ಬಿಬಿಎಂಪಿ ಹಾಗೂ ಜಲ ಮಂಡಳಿಯ ಕುಡಿಯುವ ನೀರು ಪೂರೈಕೆ ಘಟಕಗಳಿಗೆ ನಿರಂತರ ವಿದ್ಯುತ್‌ ಪೂರೈಸುವಂತೆ ಬೆಸ್ಕಾಂ ತನ್ನ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ಹಾಗೂ ಜಲ ಮಂಡಳಿಯ ಕುಡಿಯುವ ನೀರು ಪೂರೈಕೆ ಘಟಕಗಳಿಗೆ ನಿರಂತರ ವಿದ್ಯುತ್‌ ಪೂರೈಸುವಂತೆ ಬೆಸ್ಕಾಂ ತನ್ನ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಲಾಗಿದ್ದು, ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ವಿದ್ಯುತ್‌ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು.ಕುಡಿಯುವ ನೀರಿನ ಘಟಕಗಳನ್ನು ಸಂಪರ್ಕಿಸುವ ವಿದ್ಯುತ್‌ ಮಾರ್ಗಗಳ ದುರಸ್ತಿಗೆ ಅನುಮತಿ ನೀಡಬಾರದು ಎಂದು ತಿಳಿಸಿದ್ದಾರೆ.

ನಿರಂತರ ವಿದ್ಯುತ್‌ ಪೂರೈಸುವ ಸಂಬಂಧ ಬಿಬಿಎಂಪಿ, ಜಲ ಮಂಡಳಿ ಅಧಿಕಾರಿಗಳ ಜೊತೆ ಬೆಸ್ಕಾಂ ಸಿಬ್ಬಂದಿ ಸಮನ್ವಯ ಸಾಧಿಸಬೇಕು. ನಗರದಲ್ಲಿ ನೀರು ಸರಬರಾಜಿಗೆ ನಿರಂತರ ವಿದ್ಯುತ್‌ ಪೂರೈಕೆ ಖಚಿತಪಡಿಸಿಕೊಳ್ಳಲು ಜಲ ಮಂಡಳಿ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಭೆ ನಡೆಸಿ ಈ ಸೂಚನೆ ನೀಡಲಾಗಿದೆ.