ರೈತರಿಗೆ ನೋಟಿಸ್‌: ಸರ್ಕಾರ ಮೌನವೇಕೆ?

| Published : Jul 29 2025, 01:00 AM IST

ಸಾರಾಂಶ

ಸರ್ಕಾರದಿಂದಲೇ ಮಂಜೂರಾತಿ ಆದೇಶ ಪತ್ರ ಪಡೆದು, ಖಾತೆ, ಪಹಣಿಯೊಂದಿಗೆ ಭೂಮಿ ಸಾಗುವಳಿ ಮಾಡುತ್ತಿರುವ ಜಿಲ್ಲೆಯ 35 ಸಾವಿರ ರೈತರ ಹಕ್ಕುಪತ್ರ ವಜಾ ಮಾಡಲು ಉಪ ವಿಭಾಗಾಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸರ್ಕಾರ ಮೌನ ವಹಿಸಿರುವುದು ಏಕೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಪ್ರಶ್ನಿಸಿದರು.

ಶಿವಮೊಗ್ಗ: ಸರ್ಕಾರದಿಂದಲೇ ಮಂಜೂರಾತಿ ಆದೇಶ ಪತ್ರ ಪಡೆದು, ಖಾತೆ, ಪಹಣಿಯೊಂದಿಗೆ ಭೂಮಿ ಸಾಗುವಳಿ ಮಾಡುತ್ತಿರುವ ಜಿಲ್ಲೆಯ 35 ಸಾವಿರ ರೈತರ ಹಕ್ಕುಪತ್ರ ವಜಾ ಮಾಡಲು ಉಪ ವಿಭಾಗಾಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸರ್ಕಾರ ಮೌನ ವಹಿಸಿರುವುದು ಏಕೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಪ್ರಶ್ನಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ ಭಾಗದ ಸಾವಿರಾರು ರೈತರಿಗೆ ನೊಟೀಸ್ ನೀಡಲಾಗಿದೆ. ಇದರದ ಮುಂದುವರಿದ ಭಾಗವಾಗಿ ಶಿಕಾರಿಪುರ ತಾಲೂಕು ಅಂಜನಾಪುರ ಹೋಬಳಿಯ ಕಲ್ಮನೆ ಗ್ರಾಮ ಪಂಚಾಯಿತಿಯ ಕಲ್ಮನೆ, ಚೌಡಿಹಳ್ಳ, ದೇವರಹಳ್ಳಿ, ಕೊಪ್ಪದ ಕೆರೆ ಗ್ರಾಮದ 63ಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ರೈತರ ಹಕ್ಕುಪತ್ರ ವಜಾ ಮಾಡಲು ನೋಟಿಸ್‌ ನೀಡುತ್ತಿದ್ದರೂ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರು ಮೌನ ವಹಿಸಿದ್ದಾರೆ. ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಮಹಾರಾಜರು-ಬ್ರಿಟಿಷರು ೧೩೫ ವರ್ಷಗಳ ಹಿಂದೆ ಅರಣ್ಯ ಎಂದು ನೋಟಿಫಿಕೇಷನ್ ಮಾಡಿದ್ದಾರೆಂದು ಕಾರಣ ನೀಡಿ, ಇದುವರೆಗೂ ಜಾರಿ ಮಾಡದೇ ಈಗ ಅರಣ್ಯ ಮಾಡಲು ಹೊರಟಿರುವ ಸರ್ಕಾರವನ್ನು ‘ಹುಚ್ಚು ಸರ್ಕಾರ’ ಎಂದು ಟೀಕಿಸಿದರು.ಜನವಸತಿ, ರೈತರ ಕೃಷಿ ಜಮೀನು ಇದೆ ಎಂದು ಹೇಳಿ ಸಾವಿರಾರು ಎಕರೆ ಜಮೀನನ್ನು ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಕಡಿತಗೊಳಿಸಿ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮಂಡಗದ್ದೆ, ಉಂಬಳೇಬೈಲು, ಗಾಜನೂರು ಪಂಚಾಯಿತಿಗಳಿಗೆ ವರ್ಗಾವಣೆ ಮಾಡಲು ಸರ್ಕಾರಗಳು ಕೈಗೊಂಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಉಳಿಸುವುದಾದರೆ ಬಸ್‌ಸ್ಟ್ಯಾಂಡ್, ಡಿಸಿ ಕಚೇರಿ, ಎಸ್ಪಿ ಕಚೇರಿ ಕೂಡ ಅರಣ್ಯ ಜಾಗ, ಆ ಜಾಗವನ್ನು ತೆರವುಗೊಳಿಸಿ ಇಲ್ಲಿಯೂ ಗಿಡ ನೆಡಬೇಕು ಎಂದು ಆಗ್ರಹಿಸಿದರು. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಆದೇಶಿಸಿವೆ ಎಂದು ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ರೈತರ ಹಿತ ಕಾಯುವಂತೆಯು ಕೋರ್ಟುಗಳು ಹೇಳಿವೆ. ಆದರೆ ಸರ್ಕಾರಗಳು ಅದನ್ನು ಎಂದೂ ಜಾರಿಗೊಳಿಸಿಲ್ಲ. ಕೋರ್ಟುಗಳೆ ರಾಜ್ಯವನ್ನು ಆಳುವುದಾದರೆ ಸರ್ಕಾರ ಏಕೆ ಬೇಕು. ಬ್ರಿಟೀಷರು, ರಾಜರ ಕಾಲದಲ್ಲಿ ಅರಣ್ಯ ಎಂದು ಘೋಷಿಸಲಾಗಿದೆ ಎಂದು ಈಗ ರೈತರನ್ನು ಒಕ್ಕಲೆಬ್ಬಿಸಲು ನೊಟೀಸ್ ನೀಡಲಾಗುತ್ತಿದೆ. ಇಂತಹ ಕಾನೂನು ರೂಪಿಸಿದ ಈಗಿನ ಸಂಸದ, ಶಾಸಕರು ಬ್ರಿಟೀಷರು, ರಾಜರ ಸಂತತಿನಾ? ಎಂದು ಪ್ರಶ್ನಿಸಿದರು.ಬಗರ್‌ಹುಕುಂ ಸಾಗುವಳಿದಾರರ ಪರವಾಗಿ, ಭೂ ಹಕ್ಕಿಗಾಗಿ ಸೈಕಲ್ ಏರಿ ಯಡಿಯೂರಪ್ಪ ಹೋರಾಟ ಮಾಡಿದ್ದರು. ಆದರೆ ಅವರ ಮಕ್ಕಳು ರೈತ ಪರ ಹೋರಾಟ ಮಾಡುತ್ತಿಲ್ಲ. ಬಂಗಾರಪ್ಪ ಅವರು ರಾಜ್ಯದ ಜನರಿಗೆ ಭೂ ಹಕ್ಕು ನೀಡಿದರು. ಆದರೆ ಅವರದ್ದೇ ಮನೆ ಸಮೀಪದ ರೈತರಿಗೆ ನೋಟಿಸ್‌ ನೀಡಿದ್ದರೂ ಉಸ್ತುವಾರಿ ಸಚಿವ ಮಧುಬಂಗಾರಪ್ಪ ನಿದ್ರೆಯಿಂದ ಎದ್ದಿಲ್ಲ. ರೈತರಿಗೆ ಗೊಬ್ಬರ ವಿತರಣೆ ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದಾರೆ. ಆದರೆ ಶಿಕಾರಿಪುರದಲ್ಲೇ ಸಾವಿರಾರು ರೈತರಿಗೆ ನೊಟೀಸ್ ನೀಡಿದರೂ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಬಾರಿಯ ಅಧಿವೇಶನದಲ್ಲಿ ಈ ವಿಷಯವನ್ನು ಗಂಭೀರವಾಗಿ ಚರ್ಚಿಸಿ, ರೈತರ ಪರವಾದ ತೀರ್ಮಾನ ಕೈಗೊಳ್ಳದಿದ್ದರೆ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಲ್ಮನೆಯ ಕೊಟ್ರೇಶ್, ಈರಪ್ಪ, ಶಿವಮಾದಯ್ಯ, ಮಂಜುನಾಥ್, ಶ್ರೀನಿವಾಸ ಸೇರಿ ಹಲವರು ಇದ್ದರು. ಅರಣ್ಯ ಸಚಿವರಿಗೆ ದನ

ಕಾಯಲು ಯೋಗ್ಯತೆ ಇಲ್ಲಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ದನಕರುಗಳನ್ನು ಅರಣ್ಯಕ್ಕೆ ಮೇಯಲು ಬಿಡಬಾರದು ಎಂಬ ಆದೇಶ ಹೊರಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ತೀ.ನಾ. ಶ್ರೀನಿವಾಸ್ ಅವರು, ಮಲೆನಾಡು ಭಾಗದಲ್ಲಿ ದನಗಳನ್ನು ಅರಣ್ಯಕ್ಕೆ ಬಿಡದೆ ಎಲ್ಲಿಗೆ ಬಿಡಬೇಕು ಎಂದು ಪ್ರಶ್ನಿಸಿದರು.

ಅರಣ್ಯ ಸಚಿವನಿಗೆ ದನ ಕಾಯಲು ಯೋಗ್ಯತೆ ಇಲ್ಲ, ಅರಣ್ಯ ಸಚಿವರು ಮಾನಸಿಕ ಸ್ಥಿಮಿತೆ ಕಳೆದುಕೊಂಡಿದ್ದಾರೆ. ದಿನಕ್ಕೊಂದು ಆದೇಶ ಮಾಡುವುದೇ ಕೆಲಸವಾಗಿದೆ. ಸಿದ್ದರಾಮಯ್ಯ ಸರ್ಕಾರ ಕೂಡಲೇ ಅವರನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.