ಸಾರಾಂಶ
ಕನ್ನಡಪ್ರಭ ವಾರ್ತೆ ಸಂಡೂರು
ಕಾರ್ಖಾನೆಯಿಂದ ಹೊರ ಸೂಸುವ ಕರಿಧೂಳಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಹಾಗೂ ಜಾನುವಾರುಗಳ ಮೇಲೆ ದುಷ್ಪರಿಣಾಮ ಬೀರುವಂತಹ ಪರಿಸ್ಥಿತಿ ಕಂಡುಬಂದಿರುವುದನ್ನು ಗಮನಿಸಿ ತಾಲೂಕಿನ ರಣಜಿತ್‌ಪುರ ಗ್ರಾಮದ ಬಳಿಯ ಆರ್‌ಐಪಿಎಲ್(ರಣಜಿತ್‌ಪುರ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್) ಕಂಪನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಶುಕ್ರವಾರ ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಆದೇಶಿಸಿದ್ದಾರೆ.ಕಾರ್ಖಾನೆಯಿಂದ ಹೊರಸೂಸುತ್ತಿರುವ ಕರಿ ಧೂಳು ಸುತ್ತಲಿನ ಗ್ರಾಮಗಳಲ್ಲಿನ ಮನೆ, ಹೊಲತೋಟಗಳಲ್ಲಿ ಆವರಿಸಿ ಕೃಷಿ ಹಾಗೂ ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗ್ರಾಮ ಪಂಚಾಯಿತಿಯಿಂದ ಎನ್‌ಒಸಿ ಪಡೆಯದೆ ಕಾರ್ಖಾನೆಯನ್ನು ನಡೆಸಲಾಗುತ್ತಿದೆ. ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುತ್ತಿಲ್ಲ. ಕಾರ್ಖಾನೆ ಆರಂಭಿಸುವಾಗ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿ, ಕಾರ್ಖಾನೆಯನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಣಜಿತ್‌ಪುರ, ನರಸಿಂಗಾಪುರ, ವಿಠಲನಗರ, ಆಕಾಶನಗರ ಕ್ಯಾಂಪ್‌ನ ನಿವಾಸಿಗಳು ಬುಧವಾರ ನರಸಿಂಗಾಪುರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ್ದರು.
ಈ ಕುರಿತು ಚರ್ಚಿಸಲು ಶುಕ್ರವಾರ ಗ್ರಾಮ ಪಂಚಾಯಿತಿಯ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಜನರ ಪ್ರತಿಭಟನೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಹಾಗೂ ತಾಲೂಕು ಪಂಚಾಯಿತಿ ಇಒ ಎಚ್. ಷಡಾಕ್ಷರಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿದ್ದಲ್ಲದೆ, ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದರು.ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಶ್ರೀನಾಥ್, ಉಪಾಧ್ಯಕ್ಷ ಪರ್ವತ ಕುಮಾರ್ ಹಾಗೂ ಸದಸ್ಯರು, ‘ವಾಷಿಂಗ್ ಪ್ಲಾಂಟ್ ಆರಂಭಿಸುತ್ತೇವೆಂದ ಕಂಪನಿಯವರು ಸ್ಪಾಂಜ್ ಐರನ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಎನ್‌ಒಸಿ ಪಡೆದಿಲ್ಲ. ಕಾರ್ಖಾನೆ ಆರಂಭಿಸುವಾಗ ನಾರಿಹಳ್ಳ ಜಲಾಶಯದಿಂದ ನೀರನ್ನು ಪಡೆಯುತ್ತೇವೆ ಎಂದಿದ್ದರು. ಈಗ ಕಾರ್ಖಾನೆ ಸುತ್ತಲು ೫೦೦- ೬೦೦ ಅಡಿ ಒಳಗೆ ೧೬ ಕೊಳವೆ ಬಾವಿ ಕೊರೆದಿದ್ದಾರೆ. ಇದರಿಂದ ಸುತ್ತಲಿನ ಗ್ರಾಮಗಳಲ್ಲಿ ಅಂತರ್ಜಲದ ಮಟ್ಟ ಕುಸಿದಿದೆ. ಕಾರ್ಖಾನೆಯಿಂದ ಹೊರ ಸೂಸುವ ಕರಿ ಧೂಳು ಮನೆ, ಜಮೀನುಗಳ ಮೇಲೆ ಆವರಿಸಿ ಕೃಷಿ ಹಾಗೂ ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ದೂರಿದರು.
‘ಕಾರ್ಖಾನೆಯವರು ನೀಡಿದ್ದ ಒಂದು ಭರವಸೆಯನ್ನು ಈಡೇರಿಸಿಲ್ಲ. ಒಂದು ಆರೋಗ್ಯ ತಪಾಸಣಾ ಶಿಬಿರವನ್ನು ಮಾಡಿಲ್ಲ. ಇತ್ತೀಚೆಗೆ ಕಾರ್ಖಾನೆಯ ಸುತ್ತಲಿನ ಗ್ರಾಮಗಳಲ್ಲಿನ ಜನರಲ್ಲಿ ಚರ್ಮ ರೋಗ, ಶ್ವಾಸಕೋಶದ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆ ಸ್ಥಗಿತಗೊಳಿಸಲು ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ನಾವು ವಿಶೇಷ ಸಭೆ ಕರೆದಿದ್ದೆವು. ಸಭೆಯಲ್ಲಿ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕೋರಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೆವು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕ್ರಮ ಕೈಗೊಂಡಿದ್ದಾರೆ’ ಎಂದರು.ಕಾರ್ಖಾನೆಯಿಂದ ಉಂಟಾಗುತ್ತಿರುವ ತೊಂದರೆಗಳ ಕುರಿತು ರಣಜಿತ್‌ಪುರ, ನರಸಿಂಗಾಪುರ ಗ್ರಾಮಸ್ಥರಾದ ಎಚ್. ಕಾಡಪ್ಪ, ಜಿ. ಬಸವನಗೌಡ, ಜಿ. ಪರಮೇಶ್ವರಪ್ಪ, ನೀಲಕಂಠ, ಹನುಮಂತಪ್ಪ, ಗಂಗಪ್ಪ, ಎಂ.ಎಸ್. ಅಂಜಿನೇಯ, ಸಣ್ಣ ಗಾದೆಪ್ಪ ಮುಂತಾದವರು ಕಾರ್ಖಾನೆಯಿಂದ ಉಂಟಾಗುತ್ತಿರುವ ತೊಂದರೆಗಳ ಕುರಿತು ವಿವರಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))