ಇಳಕಲ್ಲ ಮಹಿಳಾ ಸಾಂತ್ವನ ಕೇಂದ್ರಕ್ಕೆ ನೋಟಿಸ್: ಶಶಿಧರ ಕುರೇರ್

| Published : Mar 01 2024, 02:20 AM IST

ಇಳಕಲ್ಲ ಮಹಿಳಾ ಸಾಂತ್ವನ ಕೇಂದ್ರಕ್ಕೆ ನೋಟಿಸ್: ಶಶಿಧರ ಕುರೇರ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜಿಪಂ ಸಿಇಒ ಶಶಿಧರ್‌ ಕುರೇರ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ನೀಡದೆ ಬೇಜವಾಬ್ದಾರಿತನ ತೋರುತ್ತಿರುವ ಇಳಕಲ್ಲಿನ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ನೋಟಿಸ್ ನೀಡುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂತ್ವನ ಕೇಂದ್ರದಲ್ಲಿ ದಾಖಲಾದ ಪ್ರಕರಣ, ವರ್ಗಾವಣೆಗೊಂಡ ಪ್ರಕರಣಗಳ ಮಾಹಿತಿಗಳ ಬಗ್ಗೆ ಸರಿಯಾದ ಮಾಹಿತಿ ನೀಡದಿರುವುದು, ಸಂಬಂಧಿಸಿದವರನ್ನು ಸಭೆಗೆ ಕಳುಹಿಸದೆ ಪ್ರತಿನಿಧಿಗಳನ್ನು ಕಳುಹಿಸಿರುವುದನ್ನು ಕಂಡು ನೋಟಿಸ್ ನೀಡುವಂತೆ ಸೂಚಿಸಿದರು.

ವರದಕ್ಷಿಣೆ, ಲೈಂಗಿಕ ಕಿರಕುಳ, ಕೌಟುಂಬಿಕ ಕಲಹ ಸೇರಿದಂತೆ ಜನವರಿ ಅಂತ್ಯಕ್ಕೆ ಒಟ್ಟು 791 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 725 ಇತ್ಯರ್ಥವಾಗಿವೆ. ಬಾಕಿ ಉಳಿಸಿಕೊಂಡವರಲ್ಲಿ ಇಳಕಲ್ಲ ಸಾಂತ್ವನ ಕೇಂದ್ರದ್ದು 25 ಇವೆ. ಪೊಲೀಸ್ ಇಲಾಖೆಗೆ ವರ್ಗಾವಣೆ ಮಾಡಿದ ಪ್ರಕರಣಗಳಲ್ಲಿ ಬಾಕಿ 8 ಪ್ರಕರಣಗಳು ಕಂಡುಬಂದಿದ್ದು, ಇತ್ಯರ್ಥವಾಗದ್ದಕ್ಕೆ ಕಾಣರವೇನು ಎಂದು ಪ್ರಶ್ನಿಸಿದರು. ಈ ಬಗ್ಗೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಸಾಂತ್ವನ ಕೇಂದ್ರಗಳಿಗೆ ಭೇಟಿ ನೀಡಿ ಮೂಲ ಸೌಲಭ್ಯ, ಆಹಾರ ವಿತರಣೆ, ಶಿಕ್ಷಣದ ಬಗ್ಗೆ ಪರಿಶೀಲನೆ ನಡೆಸಬೇಕು. ಸಮಾಲೋಚನೆ ಸಹ ನಡೆಸಬೇಕು. ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕುಗಳಲ್ಲಿ ಹೊಸ ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾವನೆಗಳು ಬಂದಿದ್ದು, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಿಇಒ ಅಧಿಕಾರಿಗಳಿಗೆ ಸೂಚಿಸಿದರು. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ತ್ರೀಶಕ್ತಿ ಗುಂಪು ಹಾಗೂ ತಾಲೂಕು ಒಕ್ಕೂಟದ ರಾಜ್ಯ ಮಟ್ಟದ ಪ್ರಶಸ್ತಿಗೆ ಪ್ರಸ್ತಾವನೆಗಳನ್ನು ಕಳುಹಿಸಲು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ. ಮಾತನಾಡಿ ಸಾಂತ್ವನ ಕೇಂದ್ರಗಳು ಅಚ್ಚುಕಟ್ಟಾಗಿ ನಡೆಸಬೇಕು. ಕೇವಲ ದಾಖಲೆಯಲ್ಲಿ ಅಂಕಿ-ಸಂಖ್ಯೆಗಳನ್ನು ತೋರಿಸಿದರೆ ಸರಿಯಲ್ಲ. ಭೇಟಿ ಸಮಯದಲ್ಲಿ ಮೆನುವಿನ ಪ್ರಕಾರ ಊಟ, ಉಪಹಾರ ನೀಡದಿರುವುದನ್ನು ಮನಗಂಡಿದ್ದು, ಕಡ್ಡಾಯವಾಗಿ ಮೆನುವಿನ ಪ್ರಕಾರ ನೀಡಲು ಕ್ರಮವಹಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಭೇಟಿ ನೀಡುವ ಮೂಲಕ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಅಂಗನವಾಡಿ ಕೇಂದ್ರಗಳ ಮೇಲೆ ಹೆಚ್ಚಿನ ಕಾಳಜಿ ವಹಿಸಲು ಸೂಚಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಮರಟ್ಟಿ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನವರ, ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಾಂತ್ವನ ಕೇಂದ್ರದ ಪ್ರತಿನಿಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.