ಹಾನಗಲ್ಲ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು, ಔಷಧಿ ಕೊರತೆ, ನಕಲಿ ವೈದ್ಯರ ಮೇಲೆ ಕ್ರಮವಿಲ್ಲ, ಆಸ್ಪತ್ರೆ ಶೌಚಾಲಯ ಸ್ವಚ್ಛತೆ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ಸೇರಿ ಹಲವು ಸಮಸ್ಯೆಗಳು ಕುರಿತು ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಹಾನಗಲ್ಲ: ಹಾನಗಲ್ಲ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು, ಔಷಧಿ ಕೊರತೆ, ನಕಲಿ ವೈದ್ಯರ ಮೇಲೆ ಕ್ರಮವಿಲ್ಲ, ಆಸ್ಪತ್ರೆ ಶೌಚಾಲಯ ಸ್ವಚ್ಛತೆ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ಸೇರಿ ಹಲವು ಸಮಸ್ಯೆಗಳು ಕುರಿತು ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಗುರುವಾರ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಡಾ. ಶಿವಯೋಗಿ ಯಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಸೂಚಿಸಿದರು. ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿಯೇ ೧೫ ವೈದ್ಯರಿರಬೇಕಾಗಿದ್ದು, ಇರುವ ವೈದ್ಯರು ಕೇವಲ ೫ ಮಾತ್ರ. ರಕ್ತ ತಪಾಸಣೆಗೆ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಹೊರಗೆ ಬರೆದು ಕೊಡುತ್ತಾರೆ. ಬಹುತೇಕ ಔಷಧಿಯ ಕೊರತೆಯೂ ಇದೆ. ಶೌಚಾಲಯಗಳ ಸ್ವಚ್ಛತೆ ಇಲ್ಲ. ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಎಲ್ಲದಕ್ಕೂ ಮಿಗಿಲಾಗಿ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಆದರೆ ತಾಲೂಕು ವೈದ್ಯಾಧಿಕಾರಿಗಳು ಇವರ ಬಗ್ಗೆ ಕ್ರಮ ಜರುಗಿಸದಿರುವುದು ಕೂಡ ದಿವ್ಯ ನಿರ್ಲಕ್ಷ್ಯ ವಾಗಿದೆ. ಚಿಕ್ಕಾಂಸಿ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ಸಂಬಂಧಿಸಿದ ವಸತಿ ಗೃಹ ಖಾಸಗಿಯವರ ಪಾಲಾಗುತ್ತಿದೆ ಎಂಬ ಚರ್ಚೆಗಳು ನಡೆದವು.ಮಲಗುಂದ- ಕೂಸನೂರು ನಡುವಿನ ರಸ್ತೆಯ ಬದಿಗೆ ವಾಹನ ಓಡಾಟಕ್ಕೆ ಅನಾನುಕೂಲವಾಗುವಂತೆ ರೈತರು ಪೈರು ಬೆಳೆದಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಇದನ್ನು ಗಮನಿಸಿ ತೆರವುಗೊಳಿಸಬೇಕು. ಇದರಿಂದ ವಾಹನ ಓಡಾಡಕ್ಕೆ ತೊಂದರೆಯಾಗಿದೆ. ನಿಯಮದಂತೆ ರಸ್ತೆ ಬದಿ ಅಗತ್ಯವಿರುವ ಜಾಗ ಬಿಟ್ಟು ಪೈರು ಬೆಳೆಯಲು ರೈತರಿಗೆ ಸಲಹ ನೀಡಬೇಕು ಎಂದು ಡಾ. ಶಿವಯೋಗಿ ಯಲಿ ಸೂಚಿಸಿದರು. ಹಾನಗಲ್ಲ ಬಂಕಾಪುರ ರಸ್ತೆ ತಗ್ಗುಗಳಿಂದಾಗಿ ವಾಹನ ಓಡಾಟಕ್ಕೆ ದುಸ್ತರವಾಗಿದೆ. ಇದಕ್ಕೆ ನಿರ್ವಹಣಾ ಅನುದಾನ ಬಂದಿಲ್ಲ. ತಾಲೂಕಿನಲ್ಲಿ ೧೬೯ ಕಿಮೀ ರಾಜ್ಯ ಹೆದ್ದಾರಿಗಳಿದ್ದು ಅವುಗಳೆಲ್ಲದರ ಸ್ತಿತಿ ಹೀಗೇ ಇದೆ ಎಂಬ ಚರ್ಚೆ ನಡೆಯಿತು.
ಹಾನಗಲ್ಲ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಈಗಾಗಲೇ ೮ ಗ್ರಾಮ ಪಂಚಾಯಿತಿಯ೧೦ ಗ್ರಾಮಗಳಲ್ಲಿ ೧೧ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಕುಡಿಯುವ ನೀರಿಗಾಗಿ ಪಡೆಯಲಾಗಿದೆ. ಇಂತಹ ೩೬ ಗ್ರಾಮಗಳನ್ನು ಗುರುತಿಸಲಾಗಿದೆ. ತಾಲೂಕಿನಲ್ಲಿ ೧೧೯ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಅವುಗಳಲ್ಲಿ ೧೭ ಬಂದಾಗಿವೆ. ತಾಲೂಕಿನ ೭೬೨ ಕುಡಿಯುವ ನಿರಿನ ಕೊಳವೆ ಬಾವಿಗಳಲ್ಲಿ ೩೯೧ ಮಾತ್ರ ಚಾಲ್ತಿಯಲ್ಲಿವೆ ಎಂಬ ವರದಿ ಗ್ರಾಮೀಣ ಕುಡಿಯುವ ನೀರು ಯೋಜನೆ ಇಲಾಖೆಯಿಂದ ತಿಳಿಯಿತು.ಕೃಷಿ ಇಲಾಖೆ ವರದಿಯಲ್ಲಿ ಕಳೆದ ಮಳೆಗಾಲದಲ್ಲಿ ಶೇ.೪೬ ರಷ್ಟು ಮಳೆ ಕೊರತೆ ಇದೆ. ರೈತರ ಮಳೆಯಾಶ್ರಿತ ಭತ್ತ ಒಣಗಿವೆ. ರಸಗೊಬ್ಬರದ ಕೊರತೆ ಇಲ್ಲ. ಪ್ರಸ್ತುತ ವರ್ಷ ೧೦ ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಅವುಗಳಲ್ಲಿ ೬ ಪ್ರಕರಣಗಳು ಇತ್ಯರ್ಥವಾಗಿವೆ. ನೇಗಿಲು ಯೋಗಿ ಕಾರ್ಯಕ್ರಮ ಶೀಘ್ರ ಹಾನಗಲ್ಲ ತಾಲೂಕಿನಲ್ಲಿ ಜಾರಿಗೆ ಬರಲಿದೆ ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದರು.
ತೋಟಗಾರಿಕೆ ಇಲಾಖೆ ಮೂಲಕ ಟ್ರ್ಯಾಕ್ಟರ್ ಟೇಲರ್ ಖರೀದಿಗೆ ಬಹು ಬೇಡಿಕೆ ಇದೆ. ಅಡಿಕೆ ಸುಲಿಯುವ ಯಂತ್ರವನ್ನೂ ರೈತರು ಕೇಳುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು. ಹಾನಗಲ್ಲ ತಾಲೂಕಿನ ೩ ಗ್ರಿಡ್ಗಳ ಉನ್ನತೀಕರಣಕ್ಕೆ ೫ನೇ ಬಾರಿ ಟೆಂಡರ್ ಕರೆಯಲಾಗಿದೆ ಎಂಬ ವರದಿ ಹೆಸ್ಕಾಂನಿಂದಾಗಿತ್ತು. ಮುಂದಿನ ತಿಂಗಳಿನಿಂದ ಪಡಿತರ ಚೀಟಿದಾರರಿಗೆ ರಾಗಿ, ಜೋಳ ಇಲ್ಲ, ಕೇವಲ ಅಕ್ಕಿ ಮಾತ್ರ ನೀಡಲಾಗುತ್ತದೆ ಎಂಬುದು ಆಹಾರ ಇಲಾಖೆಯ ವರದಿಯಾಗಿತ್ತು.ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಡಾ. ಶಿವಯೋಗಿ ಯಲಿ ಮಾತನಾಡಿ, ಎಲ್ಲ ಇಲಾಖೆಗಳು ನ್ಯೂನತೆಗಳನ್ನು ಸರಿಪಡಿಸಿಕೊಂಡು ಜವಾಬ್ದಾರಿಯಿಂದ ಆಡಳಿತ ನೀಡಬೇಕು. ಪ್ರಗತಿ ಪರಿಶೀಲನೆ ಕಾಟಾಚಾರಕ್ಕಾಗಿ ಅಲ್ಲ. ಮುಂದಿನ ಸಭೆಯೊಳಗಾಗಿ ಎಲ್ಲ ನ್ಯೂನತೆ ಸರಿಪಡಿಸಿಕೊಳ್ಳಿ. ಸಾರ್ವಜನಿಕರಿಗೆ ವಿಳಂಬವಿಲ್ಲದೆ ಅವರ ಕೆಲಸಗಳನ್ನು ಪೂರೈಸಿ ಎಂದು ಸೂಚಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ವೇದಿಕೆಯಲ್ಲಿದ್ದರು. ತಾಲೂಕು ಮಟ್ಟದ ಬಹುತೇಕ ಇಲಾಖೆಯ ಅಧಿಕಾರಿಗಳು ಬೇರೆ ಬೇರೆ ಸಭೆಗಳಿದ್ದ ಕಾರಣ, ಕಚೆರಿಗಳ ಸಿಬ್ಬಂದಿಯೇ ವರದಿ ನೀಡುತ್ತಿರುವುದು ಕಂಡು ಬಂದಿತು.