ಸಾರಾಂಶ
ಹಾನಗಲ್ಲ: ಗುಣಮಟ್ಟದ ವಿದ್ಯುತ್ ಪೂರೈಕೆಯ ಹಿತದೃಷ್ಟಿಯಿಂದ ಅಗತ್ಯವಿದ್ದಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಿ, ಮಂಜೂರಿ ಪಡೆಯುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಹೆಸ್ಕಾಂ ಎಇಇ ಆನಂದ ಅವರಿಗೆ ಸೂಚಿಸಿದರು.ಇಲ್ಲಿನ ಹೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೆಲವೆಡೆ ವಿದ್ಯುತ್ ಪರಿವರ್ತಕಗಳ ಮೇಲೆ ಲೋಡ್ ಹೆಚ್ಚಿರುವ ಕಾರಣ ಪದೇ ಪದೆ ಟ್ರಿಪ್ ಆಗುತ್ತಿದೆ. ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಗಮನ ಹರಿಸಿ ಪರಿವರ್ತಕಗಳ ಹೆಚ್ಚಳ ಹಾಗೂ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಅನುದಾನ ದೊರಕಿದ್ದು, ಅನುದಾನ ಸದ್ಬಳಕೆ ಮಾಡಿಕೊಂಡು ಹಗಲು ಹೊತ್ತಿನಲ್ಲಿ ಬೀದಿ ದೀಪಗಳು ಉರಿಯದಂತೆ ನೋಡಿಕೊಳ್ಳಬೇಕು. ಇದರಿಂದ ವಿದ್ಯುತ್ ಉಳಿತಾಯವಾಗಲಿದ್ದು, ಗ್ರಾಪಂಗಳಿಗೂ ಆರ್ಥಿಕ ಹೊರೆ ತಪ್ಪಲಿದೆ ಎಂದರು.ಅವಘಡ ಆಹ್ವಾನಿಸುವಂಥ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ, ಲೈನ್ ಎತ್ತರಿಸಲು ಗಮನ ನೀಡಬೇಕು. ಗಿಡ, ಗಂಟಿ, ಜಂಗಲ್ ಕಟಾವಿಗೆ ಕಾಳಜಿ ವಹಿಸಿ ಎಂದು ಶ್ರೀನಿವಾಸ ಮಾನೆ ಸೂಚಿಸಿದರು. ಸಾರ್ವಜನಿಕರು, ರೈತರು ದೂರು, ಅಹವಾಲುಗಳಿಗೆ ಸ್ಪಂದಿಸಲು ಸಹಾಯವಾಣಿ ಆರಂಭಿಸಿ. ದೂರು, ಅಹವಾಲುಗಳಿಗೆ ಸ್ಪಂದಿಸಿ, ಸೌಜನ್ಯದಿಂದ ವರ್ತಿಸಿ. ಕೆಲ ಶಾಖಾಧಿಕಾರಿಗಳು, ಸಿಬ್ಬಂದಿ ಸೂಕ್ತ ರೀತಿಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳಿದ್ದು, ಸಮರ್ಪಕ ಕರ್ತವ್ಯ ನಿರ್ವಹಣೆಗೆ ಗಮನ ಹರಿಸಿ. ಲೈನ್‌ಮನ್ ಗಳು ತಮ್ಮ ಕೇಂದ್ರ ಸ್ಥಾನದಲ್ಲಿಯೇ ವಾಸವಿರಲು ನಿರ್ದೇಶಿಸಿ ಎಂದರು. ಕೆಪಿಟಿಸಿಎಲ್ ಎಇಇ ಸತೀಶ ಇದ್ದರು.