ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ

| Published : Jun 08 2024, 12:35 AM IST

ಸಾರಾಂಶ

ಹನೂರು ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾರ್ಯದರ್ಶಿ ರಘು ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಸೂಚನೆ ನೀಡಿದರು.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ನಾಗಮಲೆ ಭವನದಲ್ಲಿ ನಡೆದ ಪ್ರಾಧಿಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪೂರ್ಣಗೊಳಿಸಲು ಅಧಿಕಾರಿಗಳು ಮತ್ತು ಗುತ್ತಿಗೆದಾರರು ತುರ್ತಾಗಿ ಕ್ರಮ ಕೈಗೊಳ್ಳುವ ಮೂಲಕ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. 512 ಕೊಠಡಿ ಕಾಮಗಾರಿ ನಿಗದಿತ ಸಮಯಕ್ಕೆ ಪೂರ್ಣಗೊಳಿಸಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕ್ರಮವಹಿಸಬೇಕು, 108 ಅಡಿ ಮಲೆ ಮಹದೇಶ್ವರನ ಪ್ರತಿಮೆ ಬಳಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅಧಿಕಾರಿಗಳು ಪೂರ್ಣಗೊಳಿಸಲು ಕಾಮಗಾರಿಯನ್ನು ವೇಗಗೊಳಿಸಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.

ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗೆ ನಡೆಯುತ್ತಿರುವ ಪಾದಯಾತ್ರೆಗಳ ಮೆಟ್ಟಿಲುಗಳ ಕಾಮಗಾರಿ ಸಹ ಪೂರ್ಣಗೊಳಿಸಲು ಮುತುವರ್ಜಿ ವಹಿಸಿ ಕ್ರಮವಹಿಸುವ ಜೊತೆಗೆ ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸದೇ ತೆಪ್ಪೋತ್ಸವ ಸಹ ನಡೆಯುತ್ತಿಲ್ಲ. ಹೀಗಾಗಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಮುಂದಿನ ದಿನಗಳಲ್ಲಿ ತೆಪ್ಪೋತ್ಸವ ನಡೆಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಒಳಚರಂಡಿ ಕಾಮಗಾರಿಯನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಅಧಿಕಾರಿ ವರ್ಗ ಹಾಗೂ ಗುತ್ತಿಗೆದಾರರು ನಿಗದಿತ ಸಮಯಕ್ಕೆ ಪೂರ್ಣಗೊಳಿಸಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಪಿಡಬ್ಲ್ಯೂಡಿ ಇಲಾಖೆ ಇಂಜಿನಿಯರ್ ಚಿನ್ನಣ್ಣ, ಚೆಸ್ಕಾಂ ಉಪ ವಿಭಾಗ ಹನೂರು ಎಇಇ ಶಂಕರ್, ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಗುತ್ತಿಗೆದಾರರು ಉಪಸ್ಥಿತರಿದ್ದರು.