ಸಾರಾಂಶ
ಬಳ್ಳಾರಿ: ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆಸ್ಪತ್ರೆಯ ಚೀಫ್ ಫಾರ್ಮಾಸಿಸ್ಟ್ ಕೊಟ್ರೇಶ್ ಸೇರಿದಂತೆ ಕರ್ತವ್ಯ ಲೋಪ ಎಸಗಿದ ಹಲವು ವೈದ್ಯರು, ಸಿಬ್ಬಂದಿ ಅಮಾನತು ಮಾಡುವಂತೆ ಶಾಸಕ ನಾರಾ ಭರತ್ ರೆಡ್ಡಿ ಬಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಅವರಿಗೆ ಸೂಚನೆ ನೀಡಿದರು.
ಶುಕ್ರವಾರ ಬೆಳಗ್ಗೆ ಬಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ನಾರಾ ಭರತ್ ರೆಡ್ಡಿ, ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗಕ್ಕೆ ಭೇಟಿ ನೀಡಿ ಬಹಳಷ್ಟು ಒಳರೋಗಿಗಳನ್ನು, ಬಾಣಂತಿಯರನ್ನು ವಿಚಾರಿಸಿ, ಖುದ್ದು ಅವ್ಯವಸ್ಥೆಯನ್ನು ಕಂಡು ಕ್ರಮಕ್ಕೆ ಸೂಚನೆ ನೀಡಿದರು.ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಭರ್ತಿಯಾಗಿ ವಿವಿಧ ಕಾಯಿಲೆಗಳಿಗೆ ತುತ್ತಾಗಿ, ನಂತರ ಬಿಮ್ಸ್ ಅಸ್ಪತ್ರೆಗೆ ದಾಖಲಾಗಿದ್ದ ಐವರು ಬಾಣಂತಿಯರ ಪೈಕಿ ಮೂವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಸರ್ಜನ್ ಅವರಿಗೆ ಸೂಚನೆ ನೀಡಿರುವೆ. ವರದಿ ಬಂದ ನಂತರ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ನಾನು ಈ ಹಿಂದೆಯೇ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರ ಗಮನಕ್ಕೆ ತಂದಿದ್ದೆ. ಆದಾಗ್ಯೂ ಇಲ್ಲಿನ ಅವ್ಯವಸ್ಥೆ ಬದಲಾಗಿಲ್ಲ ಎಂದು ಶಾಸಕ ರೆಡ್ಡಿ ತಿಳಿಸಿದರು.ಔಷಧಿಗಳು ಲಭ್ಯ ಇದ್ದರೂ ಹೊರಗಡೆಯಿಂದ ತರಲು ಚೀಟಿ ಬರೆಯುತ್ತಿದ್ದಾರೆ. ಮಾತ್ರವಲ್ಲ ರಕ್ತ ಪರೀಕ್ಷೆಯನ್ನು ಕೂಡ ನಿರ್ದಿಷ್ಟ ಖಾಸಗಿ ಲ್ಯಾಬ್''''ಗೆ ಬರೆದು ಕಳಿಸಲಾಗುತ್ತಿದೆ. ಈ ಬಗ್ಗೆ ತನಿಖೆ ಮಾಡಿಸಲಾಗುವುದು ಎಂದು ತಿಳಿಸಿದರು.
ಬಿಮ್ಸ್ ವೈದ್ಯರು ಮಾತ್ರೆಗಳನ್ನು ಪೂರೈಸದೇ ಹೊರಗಡೆಯಿಂದ ತರುವಂತೆ ಚೀಟಿ ಬರೆಯುತ್ತಿರುವ ಬಗ್ಗೆ ಬಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಡಾ.ವೀರೇಂದ್ರಕುಮಾರ್, ಡಾ.ವಿಜಯಲಕ್ಷ್ಮೀ, ಚೀಫ್ ಫಾರ್ಮಾಸಿಸ್ಟ್ ಕೊಟ್ರೇಶ್ ಅವರನ್ನು ಶಾಸಕ ನಾರಾ ಭರತ್ ರೆಡ್ಡಿ ತರಾಟೆಗೆ ತೆಗೆದುಕೊಂಡರು.ಪ್ರಸವ ಪೂರ್ವ ವಿಭಾಗ, ಪ್ರಸವ ನಂತರದ ಬಾಣಂತಿಗಳ ವಿಭಾಗಕ್ಕೆ ಭೇಟಿ ನೀಡಿ ಬಾಣಂತಿಯರ ಕ್ಷೇಮ ವಿಚಾರಿಸಿದರು. ಬಾಣಂತಿಯರ ವಾರ್ಡಿನ ಸ್ನಾನಗೃಹ ಶೌಚಾಲಯಗಳ ನೈರ್ಮಲ್ಯ ಶುಚಿತ್ವ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಹೊರ ಗುತ್ತಿಗೆ ಕಾರ್ಮಿಕರ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ, ಕಾರ್ಮಿಕರಿಂದ ಸರಿಯಾಗಿ ಕೆಲಸ ಮಾಡಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಈ ವೇಳೆ ಡೆಂಘೀ ಪೀಡಿತ ಗರ್ಭಿಣಿಯ ಸಂಬಂಧಿಗಳು ವೈದ್ಯರ ವಿರುದ್ಧ ದೂರು ಹೇಳಿದರು. ಬಿಳಿ ರಕ್ತ ಕಣಗಳನ್ನು ಖಾಸಗಿ ರಕ್ತ ಭಂಡಾರದಿಂದ ತರಿಸಲಾಗಿದ್ದು, ಅಪಾರ ಪ್ರಮಾಣದ ದುಡ್ಡು ಖರ್ಚಾಗಿದೆ ಎಂದು ತಿಳಿಸಿದರು.
ಔಷಧಗಳ ಉಪ ಉಗ್ರಾಣಕ್ಕೆ ಭೇಟಿ ನೀಡಿ ಔಷಧಗಳ ಆವಕ ಜಾವಕ ಪರಿಶೀಲಿಸಿದರು. ಈ ವೇಳೆ ಸಮರ್ಪಕ ಉತ್ತರ ನೀಡದ ಚೀಫ್ ಫಾರ್ಮಾಸಿಸ್ಟ್ ಕೊಟ್ರೇಶ್ ಹಾಗೂ ಪ್ರಸೂತಿ ವಿಭಾಗದ ಹಲವು ವೈದ್ಯರು-ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಶಾಸಕ ನಾರಾ ಭರತ್ ರೆಡ್ಡಿ ಸೂಚಿಸಿದರು. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.