ಪವರ್ ಮೆಕ್ ಕಂಪನಿ ವಿರುದ್ಧ ಕ್ರಮಕ್ಕೆ ಸೂಚನೆ

| Published : Nov 20 2024, 12:34 AM IST

ಸಾರಾಂಶ

ರಾಯಚೂರು: ಇಲ್ಲಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಿಪಿಎಸ್)ನ ನಿರ್ವಹಣೆಗೆ ಗುತ್ತಿಗೆ ಪಡೆದಿರುವ ಪವರ ಮೆಕ್ ಕಂಪನಿಯ ನಿರ್ಲಕ್ಷ್ಯತನದ ವಿರುದ್ಧ ಕ್ರಮಕ್ಕಾಗಿ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ)ಗೆ ದೂರು ಸಲ್ಲಿಸುವಂತೆ ಕೆಪಿಸಿಯ ಅಧಿಕಾರಿಗಳಿಗೆ ಮಂಗಳವಾರ ಸೂಚಿಸಲಾಯಿತು.

ರಾಯಚೂರು: ಇಲ್ಲಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಿಪಿಎಸ್)ನ ನಿರ್ವಹಣೆಗೆ ಗುತ್ತಿಗೆ ಪಡೆದಿರುವ ಪವರ ಮೆಕ್ ಕಂಪನಿಯ ನಿರ್ಲಕ್ಷ್ಯತನದ ವಿರುದ್ಧ ಕ್ರಮಕ್ಕಾಗಿ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ)ಗೆ ದೂರು ಸಲ್ಲಿಸುವಂತೆ ಕೆಪಿಸಿಯ ಅಧಿಕಾರಿಗಳಿಗೆ ಮಂಗಳವಾರ ಸೂಚಿಸಲಾಯಿತು.ಸ್ಥಳೀಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಅಧ್ಯಕ್ಷತೆಯಲ್ಲಿ ನಡೆದ ರಾಯಚೂರು ತಾಲೂಕು ಪಂಚಾಯ್ತಿಯ 4ನೇ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

ವೈಟಿಪಿಎಸ್ಗಾಗಿ ಭೂಮಿ ಕಳೆದುಕೊಂಡವರಿಗೆ ಹಾಗೂ ಸ್ಥಳೀಯರಿಗೆ ಕೇಂದ್ರದಲ್ಲಿ ಉದ್ಯೋಗ ನೀಡದೇ ಬೇರೆ ರಾಜ್ಯಗಳವರಿಗೆ ಉದ್ಯೋಗ ಕಲ್ಪಿಸುವ ಮುಖಾಂತರ ನಿಯಮ ಉಲ್ಲಂಘಿಸಲಾಗಿದೆ. ಇಷ್ಟೇ ಅಲ್ಲದೇ ಕೇಂದ್ರದ ನಿರ್ವಹಣೆ, ಸವಲತ್ತುಗಳನ್ನು ಕಲ್ಪಿಸಿಕೊಡುವಲ್ಲಿಯೂ ಸಹ ಪವರ್ ಮೆಕ್ ಕಂಪನಿಯು ಬೆಜವಾಬ್ದಾರಿ ತೋರಿಸುತ್ತಿರುವುದು ಕಂಡುಬರುತ್ತಿದ್ದು, ಈ ಹಿನ್ನೆಲೆಯಲ್ಲಿ ತ್ರೈಮಾಸಿಕ ಸಭೆಯಲ್ಲಿ ತೆಗೆದುಕೊಂಡ ನಿರ್ಮಾಣದ ಬಗ್ಗೆ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡಬೇಕು ಎಂದು ಆರ್‌ಟಿಪಿಎನ್ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಶಾಸಕರಾದ ಡಾ.ಶಿವರಾಜ ಪಾಟೀಲ್ ಹಾಗೂ ಬಸನಗೌಡ ದದ್ದಲ್‌ ಅವರು ಸೂಚನೆ ನೀಡಿದರು.ಭತ್ತ ಬೆಂಬಲ ಖರೀದಿ ಕೇಂದ್ರಗಳನ್ನು ಕೂಡಲೇ ಆರಂಭಿಸಬೇಕು. ಇಲ್ಲದೇ ಇದ್ದರೆ, ರೈತರು ನಷ್ಟಕ್ಕೊಳಗಾಗುತ್ತಾರೆ. ಯಾವುದೇ ಕಾರಣಕ್ಕೂ ಖರೀದಿ ಕೇಂದ್ರಗಳ ಆರಂಭಿಸಲು ವಿಳಂಬ ಮಾಡಬಾರದು ಎಂದು ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಆಹಾರ ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾವಂತಗೇರಿ ಅವರಿಗೆ ಸೂಚನೆ ನೀಡಿದರು.ಗ್ರಾಮೀಣ ಪ್ರದೇಶದಲ್ಲಿ ಬಹಿರ್ದೆಸೆ ಹೋಗುವುದು ನಿಂತಿಲ್ಲ. ಕೂಡಲೇ ಜಾಗೃತಿ ಮೂಡಿಸಬೇಕು. ವೈಯಕ್ತಿ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು. ಯಾರು ವೈಯಕ್ತಿ ಶೌಚಾಲಯ ನಿರ್ಮಿಸಿಕೊಂಡಿಲ್ಲ ಅಂಥವರನ್ನು ಗುರುತಿಸಬೇಕು ಎಂದು ಶಾಸಕ ಡಾ.ಶಿವರಾಜ ಪಾಟೀಲ್ ಅಧಿಕಾರಿಗಳಿಗೆ ಸಲಹೆ ನೀಡಿದರು.ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿದ ಅವರು, ನಗರಾಭಿವೃದ್ಧಿ ಇಲಾಖೆ ಹಾಗೂ ನಗರ ಯೋಜನೆ ಸೇವಾ ಸಂಬಂಧಿಸಿದಂತೆ ಈಗಾಗಲೇ ಹೊರಡಿಸಿರುವ ಗ್ರಾಮಗಳ ಪಟ್ಟಿಯಲ್ಲಿ ರಾಯಚೂರು ನಗರಕ್ಕೆ ಸಮೀಪದಲ್ಲಿರುವ ಗ್ರಾಮಗಳು ಬಿಟ್ಟು ಹೋಗಿವೆ. ನಮ್ಮ ಗಮನಕ್ಕೆ ತರದೇ ಯಾಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ನಗರಭಿವೃದ್ಧಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಅಲ್ಲದೇ ಕೆಲ ಗ್ರಾಮಗಳು ಗೆಜೆಟ್‌ನಲ್ಲಿ ಇದ್ದರೂ ಆ ಗ್ರಾಮಗಳಿಲ್ಲ. ಇಂಥ ಲೋಪದೋಷಗಳಿಗೆ ಅವರುಗಳನ್ನು ಸರಿಪಡಿಸಬೇಕು ಎಂದು ಸೂಚನೆ ನೀಡಿದರು.ತೋಟಗಾರಿ ಇಲಾಖೆಯ ಅಧಿಕಾರಿಗಳು ರಾಯಚೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ತೋಟಗಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೆಳೆಗಳಿಗೆ ಯಾವುದೇ ರೋಗ ಹರಡಿದರೂ ಕೃಷಿ ವಿವಿಯಲ್ಲಿ ವಿಜ್ಞಾನಿಗಳಿದ್ದಾರೆ. ಅವರಿಗೆ ಮಾಹಿತಿ ನೀಡಬೇಕು. ಅಧಿಕಾರಿಗಳು ರೈತರು ತೋಟಗಾರಿಕೆ ಬೆಳೆ ಬೆಳೆದ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಸಹಾಯಕ ಆಯುಕ್ತ ಗಜಾನನ ಬಾಳೆ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ತಹಸೀಲ್ದಾರ್ ಸುರೇಶ ವರ್ಮಾ,ತಾಪಂ ಇಒ ಚಂದ್ರಶೇಖರ ಪವಾರ, ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಪವನ ಪಾಟೀಲ್, ಪಿಡಿ ಶರಣಬಸವ ಸೇರಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.