ಸಾರಾಂಶ
ರಾಜ್ಯಾದ್ಯಂತ 13 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ: ರಾಜ್ಯಾದ್ಯಂತ 13 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ. ಅ.23ರಿಂದ ನವೆಂಬರ್ 9 ರವರೆಗೆ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿಸೆಂಬರ್ 7 ರಂದು ಟಿಇಟಿ ಪರೀಕ್ಷೆ ನಡೆಸಿ, ಡಿಸೆಂಬರ್ 31ರಂದು ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 4780 ಶಿಕ್ಷಕರನ್ನು ನೇಮಕಾತಿ ಮಾಡಿದ್ದರು. ನಾನು ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಪ್ರಥಮ ವರ್ಷದಲ್ಲಿ 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದೆ. ಈಗ ಮತ್ತೆ 13 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದೇನೆ. ಕಳೆದ ಎರಡೂವರೆ ವರ್ಷದಲ್ಲಿ 26 ಸಾವಿರ ಶಿಕ್ಷಕರ ನೇಮಕಾತಿ ಮಾಡಿದಂತಾಗುತ್ತದೆ ಎಂದರು.ಶೀಘ್ರದಲ್ಲಿ ಅನುದಾನಿತ ಶಾಲೆಯ ಶಿಕ್ಷಕರ ನೇಮಕಾತಿಗೂ ಸರ್ಕಾರ ಆದೇಶ ಹೊರಡಿಸಲಿದೆ. ರಾಜ್ಯದಲ್ಲಿ 800 ಕೆಪಿಎಸ್ ಶಾಲೆಯನ್ನು ಪ್ರಾರಂಭಿಸಲಾಗುವುದು. 6ನೇ ತರಗತಿಯಿಂದ ಕನ್ನಡದ ಜೊತೆ ಇಂಗ್ಲಿಷ್ ಕಲಿಕೆಗೂ ಅವಕಾಶವಿರಲಿದೆ. ಕರ್ನಾಟಕ ಪಬ್ಲಿಕ್ ಶಾಲೆಗೆ 3 ಸಾವಿರ ಕೋಟಿ ರು. ಮೀಸಲಿಡಲಾಗಿದೆ ಎಂದರು.ಇಷ್ಟೇ ಅಲ್ಲದೇ ಮೊಬೈಲ್ ಬಿಡಿ, ಪುಸ್ತಕ ಹಿಡಿ ಸೇರಿದಂತೆ ಇನ್ನಷ್ಟು ವಿಶೇಷ ಯೋಜನೆಗಳನ್ನು ರೂಪಿಸಲಾಗಿದ್ದು, ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಅವುಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ 19 ಕೆಪಿಎಸ್ ಶಾಲೆಗಳ ಹಂಚಿಕೆಯಾಗಿದ್ದು, ಅದರ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಂಭವವಿದೆ ಎಂದರು.ಎಐ ಆಧಾರಿತ ಶಿಕ್ಷಣ ನೀಡಬೇಕೆಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈಗ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಕಲಿಸಲಾಗುವುದು. ೬ನೇ ತರಗತಿಯಿಂದಲೇ ಸ್ಕಿಲ್ ಸ್ಕೂಲ್ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು. ಶೇ.90.12ರಷ್ಟು ಜಾತಿ ಸಮೀಕ್ಷೆ:ಜಾತಿ ಸಮೀಕ್ಷೆ ಶೇ.90.12ರಷ್ಟು ಆಗಿದೆ, ಸಮೀಕ್ಷೆ ಅಗತ್ಯ ತುಂಬಾ ಇದೆ. ಇದರಿಂದ ಬಜೆಟ್‌ಗೆ ಅನುಕೂಲವಾಗಲಿದೆ. ದೊಡ್ಡ ದೊಡ್ಡ ಉದ್ಯಮಿಗಳು ಸಹ ಸಹಕಾರ ನೀಡಬೇಕಾಗುತ್ತದೆ ಎಂದು ಇನ್ಫೋಸಿಸ್ ಹೆಸರನ್ನು ಬಳಸದೆ ಮನವಿ ಮಾಡಿದ ಅವರು, ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಶೇ.97 ರಷ್ಟು ಸಮೀಕ್ಷೆ ಮುಕ್ತಾಯವಾಗಿದೆ ಎಂದು ತಿಳಿಸಿದರು.
ಆರ್‌ಎಸ್‌ಎಸ್ ನಿಷೇಧ ಕುರಿತು ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ಚಡ್ಡಿಯಿಂದ ಪ್ಯಾಂಟ್‌ಗೆ ಬದಲಾಗಿದೆ, ಆದರೆ, ಅಜೆಂಡಾ ಮಾತ್ರ ಬದಲಾಗಿಲ್ಲ, ಆರ್‌ಎಸ್‌ಎಸ್ ಹಾದಿ ತಪ್ಪಿಸುವ ವ್ಯವಸ್ಥೆ ಆಗಿದೆ. ಇವರು ಜನಗಣಮನ ಹೇಳಲ್ಲ, ರಾಷ್ಟ್ರಧ್ವಕ್ಕೆ ಗೌರವ ಕೊಡಲ್ಲ ಎಂದು ಹೇಳಿದರು.ನವೆಂಬರ್‌ನಲ್ಲಿ ಶಿವಮೊಗ್ಗಕ್ಕೆ ಸಿಎಂಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಣ ಇಲಾಖೆಯು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ವಿವಿಧ ಯೋಜನೆಗಳ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನವೆಂಬರ್ ತಿಂಗಳಲ್ಲಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ೩೦೦೦ ಕೋಟಿ ರು.ಗಳ ಅಂದಾಜು ವೆಚ್ಚದ ಕರ್ನಾಟಕ ಪಬ್ಲಿಕ್ ಶಾಲೆ ಮಹತ್ವದ ಯೋಜನೆಗೆ ಶಿವಮೊಗ್ಗದಲ್ಲಿಯೇ ಚಾಲನೆ ದೊರೆಯಲಿದೆ.- ಮಧು ಬಂಗಾರಪ್ಪ, ಶಿಕ್ಷಣ ಸಚಿವ.