ಕಡಿಮೆ ಪ್ರಗತಿ ಸಾಧಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ: ಜಾನಕಿ ಕೆ.ಎಂ

| Published : Mar 01 2025, 01:01 AM IST

ಕಡಿಮೆ ಪ್ರಗತಿ ಸಾಧಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ: ಜಾನಕಿ ಕೆ.ಎಂ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಶೇ.50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಶೇ.50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ 2025 ಜನವರಿ ಅಂತ್ಯದವರೆಗಿನ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ತಿಳಿಸಿದರು.

ವಿವಿಧ ಇಲಾಖೆಗಳಿಗೆ ಹಂಚಿಕೆಯಾಗಿರುವ ಅನುದಾನವನ್ನು ಯಾವುದೇ ರೀತಿ ಹಿಂದಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಮಾ.31 ರೊಳಗಾಗಿ ಬಿಡುಗಡೆಯಾದ ಅನುದಾನ ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಲು ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಮಾತನಾಡಿ, ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಆಯಾ ಇಲಾಖೆಗೆ ಹಂಚಿಕೆಯಾದ ಅನುದಾನವನ್ನು ಕಾಲಮಿತಿಯಲ್ಲಿ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸುವ ಮೂಲಕ ಸರಕಾರದ ಸೌಲಭ್ಯವನ್ನು ಎಸ್.ಸಿ, ಎಸ್.ಟಿ ಸಮುದಾಯದ ಜನರಿಗೆ ತಲುಪಿಸುವ ಕೆಲಸವಾಗಬೇಕು. ಕೃಷಿ ಇಲಾಖೆ ಮೂಲಕ ಬೀಜಗಳ ಪೂರೈಕೆ ಕಾರ್ಯಕ್ರಮ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಕೃಷಿ ಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡಬೇಕು ಎಂದರು.

ಶಿಕ್ಷಣ, ಆರೋಗ್ಯ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಪ್ರವಾಸೋದ್ಯಮ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕವಿತಾಳ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.