ಬಿಇಒ ಕಲಿಕಾ ವಿಷಯಗಳಲ್ಲಿನ ಲೋಪಗಳನ್ನು ಕುರಿತು ಆರೋಪಿಸಿ ಏಕಾಏಕಿ 182 ಪ್ರಾಥಮಿಕ ಶಾಲೆ ಶಿಕ್ಷಕರಿಗೆ ನೋಟೀಸ್‌ ನೀಡಿ ಮೂರು ದಿನಗಳ ಒಳಗಾಗಿ ಸಮಜಾಯಿಸಿ ನೀಡುವಂತೆ ಸೂಚಿಸಿರುವುದು ಅವೈಜ್ಞಾನಿಕ.

ಶಾಸಕ ಪ್ರದೀಪ್ ಈಶ್ವರ್ ಸೂಚನೆ ಮೇರೆಗೆ ನೋಟಿಸ್ । ಚಿಕ್ಕಬಳ್ಳಾಪುರ ಜಿಲ್ಲಾ ನಾಗರಿಕ ಹಿತರಕ್ಷಣಾ ಸಮಿತಿ ಮನವಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಾಸಕ ಪ್ರದೀಪ್ ಈಶ್ವರ್ ಸೂಚನೆ ಮೇರೆಗೆ 182 ಶಿಕ್ಷಕರಿಗೆ ನೋಟಿಸ್ ನೀಡಿದ ಬಿಇಓ ವಿರುದ್ಧ ಕ್ರಮಕ್ಕೆ ಮತ್ತು ಶಿಕ್ಷಕರಿಗೆ ನೋಟಿಸನ್ನು ಕೂಡಲೇ ವಾಪಸ್ಸು ಪಡೆಯುವಂತೆ ಒತ್ತಾಯಿಸಿ ಜಿಲ್ಲಾ ನಾಗರೀಕ ಹಿತರಕ್ಷಣಾ ಸಮಿತಿಯು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿತು.

ಈ ವೇಳೆ ಸಮಿತಿಯ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಬಿಇಒ ಕಲಿಕಾ ವಿಷಯಗಳಲ್ಲಿನ ಲೋಪಗಳನ್ನು ಕುರಿತು ಆರೋಪಿಸಿ ಏಕಾಏಕಿ 182 ಪ್ರಾಥಮಿಕ ಶಾಲೆ ಶಿಕ್ಷಕರಿಗೆ ನೋಟೀಸ್‌ ನೀಡಿ ಮೂರು ದಿನಗಳ ಒಳಗಾಗಿ ಸಮಜಾಯಿಸಿ ನೀಡುವಂತೆ ಸೂಚಿಸಿರುವುದು ಅವೈಜ್ಞಾನಿಕ ಮತ್ತು ಆಘಾತಕಾರಿ ಕ್ರಮ. ಈಗಾಗಲೇ ಶಿಕ್ಷಕರು ಶಾಲಾ ಸ್ವಚ್ಛತೆ, ಶೌಚಾಲಯ ನಿರ್ವಹಣೆ, ಅಡಿಗೆಕಾರ್ಯ, ಜಾತಿಗಣತಿ, ಜನಗಣತಿ, ಮತದಾರರ ಪಟ್ಟಿ ಪರಿಷ್ಕರಣೆ ಇನ್ನಿತರೆ ಕಾರ್ಯಗಳನ್ನು ತಮ್ಮ ಕೌಟುಂಬಿಕ ಕಾರ್ಯದ ಒತ್ತಡಗಳ ನಡುವೆಯೂ ಶಾಲಾವಧಿಯನ್ನು ಮೀರಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಬಹುತೇಕ ಸರ್ಕಾರಿ ಶಾಲೆಗಳಲ್ಲು ಹೊರರಾಜ್ಯಗಳು, ಹೊರಜಿಲ್ಲೆಗಳಿಂದ ಬಂದಂತಹ ಹಾಗೂ ಇಟ್ಟಿಗೆ ಗೂಡು ಕಾರ್ಖಾನೆಗಳಲ್ಲಿ, ಕೋಳಿ ಫಾರಂಗಳಲ್ಲಿ ಕೆಲಸ ಮಾಡುವವರ ಮಕ್ಕಳು, ಕೃಷಿ ಕಾರ್ಮಿಕ ಮಕ್ಕಳು ಇರುವುದರಿಂದ ಅವರ ಪೋಷಕರಿಗೆ ಶೈಕ್ಷಣಿಕ ಹಿನ್ನೆಲೆ ಇಲ್ಲದಿರುವುದು, ಮಕ್ಕಳ ಸರಾಗಕಲಿಕೆಗೆ ಅಡಚಣೆ ಆಗಿರುತ್ತದೆ. ಇಂತಹ ಎಡರು ತೊಡರುಗಳನ್ನು ನಿಭಾಯಿಸಿ ಸಾಧ್ಯವಾದಷ್ಟು ಹೆಚ್ಚಿನ ಶಕ್ತಿಮೀರಿ ಶಿಕ್ಷಕರು ಪಾಠ ಪ್ರವಚನಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಶಿಕ್ಷಕರ ಕೊರತೆ ಇದ್ದಾಗ್ಯೂ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬರುತ್ತಿರುವ ಶಿಕ್ಷಕರನ್ನು ಪ್ರೋತ್ಸಾಹದಾಯಕ ಕ್ರಮಗಳಿಂದ ಶಿಕ್ಷಣದ ಗುಣಮಟ್ಟವನ್ನು ಕಾಪಾಡಲು ಗಮನ ಹರಿಸಬೇಕಾದ ಬಿಇಒ ಇದ್ಯಾವುದನ್ನೂ ಪರಿಗಣಿಸದೆ ಅಮಾನವೀಯವಾಗಿ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಶಿಕ್ಷಣ ಇಲಾಖೆಯ ಬಗ್ಗೆ ಇರುವ ಗೌರವಕ್ಕೆ ದಕ್ಕೆ ತರುವಂತಹುದಾಗಿರುತ್ತದೆ.

ಬಿಇಒ ಕ್ಷೇತ್ರದ ಶಾಸಕರು ಕೆಲವು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಪರಿಶೀಲಿಸಿ ಎಚ್ಚರಿಕೆ ಕೊಟ್ಟು ನಂತರವೇ ಎಚ್ಚೆತ್ತುಕೊಂಡಿರುವುದು ಇವರ ಸಂಪೂರ್ಣ ನಿಷ್ಕ್ರಿಯತೆಗೆ ಕನ್ನಡಿ ಹಿಡಿದಂತಿದೆ. ಇವರು ತಮ್ಮ ಕರ್ತವ್ಯ ಲೋಪಗಳನ್ನು ಮರೆಮಾಚಲು ಶಿಕ್ಷಕರಿಗೆ ನೋಟೀಸನ್ನು ನೀಡಿ ಸಮಜಾಯಿಸಿ ನೀಡುವಂತೆ ಸೂಚಿಸಿರುವುದು ಅತ್ಯಂತ ಖಂಡನೀಯವಾಗಿರುತ್ತದೆ.

ಒಂದು ವೇಳೆ ಶಿಕ್ಷಕರು ಬೋಧನಾ ವಿಧಾನದಲ್ಲಿ ಅಥವಾ ಕರ್ತವ್ಯ ಲೋಪವೆಸಗಿದ್ದಲ್ಲಿ ನಾಲ್ಕು ಗೋಡೆಗಳ ಮಧ್ಯ ಸರಿಪಡಿಸಿ ಸುಧಾರಿಸಿಕೊಳ್ಳುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಶಿಕ್ಷಣ ಇಲಾಖೆಯ ಗೌರವಕ್ಕೆ ದಕ್ಕೆ ತರುವಂತೆ ನಡೆದುಕೊಂಡಿರುವ ಇವರ ವಿರುದ್ಧ ಮೊದಲು ಕರ್ತವ್ಯ ಲೋಪದ ಆಧಾರದ ಮೇಲೆ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಬೇಕು. ಶಿಕ್ಷಕರ ಮೇಲೆ ಆಪಾದಿಸಿ ನೀಡಿರುವ ನೋಟೀಸನ್ನು ಈ ತಕ್ಷಣವೇ ಹಿಂಪಡೆದು ಶಿಕ್ಷಣ ಇಲಾಖೆಯ ಘನತೆ ಮತ್ತು ಗೌರವವನ್ನು ಕಾಪಾಡಲು ತಾವುಗಳು ಮುಂದಾಗಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರನ್ನು ಈ ಮನವಿಯ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.

ಮನವಿ ಸ್ವೀಕರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿ.ರಮೇಶ್ ಮಾತನಾಡಿ, 8-10 ದಿನದೊಳಗೆ ಶಿಕ್ಷಕರ ಹಿತದೃಷ್ಟಿಯನ್ನೂ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಾಗರಿಕ ಹಿತರಕ್ಷಣಾ ಸಮಿತಿಯ ಕೆ.ಎಂ.ರೆಡ್ಡಪ್ಪ, ಆದಿನಾರಾಯಣಪ್ಪ, ಸತೀಶ್ ಇದ್ದರು.

ಸಿಕೆಬಿ-1 182 ಶಿಕ್ಷಕರಿಗೆ ನೋಟಿಸ್ ನೀಡಿದ ಬಿಧೊಓ ವಿರುದ್ಧ ಕ್ರಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರು ಡಿಡಿಪಿಐ ವಿ.ರಮೇಶ್ ಅವರಿಗೆ ಮನವಿ ನೀಡಿದರು.