ಆಶೀರ್ವಾದ ನಮ್ಮ ಟಗರಿಗೆ (ಸಿದ್ದರಾಮಯ್ಯ) ಇರುವವರೆಗೂ ಅವರಿಗೆ ಏನೂ ಆಗುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳಿಗಾಗಿ ₹100 ಕೋಟಿ ಅನುದಾನ ಮಂಜೂರು ಮಾಡಿ, ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದ್ದಕ್ಕಾಗಿ ಪಟ್ಟಣದ ಎಸ್.ಎನ್.ಪೇಟೆ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಾಜ್ಯಾದ್ಯಂತ ವಸತಿ ರಹಿತರಿಗೆ ಮನೆ ನೀಡುವ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದಾಗ ₹9500 ಕೋಟಿ ಅನುದಾನ ನೀಡುವ ಭರವಸೆ ನೀಡಿದರು. ಅದರಂತೆ ಫೆಬ್ರವರಿಯಲ್ಲಿ ₹500 ಕೋಟಿ ಬಿಡುಗಡೆಗೊಳಿಸಿದ ಕಾರಣದಿಂದ ರಾಜ್ಯದಲ್ಲಿ 36 ಸಾವಿರಕ್ಕೂ ಹೆಚ್ಚು ಮನೆಗಳನ್ನು ನೀಡಲಾಗಿದೆ. ಇದು ನಮ್ಮ ಪಕ್ಷದ 6ನೇ ಗ್ಯಾರಂಟಿಯಾಗಿದೆ. ನಮ್ಮ ಸರ್ಕಾರವು ಸರ್ವರಿಗೂ ಸೂರು ಸಿಗಲಿ ಎಂಬ ಉದ್ದೇಶ ಹೊಂದಿದೆ. ಬಡವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಮಾತ್ರ ಕಾಳಜಿ ಇದೆ, ಹೊರತು ಬಿಜೆಪಿ ಜೆಡಿಎಸ್ ನಾಯಕರಿಗಿಲ್ಲ. ಬರುವ ಫೆಬ್ರವರಿ ತಿಂಗಳಲ್ಲಿ ವಸತಿ ಇಲಾಖೆಯಿಂದ ರಾಜ್ಯದಲ್ಲಿ 38 ಸಾವಿರಕ್ಕೂ ಅಧಿಕ ಜನರಿಗೆ ಮನೆಗಳನ್ನು ವಿತರಿಸಲಾಗುವುದು. ಕಂಪ್ಲಿ ವಿಧಾನಸಭಾ ಕ್ಷೇತ್ರ ಭಾಗಕ್ಕೆ ಹೆಚ್ಚುವರಿಯಾಗಿ 10 ಸಾವಿರ ಮನೆಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿಯವರಂತೆ ಕಾಂಗ್ರೆಸ್ ಗೆ ಜಾತಿ, ಧರ್ಮಗಳ ಬೇಧವಿಲ್ಲ. ಬಡವರಿಗೆ ಒಳ್ಳೆಯದು ಮಾಡಬೇಕೆಂಬ ಹಿತಾಸಕ್ತಿ ಇದೆ. ಹಿಂದೂ ಮುಸ್ಲಿಂ ಎಂಬ ಜಾತಿಭೇದ ಮಾಡುವವರು ಹುಳ ಬಿದ್ದು ಸಾಯುತ್ತಾರೆ. ಯಾವುದೇ ರಾಜಕಾರಣಿಗಳು ಜಾತಿ ಭೇದ ಮಾಡದೇ ಎಲ್ಲರನ್ನು ಅಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಇಲಾಖೆಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅನುದಾನದ ಕೊರತೆ ಇಲ್ಲ. ಅದೇ ರೀತಿಯಾಗಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಬಡಜನರ ಕಲ್ಯಾಣಕ್ಕಾಗಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ನಮ್ಮ ಕುಟುಂಬಕ್ಕೆ ರಾಜಕೀಯ ಭಿಕ್ಷೆ ನೀಡಿದವರು ಕಂಪ್ಲಿ -ಕುರುಗೋಡು ಕ್ಷೇತ್ರದ ಜನತೆಯಾಗಿದ್ದು, ನಮ್ಮ ತಂದೆಯನ್ನು ಶಾಸಕರನ್ನಾಗಿಸಿದ್ದರು. ಈ ಕ್ಷೇತ್ರದ ಜನತೆಯ ಮೇಲೆ ಹೆಚ್ಚು ಪ್ರೀತಿ ಹಾಗೂ ಕಾಳಜಿ ನಮ್ಮ ಕುಟುಂಬಕ್ಕಿದೆ. ಶಾಸಕರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಹಲವು ವರ್ಷಗಳಿಂದ ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ದೊರೆಯುತ್ತಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಆಶಾಭಾವನೆಯಿಂದ ನನ್ನ ಕ್ಷೇತ್ರದ ಅಭಿವೃದ್ಧಿಗೆ ₹100 ಕೋಟಿ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಡಿ ಆಯ್ಕೆಯಾದ ಸ್ವ ಸಹಾಯ ಸಂಘದ ಮಹಿಳೆಯರಿಗೆ ಆದೇಶ ಪತ್ರ, ಚೆಕ್ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಡಿಸಿ ಪ್ರಶಾಂತಕುಮಾರ್ ಮಿಶ್ರಾ, ಎಸ್ಪಿ ಡಾ.ಶೋಭಾರಾಣಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಭಾಷಾ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಎಸಿ ಪ್ರಮೋದ್, ತಹಶೀಲ್ದಾರ ಶಿವರಾಜ್, ತಾಪಂ ಇಒ ಆರ್.ಕೆ. ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ರಾವ್ ಇದ್ದರು.