ಕಬ್ಬು ಬೆಳೆ ಹಾನಿ, ಪರಿಹಾರ ಪಾವತಿಗೆ ಹೆಸ್ಕಾಂಗೆ ಸೂಚನೆ

| Published : Oct 13 2023, 12:16 AM IST

ಕಬ್ಬು ಬೆಳೆ ಹಾನಿ, ಪರಿಹಾರ ಪಾವತಿಗೆ ಹೆಸ್ಕಾಂಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯುತ್ ಅವಘಡದಿಂದ ಉಂಟಾದ ಕಬ್ಬು ಬೆಳೆ ಹಾನಿ ಪರಿಹಾರ ಮೊತ್ತವನ್ನು ೩೦ ದಿನದೊಳಗಾಗಿ ರೈತನಿಗೆ ಪಾವತಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ವಿದ್ಯುತ್ ಅವಘಡದಿಂದ ಉಂಟಾದ ಕಬ್ಬು ಬೆಳೆ ಹಾನಿ ಪರಿಹಾರ ಮೊತ್ತವನ್ನು ೩೦ ದಿನದೊಳಗಾಗಿ ರೈತನಿಗೆ ಪಾವತಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

ಹಿರೇಕೆರೂರು ತಾಲೂಕು ಮುದ್ದಿನಕೊಪ್ಪ ಗ್ರಾಮದ ಲೋಕಪ್ಪ ಮಹದೇವಪ್ಪ ಹೊಂಬರಡಿ ತಮ್ಮ ೪.೧೨ ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಇವರ ಜಮೀನಿನಲ್ಲಿ ಹಾಯ್ದುಹೋದ ವಿದ್ಯುತ್ ಕಂಬಗಳ ತಂತಿಗಳು ಬಹಳ ಸಡಿಲವಾಗಿ ಜೋತಾಡುತ್ತಿದ್ದು, ತಂತಿಗಳನ್ನು ಬಿಗಿಪಡಿಸುವಂತೆ ಹಿರೇಕೆರೂರು ಹೆಸ್ಕಾಂ ಕಚೇರಿಗೆ ಮನವಿ ಮಾಡಿದ್ದರು. ಹೆಸ್ಕಾಂ ಅಧಿಕಾರಿಗಳು ತಂತಿ ಸರಿಪಡಿಸಿರಲಿಲ್ಲ. ೨೦೨೨ರ ಡಿ.೧೯ರಂದು ಮಧ್ಯಾಹ್ನ ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿ ಬೆಂಕಿ ಕಿಡಿ ಹೊತ್ತಿಕೊಂಡು ೪.೧೨ ಎಕರೆಯಲ್ಲಿ ಫಲವತ್ತಾಗಿ ಬೆಳೆದ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟುಹೋಗಿತ್ತು. ಈ ಘಟನೆಯ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೆಸ್ಕಾಂ ಅಧಿಕಾರಿಗಳು ಕಬ್ಬು ಬೆಳೆಹಾನಿಗೆ ಯಾವುದೇ ಪರಿಹಾರ ನೀಡದ ಹಿನ್ನೆಲೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್. ಈಶ್ವರಪ್ಪ ಹಾಗೂ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ, ಕಬ್ಬಿನ ಬೆಳೆಹಾನಿ ಪರಿಹಾರ ಮೊತ್ತ ₹೨,೭೫,೩೨೩ ಹಾಗೂ ಮಾನಸಿಕ, ದೈಹಿಕ ವ್ಯಥೆಗಾಗಿ ₹ಎರಡು ಸಾವಿರ ಗಳನ್ನು ೩೦ ದಿನದೊಳಗಾಗಿ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.೬ ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.