ಸಾರಾಂಶ
ಚಿಂಚೋಳಿ-ಕಲಬುರಗಿ ರಾಜ್ಯಹೆದ್ದಾರಿ ಪಕ್ಕದಲ್ಲಿರುವ ಸಿದ್ದಸಿರಿ ಇಥೆನಾಲ್ ಪವರ್ ಘಟಕವನ್ನು ಮುಚ್ಚುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ನೋಟಿಸ್‌ಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸಿದ್ದಸಿರಿ ಇಥೆನಾಲ್ ಪವರ ಘಟಕದ ಅಧ್ಯಕ್ಷರು ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಹರ್ಷವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಚಿಂಚೋಳಿ-ಕಲಬುರಗಿ ರಾಜ್ಯಹೆದ್ದಾರಿ ಪಕ್ಕದಲ್ಲಿರುವ ಸಿದ್ದಸಿರಿ ಇಥೆನಾಲ್ ಪವರ್ ಘಟಕವನ್ನು ಮುಚ್ಚುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ನೋಟಿಸ್‌ಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸಿದ್ದಸಿರಿ ಇಥೆನಾಲ್ ಪವರ ಘಟಕದ ಅಧ್ಯಕ್ಷರು ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಹರ್ಷವ್ಯಕ್ತಪಡಿಸಿದ್ದಾರೆ.ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಅವರು, ಕಾಂಗ್ರೆಸ್ ಸರ್ಕಾರ ಚಿಂಚೋಳಿ ತಾಲೂಕಿನಲ್ಲಿ ಪ್ರಾರಂಭಿಸಿರುವ ಸಿದ್ದರಿಸಿ ಇಥೆನಾಲ್ ಪವರ್ ಘಟಕ ಮುಚ್ಚುವಂತೆ ಮಾಡಿರುವ ಷಡ್ಯಂತ್ರಕ್ಕೆ ಕರ್ನಾಟಕ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದಿದ್ದಾರೆ. ಪರಿಸರ ನಿಯಮಾವಳಿ ಉಲ್ಲಂಘಿಸಿ ವೈಜ್ಞಾನಿಕ ನಿರ್ವಹಣೆ ಮಾಡುತ್ತಿಲ್ಲವೆಂದು ಆರೋಪಿಸಿ ಜಲ, ವಾಯು ಮಾಲಿನ್ಯದ ಕಾರಣ ನೀಡಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆ ಮುಚ್ಚುವಂತೆ ನೀಡಿತ್ತು. ಅದರ ಬೆನ್ನಲ್ಲಿಯೇ ಸೇಡಂ ಉಪ-ವಿಭಾಗದ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಆಹಾರ ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ,ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಶಾರದಾ ಅವರು ಸಿದ್ದಸಿರಿ ಇಥೆನಾಲ್ ಪವರ ಘಟಕಕ್ಕೆ ಕಬ್ಬು ಸಾಗಿಸದಂತೆ ಬಾಗಿಲು ಬೀಗ ಹಾಕಿದ್ದರು.
ಸಿದ್ದಸಿರಿ ಇಥೆನಾಲ್ ಘಟಕಕ್ಕೆ ಬೀಗ ಹಾಕಿದ್ದರಿಂದ ರೈತರಲ್ಲಿ ಮತ್ತು ಯುವಕರಲ್ಲಿ ಆತಂಕವನ್ನುಂಟು ಮಾಡಿತು. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ನೋಟಿಸು ವಿರೋಧ ವ್ಯಕ್ತಪಡಿಸಿ ರೈತ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.ಚಿಂಚೋಳಿ ಸಿದ್ದಸಿರಿ ಇಥೆನಾಲ್ ನೀಡಿದ ನೋಟಿಸಿಗೆ ರಾಜ್ಯ ಹೈಕೋರ್ಟ ತಡೆಯಾಜ್ಞೆ ನೀಡಿದ್ದರಿಂದ ಹಿಂದುಳಿದ ಪ್ರದೇಶ ರೈತರ ಮತ್ತು ಯುವಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.