ಸಾರಾಂಶ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಡೀಪುರ ಅರಣ್ಯದಲ್ಲಿ ವನ್ಯಜೀವಿಗಳಿಗೆ ನೀರಿನ ಹಾಹಾಕಾರ ಕಂಡು ಧರ್ಮಾಧಿಕಾರಿ ಎರಡು ಕೆರೆಗಳ ಹೂಳೆತ್ತಲು ಸೂಚನೆ ನೀಡಿರುವುದು ಅರಣ್ಯ ಇಲಾಖೆಗೆ ಖುಷಿ ತಂದಿದೆ
ಗು೦ಡ್ಲಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಡೀಪುರ ಅರಣ್ಯದಲ್ಲಿ ವನ್ಯಜೀವಿಗಳಿಗೆ ನೀರಿನ ಹಾಹಾಕಾರ ಕಂಡು ಧರ್ಮಾಧಿಕಾರಿ ಎರಡು ಕೆರೆಗಳ ಹೂಳೆತ್ತಲು ಸೂಚನೆ ನೀಡಿರುವುದು ಅರಣ್ಯ ಇಲಾಖೆಗೆ ಖುಷಿ ತಂದಿದೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಪ್ರಭಾಕರನ್ ಎಸ್ ಹೇಳಿದರು.
ಬಂಡೀಪುರ ಕ್ಯಾಂಪಸ್ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ನಮ್ಮೂರು-ನಮ್ಮ ಕೆರೆ ಕಾರ್ಯಕ್ರಮದಡಿ ತಲಾ 10 ಲಕ್ಷ ವೆಚ್ಚದಲ್ಲಿ ಬಂಡೀಪುರ ಮತ್ತು ತಾವರೆಕಟ್ಟೆ ಕೆರೆಗಳ ಹೂಳೆತ್ತುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ನಾನು ಅಧಿಕಾರ ವಹಿಸಿಕೊಂಡ ಸಮಯದಲ್ಲಿ ಬಂಡೀಪುರ ಅರಣ್ಯದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಂಕಷ್ಟ ಕಣ್ಣಾರೆ ನೋಡಿದ್ದೇ, ಇಂಥ ಸಮಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಎರಡು ಕೆರೆಗಳನ್ನು ತಲಾ 10 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ ಎಂದರು. ಬೇಸಿಗೆ ಕಾಲದಲ್ಲಿ ಕುಡಿವ ನೀರಿನ ಕೊರತೆ ಇರಲಿದೆ. ಮನುಷ್ಯನಾದರೆ ಪರ್ಯಾಯ ಮಾರ್ಗದಲ್ಲಿ ಕುಡಿವ ನೀರು ತರಿಸಿಕೊಳ್ಳುತ್ತಾನೆ ಪ್ರಾಣಿಗಳಿಗೆ ನೀರು ಕೇಳಿ ಪಡೆಯಲು ಆಗುವುದಿಲ್ಲ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಗಳು ಕೆರೆಗಳ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಪ್ರಕೃತಿ ಸೇವೆ ಮಾಡಿದರೆ ಜನರಿಗೆ ಸೇವೆ ಮಾಡಿದಂತೆ ಎಂದರು. ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಮಲೆಯೂರು ರವಿಶಂಖರ್ ಮಾತನಾಡಿ, ಕಾಡಿನೊಳಗಿನ ಕೆರೆಗಳ ಅಭಿವೃದ್ಧಿಗೆ ಧರ್ಮಸ್ಥಳ ಧರ್ಮಾಧಿಕಾರಿಗಳು ಮುಂದಾಗಿದ್ದಾರೆ. ಧರ್ಮಸ್ಥಳ ಸಂಸ್ಥೆಯು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮೆಚ್ಚುಗೆಯ ವಿಚಾರ ಎಂದರು.
ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್.ನವೀನ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ, ಗ್ರಾಪಂ ಅಧ್ಯಕ್ಷ ಮಾಯಪ್ಪ, ತಾ.ಪತ್ರಕರ್ತರ ಸಂಘದ ಅಧ್ಯಕ್ಷ ರಂಗೂಪುರ ಶಿವಕುಮಾರ್, ಯೋಜನಾಧಿಕಾರಿ ಚಂದ್ರಶೇಖರ್, ಕೆರೆ ಅಭಿಯಂತರ ಪುಷ್ಪರಾಜ್, ಬಂಡೀಪುರ ವಲಯ ಅರಣ್ಯಾಧಿಕಾರಿ ದೀಪಾ ಸಿ.ವಿ, ಪಿಎಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಸಿ.ಮಹದೇವಸ್ವಾಮಿ, ವಲಯ ಮೇಲ್ವಿಚಾರಕ ಶ್ರೀನಿವಾಸ್ ಸೇರಿದಂತೆ ಹಲವರಿದ್ದರು.
ಕೆರೆಗಳ ಅಭಿವೃದ್ಧಿಗೆ ಚಾಲನೆ
ಗುಂಡ್ಲುಪೇಟೆ ಧರ್ಮಸ್ಥಳ ಸಂಸ್ಥೆ ಇದೇ ಮೊದಲ ಬಾರಿಗೆ ಅರಣ್ಯ ಪ್ರದೇಶದಲ್ಲಿ ಕೆರೆಗಳ ಅಭಿವೃದ್ಧಿಗೆ ಚಾಲನೆ ನೀಡಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಹೇಳಿದರು. ಗುದ್ದಲಿ ಪೂಜೆ ಸಮಾರಂಭದಲ್ಲಿ ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿಗಳ ಆಶಯದಂತೆ ಬಂಡೀಪುರದಲ್ಲಿ ಎರಡು ಕೆರೆಗಳಿಗೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು. ರಾಜ್ಯದಲ್ಲಿ 1500 ಕ್ಕೂ ಹೆಚ್ಚು ಕೆರೆಗಳ ಅಭಿವೃದ್ಧಿ ಪಡಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಕೆರೆಗಳ ಅಭಿವೃದ್ಧಿ ಮಾಡಲಾಗಿದೆ ಎಂದರು. ಪ್ರಸ್ತುತ ಎರಡು ಕೆರೆಗಳ ಅಭಿವೃದ್ಧಿಗೆ ತಲಾ ೧೦ ಲಕ್ಷ ರು.ವೆಚ್ಚದಲ್ಲಿ ಅಭಿವೃದ್ಧಿಗೆ ಚಾಲನೆ ದೊರೆತಿದೆ, ಮುಂದೆ ಅವಕಾಶ ಸಿಕ್ಕರೆ ಮತ್ತಷ್ಟು ಕೆರೆಗಳ ಅಭಿವೃದ್ದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈ ಜೋಡಿಸಲಿದೆ ಎಂದರು.
ಬೇಸಿಗೆಯಲ್ಲಿ ನೀರಿನ ಕಷ್ಟ ಕಣ್ಣಾರೆ ನೋಡಿದ್ದೇನೆ. ಜಮೀನುಗಳಲ್ಲಿ ಮಳೆಯ ನೀರು ನಿಲ್ಲುವಂತೆ ರೈತರು ಮಾಡಬೇಕು. ಮಳೆಯ ನೀರು ಹರಿದು ಹೋಗದಂತೆ ತಡೆದರೆ, ಭೂಮಿಯಲ್ಲಿ ನೀರು ಇಂಗಲಿದೆ. ಈ ಕೆಲಸ ಆದರೆ ಅಂತರ್ಜಲ ಸಿಗಲಿದೆ.-ಪ್ರಭಾಕರನ್ ಎಸ್, ಡಿಸಿಎಫ್,