ಕಾಮಗಾರಿ ತ್ವರಿತಕ್ಕೆ ಸೂಚನೆ

| Published : Jul 25 2025, 12:30 AM IST

ಸಾರಾಂಶ

ದೊಡ್ಡಚಿನ್ನಹಳ್ಳಿ ಹಾಗೂ ರಾಮಲಿಂಗಾಪುರ ಗ್ರಾಮಗಳಲ್ಲಿ ಕೈಗೊಂಡಿರುವ ಮನೆ ಮನೆಗೂ ಗಂಗೆ ಯೋಜನೆ ಕಾಮಗಾರಿಗೆ ಬಳಸಿರುವ ಸಲಕರಣಿಗಳು, ಕಂಬಿ ಸಿಮೆಂಟ್ ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸಿದರು. ಜಲಜೀವನ್ ಮಿಷನ್ ಪ್ರತಿ ಮನೆಗೂ ಕಡ್ಡಾಯವಾಗಿ ಪ್ರತಿ ನಿತ್ಯ ನೀರು ಸರಬರಾಜು ಮಾಡುವ ಯೋಜನೆಯಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಗ್ರಾಮಗಳಲ್ಲಿ ತ್ವರಿತವಾಗಿ ಪೂರ್ಣಗೊಳಿಸದೆ ಅವ್ಯವಸ್ಥೆಯ ಅಗರವಾಗಿದೆ ಎಂಬ ದೂರುಗಳ ಹಿನ್ನೆಲೆ ಕಾಮಗರಿಗಳನ್ನು ಪರಿಶೀಲಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಜಿಪಂ ಸಿಇಒ ಪ್ರಮೀಣ್ ಬಾಗೇವಾಡಿ ಸೂಚಿಸಿದರು.ತಾಲೂಕಿನ ದೊಡ್ಡವಲಗಮಾದಿ ಗ್ರಾಪಂಃದೊಡ್ಡಚಿನ್ನಹಳ್ಳಿ ಹಾಗೂ ಕೆಸರನಹಳ್ಳಿ ಪಂಃರಾಮಲಿಂಗಾಪುರ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ೧೫ ದಿನದೊಳಗೆ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಸಾಮಗ್ರಿ ಗುಣಮಟ್ಟ ಪರಿಶೀಲನೆ

ದೊಡ್ಡಚಿನ್ನಹಳ್ಳಿ ಹಾಗೂ ರಾಮಲಿಂಗಾಪುರ ಗ್ರಾಮಗಳಲ್ಲಿ ಕೈಗೊಂಡಿರುವ ಮನೆ ಮನೆಗೂ ಗಂಗೆ ಯೋಜನೆ ಕಾಮಗಾರಿಗೆ ಬಳಸಿರುವ ಸಲಕರಣಿಗಳು, ಕಂಬಿ ಸಿಮೆಂಟ್ ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸಿದರು. ಜಲಜೀವನ್ ಮಿಷನ್ ಪ್ರತಿ ಮನೆಗೂ ಕಡ್ಡಾಯವಾಗಿ ಪ್ರತಿ ನಿತ್ಯ ನೀರು ಸರಬರಾಜು ಮಾಡುವ ಯೋಜನೆಯಾಗಿದೆ. ಇಂತಹ ಕಾಮಗಾರಿಯನ್ನು ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಕಾಮಗಾರಿ ವಿಳಂಬ ಮಾಡುತ್ತಿರುವುದರಿಂದ ಗ್ರಾಮಗಳಲ್ಲಿ ರಸ್ತೆಯನ್ನು ಅಗೆದು ಜನರು ಸಂಚಾರಕ್ಕೆ ಅಡ್ಡಿಯಾಗಿದ್ದು ವ್ಯಾಪಕ ದೂರುಗಳು ಬರುತ್ತಿವೆ. ಈ ಹಿನ್ನೆಲೆ ಕಾಮಗಾರಿ ಪರಿಶೀಲನೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ೫ ಗ್ರಾಮಗಳಲ್ಲಿ ಪರಿಶೀಲನೆ ಮಾಡಲಾಗಿದೆ. ಈ ಪೈಕಿ ೨ ಕಡೆ ಸಮಾಧಾನ ತಂದಿಲ್ಲ. ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಹೋಗಿ ತಪಾಸಣೆ ಮಾಡುವೆ ಲೋಪಗಳು ಕಂಡು ಬಂದರೆ ಮುಲಾಜಿಲ್ಲದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಪಿಡಿಒಗಳ ಕೊರತೆ:

ದೊಡ್ಡಚಿನ್ನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಹಾಗೂ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲನೆ ಮಾಡಿದರು.ಎರಡೂ ಕಡೆ ಉತ್ತಮವಾಗಿ ನಿರ್ವಾಹಣೆ ಮಾಡಲಾಗುತ್ತಿದೆ ಎಂದರು. ಗ್ರಾಪಂಗಳಲ್ಲಿ ಪಿಡಿಒಗಳ ಕೊರತೆಯಿಂದ ಎರಡು ಪಂಃಗಳಿಗೆ ಒಬ್ಬ ಪಿಡಿಒರನ್ನು ನಿಯೋಜನೆ ಮಾಡಿದ್ದು, ಸರ್ಕಾರ ಪಿಡಿಒಗಳನ್ನು ನೇಮಕ ಮಾಡುವವರೆಗೂ ನಿಯೋಜನೆ ಅನಿವಾರ್ಯ ಎಂದರು.ಈ ವೇಳೆ ತಾಪಂ ಇಒ ರವಿಕುಮಾರ್,ವಾಟರ್ ವರ್ಕ್ಸ್ ಎಇಇ ಸೂರ್ಯಪ್ರಸಾದ್, ಪಿಡಿಒ ಸರಸ್ವತಿ, ಗ್ರಾಪಂ ಸದಸ್ಯ ಜೀವನ್‌ರೆಡ್ಡಿ, ಚೌಡಪ್ಪ ಇತರರು ಇದ್ದರು.