ಕಮಲನಗರದಲ್ಲಿ ನಾಮಫಲಕ ಅಳವಡಿಕೆಗೆ ಸೂಚನೆ

| Published : Feb 27 2024, 01:35 AM IST

ಸಾರಾಂಶ

ಕಮಲನಗರದಲ್ಲಿ ಕನ್ನಡದ ನಾಮಫಲಕ ಅಳವಡಿಸಲು ತಹಸೀಲ್ದಾರ್‌ ಎಲ್ಲ ಅಧಿಕಾರಿಗಳಿಗೆ ನಡೆದ ಸಭೆಯಲ್ಲಿ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ಪಟ್ಟಣ ಸೇರಿ ತಾಲೂಕಿನ 18ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಅಳವಡಿಸಬೇಕೆಂದು ತಹಸೀಲ್ದಾರ್ ಅಮೀತ್ ಕುಮಾರ ಕುಲಕರ್ಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕಮಲನಗರ ತಾಲೂಕಿನಲ್ಲಿ ಮೂರು ಹೋಬಳಿಗಳಿವೆ ಅವುಗಳಲ್ಲಿ ಬರುವಂತ 18 ಗ್ರಾಪಂ ಅಧಿನದಲ್ಲಿರುವ ಗ್ರಾಮಗಳಲ್ಲಿ ತಪ್ಪದೆ ಶೇ.60ರಷ್ಟು ಕನ್ನಡದ ಭಾಷೆಯಲ್ಲಿ ನಾಮಫಲಕಗಳು ಕಡ್ಡಾಯವಾಗಿ ಮತ್ತು ಮೇಲ್ಭಾಗದಲ್ಲಿ ಕನ್ನಡದಲ್ಲಿಯೇ ಬರೆಯಬೇಕು. ಆ ನಂತರ ನಿಮಗೆ ಬೇಕಾದ ಭಾಷೆಯಲ್ಲಿ ಕೆಳಗಡೆ ಬರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಮಾತನಾಡಿ, ಕೆಲವು ಕನ್ನಡಪರ ಸಂಘಟನೆಗಳು ನೀಡಿರುವ ದೂರಿನ ಮೇರೆಗೆ ಮತ್ತು ಸರ್ಕಾರದ ಆದೇಶದ ಮೇರೆಗೆ. ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡ ಇರುವುದರಿಂದ ಕಡ್ಡಾಯವಾಗಿ ನಿಮ್ಮ ಅಂಗಡಿಗಳ ಮೇಲೆ ಮೊದಲು ಕನ್ನಡ ಭಾಷೆ ನಾಮಫಲಕ ಬರೆಯಬೇಕು. ಕೆಳಗಡೆಯಲ್ಲಿ ನಿಮ್ಮ ನಿಮ್ಮ ಸ್ಥಳಿಯ ಭಾಷೆಯಲ್ಲಿ ನಾಮಫಲಕಗಳು ಹಾಕಬೇಕು ಎಂದು ತಿಳಿಸಿದರು.

ತಾಪಂ ಸಹಾಯಕ ನಿರ್ದೇಶಕರಾದ ಹಣಮಂತರಾಯ ಕೌಟಗೆ ಮಾತನಾಡಿ, ಸಭೆ ಮುಗಿದ ಮೂರು ದಿವಸದಲ್ಲಿ ತಾಲೂಕಿನಾದ್ಯಂತ ಎಲ್ಲಾ ಕಡೆಗಳಲ್ಲಿ ನಾಮಫಲಕಗಳು ಕನ್ನಡದಲ್ಲಿರಬೇಕು ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಸುಶೀಲಾ ಮಹೇಶ್, ಪಿಎಸ್ಐ ಆಶಾ ರಾಠೋಡ, ಕಮಲನಗರ ತಾಲೂಕಿನ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಕಂದಾಯ ಇಲಾಖೆಯ ಗ್ರಾಮಾಭಿವೃದ್ಧಿ ಅಧಿಕಾರಿಗಳು, ಪಿಡಿಓಗಳು, ಎಲ್ಲಾ ಸದಸ್ಯರು ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.