ವಕ್ಫ್‌ನಿಂದ ನೋಟಿಸ್‌, ರೈತರ ಪ್ರತಿಭಟನೆ

| Published : Oct 29 2024, 12:55 AM IST / Updated: Oct 29 2024, 12:56 AM IST

ಸಾರಾಂಶ

ಕನ್ನಡ ಪ್ರಭ ವಾರ್ತೆ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರ ಗ್ರಾಮದ ರೈತರಿಗೆ ವಕ್ಫ್ ಆಸ್ತಿ ವಿಚಾರವಾಗಿ ನೋಟಿಸ್ ಜಾರಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಲ್ಹಾರ ತಾಲೂಕು ಘಟಕದ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.ಕೊಲ್ಹಾರ ತಾಲೂಕು ಘಟಕದ ಅಧ್ಯಕ್ಷ ಸೋಮು ಬಿರಾದಾರ ನೇತೃತ್ವದಲ್ಲಿ ಪ್ರಭಾರಿ ತಹಸೀಲ್ದಾರ್ ಪಿ.ಜಿ.ಪವಾರ ಮೂಲಕ ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನೀಡಿರುವ ನೋಟಿಸ್‌ ಅನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದರು.

ಕನ್ನಡ ಪ್ರಭ ವಾರ್ತೆ ಕೊಲ್ಹಾರ

ತಾಲೂಕಿನ ಹಳ್ಳದ ಗೆಣ್ಣೂರ ಗ್ರಾಮದ ರೈತರಿಗೆ ವಕ್ಫ್ ಆಸ್ತಿ ವಿಚಾರವಾಗಿ ನೋಟಿಸ್ ಜಾರಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಲ್ಹಾರ ತಾಲೂಕು ಘಟಕದ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.ಕೊಲ್ಹಾರ ತಾಲೂಕು ಘಟಕದ ಅಧ್ಯಕ್ಷ ಸೋಮು ಬಿರಾದಾರ ನೇತೃತ್ವದಲ್ಲಿ ಪ್ರಭಾರಿ ತಹಸೀಲ್ದಾರ್ ಪಿ.ಜಿ.ಪವಾರ ಮೂಲಕ ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನೀಡಿರುವ ನೋಟಿಸ್‌ ಅನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸೋಮು ಬಿರಾದಾರ, ಹಳ್ಳದ ಗೆಣ್ಣೂರ ಗ್ರಾಮದ ಸರ್ವೆ ನಂ.299/1 ರೈತ ಮಹಿಳೆ ಮಹಾದೇವಿ ಬೆಳ್ಳುಬ್ಬಿ (ಉಪ್ಪಾರ ), 299/2 ಸುಭಾಸ್‌ ಗು. ಉಪ್ಪಾರ ಹಾಗೂ 299/3 ಪರಶುರಾಮ ಕ ಬೆಳ್ಳುಬ್ಬಿ ಎಂಬುವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಇನ್ನುಳಿದ ರೈತರಿಗೆ ನ.6 ಮತ್ತು 7 ರಂದು ನೋಟಿಸ್‌ ಜಾರಿ ಮಾಡುತ್ತೀರಿ ಎಂದು ತಿಳಿದು ಬಂದಿದೆ. ಕೊಲ್ಹಾರ ತಾಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸುತ್ತಮುತ್ತಲಿನ ಎಲ್ಲ ರೈತರ ಜಮೀನುಗಳಿಗೆ ವಕ್ಫ್‌ ಬೋರ್ಡ್‌ನಿಂದ ರೈತರಿಗೆ ನೀಡುತ್ತಿರುವ ನೋಟಿಸ್‌ಗಳನ್ನು ತಡೆ ಹಿಡಿಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಒಂದು ವೇಳೆ ತಡೆ ಹಿಡಿಯದಿದ್ದರೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಲ್ಹಾರ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ರೈತರು ಇದ್ದರು.