ಸೂರು ಕಲ್ಪಿಸಲು ಫಲಾನುಭವಿಗಳ ಆಯ್ಕೆಗೆ ಸೂಚನೆ

| Published : Nov 11 2024, 11:45 PM IST

ಸಾರಾಂಶ

ಕೆಜಿಎಫ್‌ ನಗರದ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ನೀಡುವ ಮೂಲಕ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಒಂದು ವೇಳೆ ತಪ್ಪು ಮಾಹಿತಿ ನೀಡಿ, ನಿವೇಶನ ಇರುವುದನ್ನು ಮುಚ್ಚಿಟ್ಟು ಸರಕಾರದಿಂದ ನಿವೇಶನ ಪಡೆದಿರುವುದು ಪತ್ತೆಯಾದರೆ, ಅಂತಹವರ ನಿವೇಶನಗಳನ್ನು ತಕ್ಷಣ ರದ್ದುಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೆಜಿಎಫ್ನಗರದ ರೋಜರ್ ಕ್ಯಾಂಪ್ ಬಳಿ ೧೫ ಎಕರೆ ಪ್ರದೇಶದಲ್ಲಿ ವಸತಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಬಡಾವಣೆಯ ನಿವೇಶನಕ್ಕಾಗಿ ೩೬೮೦ ಅರ್ಜಿಗಳು ಬಂದಿದ್ದು, ನೈಜ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಶಾಸಕಿ ರೂಪಕಲಾಶಶಿಧರ್ ತಾಲೂಕು ಮಟ್ಟದ ವಸತಿ ಸಭೆಯಲ್ಲಿ ತಿಳಿಸಿದರು.ನಗರಸಭೆ ಕಚೇರಿಯಲ್ಲಿ ವಸತಿ ಸಭೆಯಲ್ಲಿ ಮಾತನಾಡಿದ ಶಾಸಕರು, ನಗರದ ೩೫ ವಾರ್ಡ್‌ಗಳಲ್ಲಿ ಅರ್ಜಿ ಸಲ್ಲಿಸಿರುವ ನೈಜ ಫಾಲಾನುಭವಿಗಳ ಆಯ್ಕೆ ಮಾಡಿ ಒಂದು ವಾರದೊಳಗೆ ನಗರಸಭೆ ನೋಟಿಸ್ ಬೋರ್ಡ್‌ನಲ್ಲಿ ಫಲಾನುಜಭವಿಗಳ ಪಟ್ಟಿ ಪ್ರಕಟಿಸಬೇಕೆಂದು ಪೌರಾಯುಕ್ತ ಪವನ್‌ಕುಮಾರ್‌ಗೆ ಸೂಚನೆ ನೀಡಿದರು.ನಿವೇಶನ ರಹಿತರಿಗೆ ವಸತಿ

ನಗರದ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ನೀಡುವ ಮೂಲಕ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಒಂದು ವೇಳೆ ತಪ್ಪು ಮಾಹಿತಿ ನೀಡಿ, ನಿವೇಶನ ಇರುವುದನ್ನು ಮುಚ್ಚಿಟ್ಟು ಸರಕಾರದಿಂದ ನಿವೇಶನ ಪಡೆದಿರುವುದು ಪತ್ತೆಯಾದರೆ, ಅಂತಹವರ ನಿವೇಶನಗಳನ್ನು ತಕ್ಷಣ ರದ್ದುಪಡಿಸಬೇಕೆಂದು ಸಭೆಗೆ ತಿಳಿಸಿದರು. ಈಗಾಗಲೇ ನಗರಸಭೆಯಿಂದ ವಸತಿ ಹಾಗೂ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಅರ್ಜಿ ಕರೆಯಲಾಗಿತ್ತು, ಈ ವೇಳೆ ನಗರದ ಸುಮಾರು ೩೬೮೦ ಅರ್ಜಿಗಳು ಸ್ವೀಕೃತಿಯಾಗಿದ್ದವು. ಆಶ್ರಯ ಸಮಿತಿ ಹಾಗೂ ನಗರಸಭೆಯಿಂದ ಮನೆ ಮನೆ ಸರ್ವೇ ಮಾಡಿ ನಿಜವಾದ ಫಲಾನುಭವಿಗಳ ಪಟ್ಟಿ ತಯಾರಿಸಲಾಗಿತ್ತು. ಇದರಲ್ಲಿ ೫೦೦ಕ್ಕೂ ಹೆಚ್ಚು ಅರ್ಜಿಗಳು ತಿರಸ್ಕೃತ ಗೊಂಡಿರುವುದಾಗಿ ವಸತಿ ಯೋಜನೆಯ ಅಧಿಕಾರಿ ಶಶಿಕುಮಾರ್ ಸಭೆಗೆ ಮಾಹಿತಿ ನೀಡಿದರು. ಅಕ್ಷೇಪಣೆ ಸಲ್ಲಿಸಲು ಅವಕಾಶ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟುಹೋಗಿದ್ದರೇ ಅಂತಹ ಫಲಾನುಭವಿಗಳು ಆಯ್ಕೆ ಪಟ್ಟಿ ಪ್ರಕಟಗೊಂಡ ನಂತರ ೧೦ ದಿನಗಳ ಒಳಗೆ ವಸತಿ ಯೋಜನೆಯ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಬಹುದು, ಒಂದು ವೇಳೆ ಯಾವುದೇ ಆಕ್ಷೇಪಣೆ ಸಲ್ಲಿಸದೆ ಇದ್ದಲ್ಲಿ ಅಂತಿಮವಾಗಿ ಆಯ್ಕೆಗೊಂಡಿರುವ ವಸತಿ ಯೋಜನೆಯ ಫಲಾನುಭಿಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಿ ಹಕ್ಕು ಪತ್ರವನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಎಲ್ಲಾ ಲೇಔಟನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಈಗಾಗಲೇ ಕುಡಿಯುವ ನೀರು, ಚರಂಡಿ, ವಿದ್ಯುತ್ ಕಾಮಗಾರಿ ಕೈಗೊಳ್ಳಲಾಗಿದೆ. ನಿವೇಶನ ಹಂಚಿಕೆ ಆದ ನಂತರ ಮನೆ ಕಟ್ಟಿಕೊಳ್ಳಲು ಎಸ್‌ಸಿ, ಎಸ್‌ಟಿಗಳಿಗೆ ೩.೩೦ ಲಕ್ಷ ರೂ.ಗಳು ಹಾಗೂ ಇತರರಿಗೆ ೨.೭೦ ಲಕ್ಷ ರೂ.ಗಳು ಸಹಾಯಧನ ರಾಜ್ಯ ಸರಕಾರ ನೀಡಲಿದೆ. ನಗರದಲ್ಲಿ ಕಳೆದ ಹತ್ತು ವರ್ಷದಿಂದ ಶಾಶ್ವತವಾಗಿ ಯಾರು ವಾಸವಾಗಿರುವ ವಸತಿ ಹಾಗೂ ನಿವೇಶನ ರಹಿತ ಪ್ರತಿಯೊಬ್ಬರಿಗೆ ಸೂರು ಕಲ್ಪಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ತಿಳಿಸಿದರು.ಲಾಟರಿ ಮೂಲಕ ಆಯ್ಕೆ೧೫ ಎಕರೆ ಪ್ರದೇಶದಲ್ಲಿ ಸುಸಜಿತ ೫೪೮ ನಿವೇಶನಗಳನ್ನು ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿರುವವರಿಗೆ ಲಾಟರಿ ಮುಖಾಂತರ ಆಯ್ಕೆ ಮಾಡಿದ ನಂತರ ರಾಜೀವ್ ಗಾಂದಿ ಹೌಸಿಂಗ್ ಕಾರ್ಪೊರೇಷನ್ ಮುಖಾಂತರ ಹಕ್ಕು ಪತ್ರವನ್ನು ವಿತರಿಸಿ ಕೇಂದ್ರ ಮತ್ತು ರಾಜ್ಯ ಸರಕಾರ ಮನೆ ನಿರ್ಮಾಣಕ್ಕೆ ಸಹಾಯದನ ನೀಡಲಿದೆ. ಬಲ್ಲಿಗಾನಹಳ್ಳಿಯ ಬಳಿ ೯ ಎಕರೆ ಪ್ರದೇಶದಲ್ಲಿ ಬಡವರಿಗೆ ನಿವೇನ ನೀಡಲು ಈಗಾಗಲೇ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಎರಡನೇ ಹಂತದಲ್ಲಿ ೩೦೦ ನಿವೇಶನಗಳಲ್ಲಿ ಅಭಿವೃದ್ದಿಪಡಿಸಿ ಸೂರು ಇಲ್ಲದವರಿಗೆ ನಿವೇಶನ ಹಂಚಲಾಗುವುದೆಂದು ಸಭೆಯಲ್ಲಿ ಶಾಸಕರು ತಿಳಿಸಿದರು.ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಇಂದಿರಾ ಗಾಂಧಿ, ತಹಸೀಲ್ದಾರ್ ನಾಗವೇಣಿ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಧರ್ಮೇಂದ್ರ, ಪೌರಾಯುಕ್ತ ಪವನ್‌ಕುಮಾರ್, ಎಇಇ ಮಂಜುನಾಥ್ ಮತ್ತಿತರರು ಇದ್ದರು.