ಕುಡಿವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಲು ಸೂಚನೆ

| Published : Mar 29 2024, 12:51 AM IST

ಕುಡಿವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ತಾಲೂಕಿನ ಕುಡಿಯುವ ನೀರಿನ ತೊಂದರೆ ಉದ್ಭವಿಸುವ ಗ್ರಾಮಗಳ ಪಟ್ಟಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಿದ್ಧಪಡಿಸಿ ನೀರು ಪೂರೈಕೆಗೆ ತಕ್ಷಣವೇ ಕಾರ್ಯೋನ್ಮುಖರಾಗುವಂತೆ ತಹಸೀಲ್ದಾರ್ ಡಾ.ನಾಗವೇಣಿ ಹೇಳಿದರು.

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಕುಡಿಯುವ ನೀರಿನ ತೊಂದರೆ ಉದ್ಭವಿಸುವ ಗ್ರಾಮಗಳ ಪಟ್ಟಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಿದ್ಧಪಡಿಸಿ ನೀರು ಪೂರೈಕೆಗೆ ತಕ್ಷಣವೇ ಕಾರ್ಯೋನ್ಮುಖರಾಗುವಂತೆ ತಹಸೀಲ್ದಾರ್ ಡಾ.ನಾಗವೇಣಿ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕುಡಿವ ನೀರು ಪೂರೈಕೆ ಸಂಬಂಧದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂಚಿತವಾಗಿಯೇ ಖಾಸಗಿ ಬೋರವೆಲ್ ಹಾಗೂ ಟ್ಯಾಂಕರ್‌ಗಳನ್ನು ಗುರುತಿಸಿ ಅಗತ್ಯ ಬಿದ್ದಾಗ ಸೇವೆಗೆ ಪಡೆಯುವಂತೆ ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೇವಲ ಬಾಯಿ ಮಾತಿನ ಭರವಸೆ ಬೇಡ. ನಿಖರ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಗ್ರಾಮಗಳ ವ್ಯಾಪ್ತಿಯಲ್ಲಿ ಬೋರ್‌ವೆಲ್‌ಗಳ ಪಟ್ಟಿ ಸಿದ್ಧಪಡಿಸಬೇಕು. ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಹೊಸ ಬೋರ್‌ವೆಲ್ ಕೊರೆದು, ಪೈಪ್‍ಲೈನ್ ಅಳವಡಿಸಿ ನೀರು ಸರಬರಾಜು ಮಾಡವ ಕುರಿತು ವಿಸ್ತೃತ ಯೋಜನಾ ವರದಿಯನ್ನು ನೀಡಬೇಕು. ಇದಕ್ಕೆ ಪಿಡಿಓಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್‌ಗಳ ಸಹಾಯ ಪಡೆದುಕೊಳ್ಳುವಂತೆ ಸೂಚಿಸಿದರು.

ಹಲವು ಗ್ರಾಮಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಎಷ್ಟು ಬಾರಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಿವೆ. ಬೋರ್‌ವೆಲ್‌ಗಳಲ್ಲಿ ದೊರಕುವ ನೀರಿನ ಪ್ರಮಾಣ ಏನು ಎಂಬುದರ ಬಗ್ಗೆ ದೃಢೀಕರಣ ನೀಡಬೇಕು. ಈಗಾಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ನೀಡಲಾಗಿದೆ. ನಿಮ್ಮ ವ್ಯಾಪ್ತಿಯ ಕಂದಾಯ ನಿರೀಕ್ಷಕರ ಮೂಲಕ ಈ ಟ್ಯಾಂಕರ್‌ಗಳನ್ನು ಪಡೆದುಕೊಳ್ಳುವಂತೆ ಹೇಳಿದರು.

ಪ್ರಸ್ತುತ ಬರಪರಿಸ್ಥಿತಿ ಉಂಟಾಗಿದೆ. ಕೆಲಸ ದೊರಕದೆ ಯಾರು ಸಹ ಗುಳೆ ಹೋಗದಂತೆ ನೋಡಿಕೊಳ್ಳಬೇಕು. ನರೇಗಾದಡಿ ಗ್ರಾಮದಲ್ಲಿಯೇ ಕೆಲಸವನ್ನು ಸೃಜಿಸಿ, ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು. ಕುಡಿಯುವ ನೀರು ಸರಬಾಜಿನಲ್ಲಿ ವ್ಯತ್ಯಯ ಉಂಟಾಗಬಾರದು. ಜಾನುವಾರುಗಳಿಗೂ ಕುಡಿಯುವ ನೀರು ಕಲ್ಪಿಸುವ ಕೆಲಸ ಮಾಡುವಂತೆ ತಾಪಂ ಇಓ ಅನಂತರಾಜು ಪಿಡಿಓಗಳಿಗೆ ನಿರ್ದೇಶನ ನೀಡಿದರು.

ಚಿತ್ರದುರ್ಗ ತಾಲೂಕಿನಲ್ಲಿ ಸದ್ಯ 6 ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 8 ಗ್ರಾಮ ಪಂಚಾಯತಿ ವ್ಯಾಪ್ತಿಯ 16 ಗ್ರಾಮಗಳಲ್ಲಿ ಖಾಸಗಿ ಬೊರೆವೆಲ್ ಬಾಡಿಗೆ ಪಡೆದು ನೀರು ಒದಗಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ 27 ಗ್ರಾಮ ಪಂಚಾಯತಿ ವ್ಯಾಪ್ತಿಯ 59 ಗ್ರಾಮಗಳಲ್ಲಿ ತೀವ್ರ ತರನಾದ ಕುಡಿಯುವ ನೀರಿನ ಸಮಸ್ಯೆ ತಲೆದೊರಬಹುದು. ಈ ನಿಟ್ಟಿನಲ್ಲಿ ನೀರಿನ ಸೌಕರ್ಯ ಒದಗಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ಶಿವಮೂರ್ತಿ, ಆರ್ ಡಿಪಿ ಆರ್ ಸಹಾಯಕ ನಿರ್ದೇಶಕಿ ರೂಪಕುಮಾರಿ, ತಾಪಂ ವ್ಯವಸ್ಥಾಪಕ ತಿಪ್ಪೇಸ್ವಾಮಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಪಿಡಿಓಗಳು ಉಪಸ್ಥಿತರಿದ್ದರು.