ನಂತೂರು ಮೇಲ್ಸೇತುವೆ ಕಾಮಗಾರಿ ಪೂರ್ವಭಾವಿ ಕ್ರಮಕ್ಕೆ ಸೂಚನೆ

| Published : Jul 22 2024, 01:18 AM IST

ನಂತೂರು ಮೇಲ್ಸೇತುವೆ ಕಾಮಗಾರಿ ಪೂರ್ವಭಾವಿ ಕ್ರಮಕ್ಕೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀನಿವಾಸ ಮಲ್ಯರು ಆಧುನಿಕ ಮಂಗಳೂರಿನ ಶಿಲ್ಪಿಯಾಗಿದ್ದು, ಅವರ ಪ್ರತಿಮೆ ಸ್ಥಳಾಂತರ ಸೂಕ್ಷ್ಮ ವಿಚಾರ, ಹಾಗಾಗಿ ಎಚ್ಚರಿಕೆ ವಹಿಸಿ ಎಂದು ಸಂಸದರು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಂತೂರಿನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಅಗತ್ಯವಿರುವ ಕಟ್ಟಡಗಳ, ರಚನೆಗಳ ತೆರವು, ವಿದ್ಯುತ್‌ ಲೈನ್‌, ನೀರಿನ ಪೈಪ್‌ಲೈನ್‌ ಸ್ಥಳಾಂತರ ಕುರಿತಂತೆ ಬಾಕಿ ಇರುವ ಎಲ್ಲ ಕಾರ್ಯಗಳನ್ನೂ ತ್ವರಿತವಾಗಿ ಕೈಗೊಳ್ಳುವಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಅಧಿಕಾರಿಗಳಿಗೆ ಸೂಚಿಸಿದರು.ನಂತೂರು ಹಾಗೂ ಕೆಪಿಟಿಯ ವಾಹನ ಮೇಲ್ಸೇತುವೆಗಳ ಕುರಿತು ಶನಿವಾರ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು.ನಗರದ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಹಿಂದೆ ನಿರ್ಮಿಸಿರುವ ಫ್ಲೈಓವರ್‌ಗಳು ಗುಣಮಟ್ಟಹೊಂದಿಲ್ಲ. ಅದು ಎನ್‌ಎಚ್‌ಎಐನ ಘನತೆಗೂ ತಕ್ಕುದಲ್ಲ, ಹಾಗಾಗಿ ಈಗ ನಿರ್ಮಿಸುವ ಹೊಸ ಮೇಲ್ಸೇತುವೆಗಳು ನಗರದ ಸಮಗ್ರ ಅಭಿವೃದ್ಧಿ, ಸುಗಮ ಸಂಚಾರಕ್ಕೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಂಸದರು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್‌ ಅಜ್ಮಿ ಅವರಿಗೆ ಸೂಚಿಸಿದರು.ಸುಮಾರು 60 ಕೋಟಿ ರು. ವೆಚ್ಚದ ಪ್ರಸ್ತಾವಿತ ಮೇಲ್ಸೇತುವೆಗೆ ಸದ್ಯ ಪರಿಶಿಷ್ಟವಿದ್ಯಾರ್ಥಿಗಳ ಹಾಸ್ಟೆಲ್‌ ಕಾಂಪೌಂಡ್‌, ಮಲ್ಯ ಪ್ರತಿಮೆ ಇರುವ ಪಾರ್ಕ್, ಮಿಯಾವಾಕಿ ಉದ್ಯಾನವನ ಸಹಿತ ಕೆಲವೊಂದು ಅಡಚಣೆಗಳು ಬಾಕಿ ಇವೆ. ಇವುಗಳನ್ನು ಬಗೆಹರಿಸಿಕೊಂಡು ಆರಂಭದಲ್ಲಿ ನಂತೂರು ಜಂಕ್ಷನ್‌ನ ಮಧ್ಯದಲ್ಲಿ 2025ರ ಮಾರ್ಚ್‌ ವೇಳೆಗೆ ಓವರ್‌ಪಾಸ್‌ನ ಮಧ್ಯ ಭಾಗವನ್ನು ನಿರ್ಮಿಸಬಹುದು. ಆ ಬಳಿಕ ಇಕ್ಕೆಲಗಳ ಸರ್ವಿಸ್‌ ರಸ್ತೆ ಕಾಮಗಾರಿ 7 ಮೀಟರ್‌ ಅಗಲವಾಗಿ ಕೈಗೊಳ್ಳಲಾಗುವುದು. ಓವರ್‌ ಪಾಸ್‌ 9 ಮೀಟರ್‌ ಅಗಲ ಹೊಂದಿರಲಿದ್ದು, ಒಟ್ಟು ಕಾಮಗಾರಿ ಮುಗಿಯಲು ಎರಡು ವರ್ಷ ಬೇಕಾಗಬಹುದು ಎಂದು ಅವರು ವಿವರಿಸಿದರು.ಶ್ರೀನಿವಾಸ ಮಲ್ಯರು ಆಧುನಿಕ ಮಂಗಳೂರಿನ ಶಿಲ್ಪಿಯಾಗಿದ್ದು, ಅವರ ಪ್ರತಿಮೆ ಸ್ಥಳಾಂತರ ಸೂಕ್ಷ್ಮ ವಿಚಾರ, ಹಾಗಾಗಿ ಎಚ್ಚರಿಕೆ ವಹಿಸಿ ಎಂದು ಸಂಸದರು ಹೇಳಿದರು.

ಸ್ಥಳೀಯ ಕಾರ್ಪೊರೆಟರ್‌ಗಳಾದ ಶಕೀಲ ಕಾವ ಹಾಗೂ ಮನೋಹರ್‌ ಅವರ ನೆರವಿನೊಂದಿಗೆ ಬಾಕಿ ಇರುವ ತೆರವು ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಈಗಾಗಲೇ ಹಾಕಿರುವ ಭೂಗತ ಕೇಬಲ್‌ನ್ನು ಮತ್ತೆ ತೆರವು ಮಾಡಬೇಕಾಗುತ್ತದೆ. ಅದಕ್ಕಾಗಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಆದ್ಯತೆ ಮೇರೆಗೆ ಕೆಲಸ ನಡೆಸಿಕೊಡಬೇಕು ಎಂದು ಸಂಸದರು ತಿಳಿಸಿದರು.ನಂತೂರಿಗೆ ಮೂರು ಸ್ತರಗಳ ಮೇಲ್ಸೇತುವೆ ವಿನ್ಯಾಸವನ್ನು ಖಾಸಗಿಯಾಗಿ ಕ್ರೆಡೈ ರಚಿಸಿದ್ದು ಅಧ್ಯಕ್ಷ ವಿನೋದ್‌ ಪಿಂಟೋ ಅವರು ಪ್ರಸ್ತುತ ಪಡಿಸಿದ್ದು, ಕಾರ್ಯ ಸಾಧ್ಯತೆ ಬಗ್ಗೆ ಚರ್ಚಿಸಲಾಯಿತಾದರೂ ಅದು ಅಧಿಕ ವೆಚ್ಚದಾಯಕವಾಗಿರುವ ಕಾರಣ ಒಮ್ಮತ ವ್ಯಕ್ತವಾಗಲಿಲ್ಲ. ಕುಡಿಯುವ ನೀರಿನ ಪೈಪ್‌ಲೈನ್‌ ಸ್ಥಳಾಂತರಕ್ಕೆ 2.5 ಕೋಟಿ ರು. ಪ್ರಸ್ತಾವನೆಯನ್ನು ಮಂಗಳೂರು ಪಾಲಿಕೆಯಿಂದ ಸಲ್ಲಿಸಲಾಗಿದೆ. ಆದರೆ ಅಷ್ಟುಮೊತ್ತ ಒದಗಿಸುವಂತಿಲ್ಲ ಎಂದು ಎನ್‌ಎಚ್‌ಎಐ ಅಧಿಕಾರಿ ಆರಂಭದಲ್ಲಿ ತಿಳಿಸಿದರು, ಆದರೆ ಆ ವಿಚಾರವನ್ನು ತ್ವರಿತವಾಗಿ ಬಗೆಹರಿಸಿ, ಯೋಜನೆ ವಿಳಂಬಿಸದಂತೆ ಶಾಸಕ ವೇದವ್ಯಾಸ ಕಾಮತ್‌ ಸೂಚಿಸಿದರು.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಡಿಸಿಪಿ ದಿನೇಶ್‌ ಕುಮಾರ್‌, ವಿಶೇಷ ಭೂಸ್ವಾಧೀನಾಧಿಕಾರಿ ಇಸಾಕ್‌ ಮತ್ತಿತರರಿದ್ದರು.

ಹೆದ್ದಾರಿ ಸ್ಥಿತಿ ಸುಧಾರಣೆಗೆ ಆದ್ಯತೆ ನೀಡಿರಾಷ್ಟ್ರೀಯ ಹೆದ್ದಾರಿಯ ಅನೇಕ ಕಡೆ ಗುಂಡಿಗಳು, ನೀರು ನಿಲ್ಲುವುದು, ಸರಿಯಾದ ಎಚ್ಚರಿಕೆ ಫಲಕ, ಸೂಚನಾ ಫಲಕ ಹಾಕದಿರುವುದರಿಂದ ಸಮಸ್ಯೆಯಾಗುತ್ತಿದ್ದು, ಸಂಚಾರ ದಟ್ಟಣೆಗೆ ಕಾರಣವಾಗಿದೆ, ಇದನ್ನು ಸರಿಪಡಿಸಬೇಕು ಎಂದು ಇದೇ ವೇಳೆ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು ಎನ್‌ಎಚ್‌ಎಐ ಅಧಿಕಾರಿಯ ಗಮನಕ್ಕೆ ತಂದರು.ಬಿ.ಸಿ.ರೋಡ್‌ನಿಂದ ಸುರತ್ಕಲ್‌ ವರೆಗೆ ಹೆದ್ದಾರಿಯ ಬಾಕಿ ಉಳಿದ ಕೆಲಸಗಳು, ನಿರ್ವಹಣೆಗೆ ಆಗಬೇಕಾದ ಕಾರ್ಯಗಳು, ಅದರ ವೆಚ್ಚವನ್ನು ಪರಿಶೀಲಿಸಿ ಶೀಘ್ರ ನೀಡುವಂತೆಯೂ ಅಧಿಕಾರಿಗೆ ಸೂಚಿಸಲಾಯಿತು.