ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಅಧಿಸೂಚಿತ ಬೆಳೆಗಳ ನೋಂದಣಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಸೂಚಿತ ಬೆಳೆಗಳಿಗೆ ಬೆಳೆಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಒಂದು ವೇಳೆ ಬೆಳೆಸಾಲ ಪಡೆದ ರೈತರು ಈ ಯೋಜನೆಯಡಿ ಭಾಗವಹಿಸಲು ಇಚ್ಚಿಸದೇ ಇದ್ದಲ್ಲಿ, ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದೆಂದು ತಿಳಿಸಿದರು.
ಬೆಳೆಸಾಲ ಪಡೆಯದ ರೈತರಿಗೆ ಬೆಳೆ ವಿಮೆ ಯೋಜನೆ ಐಚ್ಛಿಕವಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಯುನಿರ್ವಸಲ್ ಸೊಂಪೊ ಜಿ.ಐ.ಸಿ. ವಿಮಾ ಕಂಪನಿ ಆಯ್ಕೆಯಾಗಿದ್ದು, ಆಸಕ್ತ ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಅಧಿಸೂಚಿತ ಬೆಳೆಗೆ ಬ್ಯಾಂಕ್, ಆರ್ಥಿಕ ಸಂಸ್ಥೆಗಳು, ಸಾಮಾನ್ಯ ಸೇವಾ ಕೇಂದ್ರಗಳು, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ವಿಮಾ ಕಂತು ತುಂಬಿ ಬೆಳೆಗೆ ವಿಮೆ ಮಾಡಿಸಬಹುದಾಗಿದೆ. ವಿಮಾ ಕಂತಿನ ಶೇಕಡಾ 2 ರಷ್ಟು ಹಾಗೂ ವಾಣಿಜ್ಯ ಬೆಳೆಗಳಿಗೆ ಬೆಳೆ ವಿಮಾ ಕಂತಿನ ಶೇ.5 ರಷ್ಟು ರೈತರು ಪಾವತಿಸಬೇಕು ಎಂದರು.ಸ್ಥಳೀಯ ಗಂಡಾಂತರಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಪೋಟ ಮತ್ತು ಗುಡುಗು ಮಿಂಚುಗಳಿಂದಾಗಿ ಬೆಂಕಿ ಅವಘಡ, ಬೆಳೆ ನಷ್ಟ ಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ನೇರವಾಗಿ ಸಂಬಂಧಪಟ್ಟ ವಿಮಾ ಸಂಸ್ಥೆಗಳ ಕಚೇರಿ ಅಥವಾ ಹಣಕಾಸು ಸಂಸ್ಥೆ ಅಥವಾ ಕೃಷಿ, ತೋಟಗಾರಿಕೆ ಇಲಾಖೆ ಮೂಲಕ ತಕ್ಷಣ ಸೂಚನೆ ನೀಡಬೇಕು. ಇಂತಹ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸಬೇಕು ಎಂದು ತಿಳಿಸಿದರು.
ಈ ಯೋಜನೆಯಡಿ 2024ರ ಮುಂಗಾರು ಹಂಗಾಮಿನಡಿಯಲ್ಲಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಾಡಿದ ಎರಡು ವಾರಗಳೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರ ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಪಡಿಸಲಾಗಿದೆ. ಬೆಳೆ ವಿಮೆ ಮಾಡಿಸುವ ರೈತರು ಫ್ರೂಟ್ಸ್ ತಂತ್ರಾಂಶದ ಎಫ್ಐಡಿ ಹೊಂದಿರುವುದು ಕಡ್ಡಾಯವಾಗಿದೆ.ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲೂಕು ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಬೆಳೆ ವಿಮೆ ಸಂಸ್ಥೆ ಕಚೇರಿಗೆ ಅಥವಾ ಜಾಲತಾಣ ಭೇಟಿ ನೀಡಬಹುದಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಲು ಸಹ ಜಿಲ್ಲಾಧಿಕಾರಿಗಳು ಸೂಚಿಸಿದರು.
ಬೆಳೆ ವಿಮಾ ಕಂತು ಪಾವತಿ ವಿವರಸೋಯಾ ಅವರೆ, ಉದ್ದು, ಹೆಸರು (ಮಳೆ ಆಶ್ರಿತ), ಜೋಳ (ನೀರಾವರಿ) ಬೆಳೆಗೆ ವಿಮಾ ಕಂತು ಪಾವತಿಗೆ ಜುಲೈ 15 ಕೊನೆಯ ದಿನವಾದರೆ, ಅರಿಶಿಣ, ಸೂರ್ಯಕಾಂತಿ, ಜೋಳ, ಈರುಳ್ಳಿ, ಎಳ್ಳು (ಮ.ಆ), ಕೆಂಪು ಮೆಣಸಿಣಕಾಯಿ (ನೀರಾವರಿ), ಮುಸುಕಿನ ಜೋಳ, ಸಜ್ಜೆ, ತೊಗರಿ, ಶೇಂಗಾ (ಮ.ಆ, ನೀ) ಬೆಳೆಗಳಿಗೆ ಜುಲೈ 31, ಸೂರ್ಯಕ್ರಾಂತಿ (ನೀರಾವರಿ) ಈರುಳ್ಳಿ (ನೀ, ಮ.ಆ), ಕೆಂಪು ಮೆಣಸಿನ ಕಾಯಿ (ಮ.ಆ) ಬೆಳೆಗೆ ಅಗಸ್ಟ್ 16 ಕೊನೆಯ ದಿನವಾಗಿದೆ.