ಶೀಘ್ರವೇ ರಾಜ ಕಾಲುವೆ ದುರಸ್ತಿಗೆ ಸೂಚನೆ: ತಹಸೀಲ್ದಾರ್ ಎಂ ಮಮತಾ

| Published : Jun 08 2024, 12:31 AM IST

ಶೀಘ್ರವೇ ರಾಜ ಕಾಲುವೆ ದುರಸ್ತಿಗೆ ಸೂಚನೆ: ತಹಸೀಲ್ದಾರ್ ಎಂ ಮಮತಾ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ತೀವ್ರ ಧಾರಾಕಾರ ಮಳೆಯಿಂದ ಜನತಾ ಕಾಲೋನಿಯಲ್ಲಿನ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು ತಹಸೀಲ್ದಾರ್ ಎಂ ಮಮತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳಿಗೆ ನಿರ್ದೇಶನ । ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ, ಪರಿಶೀಲನೆ

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ತೀವ್ರ ಧಾರಾಕಾರ ಮಳೆಯಿಂದ ಜನತಾ ಕಾಲೋನಿಯಲ್ಲಿನ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು ತಹಸೀಲ್ದಾರ್ ಎಂ ಮಮತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶೀಘ್ರವೇ ರಾಜ ಕಾಲುವೆ ಮುಚ್ಚಿರುವುದನ್ನು ತೆರವುಗೊಳಿಸಬೇಕು. ಇಲ್ಲವಾದರೆ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಈ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ವಿವಿಧೆಡೆಯಲ್ಲಿ ಬುಧವಾರ ಸುರಿದ ಭಾರಿ ಮಳೆ ಕೆಲ ಅನಾಹುತಕ್ಕೆ ಕಾರಣವಾಗಿತ್ತು. ಅಂತೆಯೇ ಹೆಬ್ಬಾಳು ಗ್ರಾಮದ ಜನತಾ ಕಾಲೋನಿ ಹಿಂಭಾಗದಲ್ಲಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿ ಮುಚ್ಚಿದ ಕಾರಣದಿಂದ ಧಾರಾಕಾರ ಮಳೆಯಿಂದ ನೀರು ನೇರ ಇಲ್ಲಿನ ಮನೆಗಳಿಗೆ ನುಗ್ಗಿತ್ತು. ಇದ್ದರಿಂದ ನಿವಾಸಿಗಳು ದಿಕ್ಕು ಕಾಣದ ಪರಿಸ್ಥಿತಿ ಉಂಟಾದ ಬಗ್ಗೆ ಮಾಹಿತಿ ಪಡೆದ ಬೇಲೂರು ತಹಸೀಲ್ದಾರ್ ಎಂ.ಮಮತ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವಿನಾಶ ಅವರನ್ನು ಸ್ಥಳಕ್ಕೆ ಕರೆದು, ಇನ್ನು ಮಳೆಗಾಲ ಜೋರಾಗುವ ಲಕ್ಷಣ ಇರುವ ಕಾರಣದಿಂದ ತಕ್ಷಣವೇ ಕಾಲುವೆ ನಿರ್ಮಾಣಕ್ಕೆ ಮುಂದಾಗಬೇಕು. ಹಾಗೇಯೆ ಗ್ರಾಮದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಕಾರಣ ಇತ್ತೀಚಿನ ದಿನದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಕೊಳಚೆ ನೀರು ನುಗ್ಗಿದ ಸ್ಥಳಗಳಿಗೆ ಔಷಧಿ ಸಿಂಪಡಣೆ ಮಾಡಬೇಕು. ಸ್ಥಳೀಯರು ಕೂಡ ಇಂತಹ ವಿಪತ್ತು ಉಂಟಾದ ಸಂದರ್ಭದಲ್ಲಿ ಸಹಾಯವಾಣಿ ಇಲ್ಲವೇ ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಸಹಾಯಕರಿಗೆ ತಿಳಿಸಬೇಕು ಎಂದು ತಿಳಿಸಿದರು.

ಗ್ರಾಮದ ಯುವಕರಾದ ಗಿರೀಶ್ ಮತ್ತು ಸುರೇಶ್ ಮಾತನಾಡಿ, ಗುರುವಾರ ಸುರಿದ ಮಳೆಯ ನೀರು ಮನೆಗೆ ನುಗ್ಗಿದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗೆ ವಿಷಯ ತಿಳಿಸಿದರೂ ಯಾರು ಕೂಡ ಸ್ಪಂದನೆ ನೀಡಿಲ್ಲ ಎಂದು ದೂರಿದರು. ರಾಜಕಾಲುವೆ ಒತ್ತುವರಿ ಬಗ್ಗೆ ಹೇಳಿದರು.

ಒತ್ತುವರಿ ಶೀಘ್ರ ತೆರವು ಮಾಡಿ

ಜಮೀನಿನ ನೀರು ಗ್ರಾಮದ ಒಳಗೆ ಪ್ರವೇಶ ಮಾಡಂತೆ ಶೀಘ್ರವೇ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಬೇಕು. ಹಾಗೆಯೇ ಗ್ರಾಮದ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಪಿಡಿಒ ಅವಿನಾಶ್‌ಗೆ ಬೇಲೂರು ತಹಸೀಲ್ದಾರ್ ಎಂ.ಮಮತ ಸೂಚನೆ ನೀಡಿದರು.