ಸಾರಾಂಶ
ಹುಬ್ಬಳ್ಳಿ:
ಕುದುರೆ ಕಾಯುವ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಸಂಬಳ ಕೇಳಿದ ವಿಚಾರಕ್ಕೆ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಲ್ಲದೇ, ಚಾಕು ತೋರಿಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಇಲ್ಲಿನ ಕೇಶ್ವಾಪುರ ಠಾಣೆ ಪೊಲೀಸರು ನಟೋರಿಯಸ್ ರೌಡಿಶೀಟರ್ ಸೈಂಟಿಸ್ಟ್ ಮಂಜ್ಯಾ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ಶುಕ್ರವಾರ ರಾತ್ರಿ ಕೇಶ್ವಾಪುರ ಠಾಣೆಯ ವ್ಯಾಪ್ತಿಯಲ್ಲಿ ವಾಸವಾಗಿದ್ದ ಅಬ್ದುಲ್ ಖಾದರ್ ಎಂಬವನು ರೌಡಿ ಶೀಟರ್ ಮಂಜುನಾಥ ಉರ್ಫ್ ಸೈಂಟಿಸ್ಟ್ ಮಂಜ್ಯಾ ಭಂಡಾರಿ (35) ಬಳಿಯಿದ್ದ ಕುದುರೆಗಳನ್ನು ಕಾಯುವ ಕೆಲಸ ಮಾಡುತ್ತಿದ್ದನು. ಸಂಬಳ ನೀಡುವಂತೆ ಮಂಜ್ಯಾನನ್ನು ಅಬ್ದುಲ್ ಖಾದರ್ ಕೇಳಿದ್ದಾನೆ. ಇದಕ್ಕೆ ಸಿಟ್ಟಿಗೆದ್ದ ಮಂಜ್ಯಾ ತನ್ನ ಮನೆಯವರನ್ನು ಕರೆದುಕೊಂಡು ಬಂದು ಅಬ್ದುಲ್ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ಅಬ್ದುಲ್ ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದನು. ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ಮಂಜ್ಯಾ, ಮಾಲಾ, ಮುಸ್ಕಾನ್ ಈ ಮೂವರು ಆರೋಪಿಗಳ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಿಸಿ ಬಂಧಿಸಿರುವುದಾಗಿ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಇವನ ಮೇಲೆ ಕೊಲೆ, ಕೊಲೆ ಯತ್ನ, ದರೋಡೆ, ಮನೆಗಳ್ಳತನ, ಹಲ್ಲೆ ಪ್ರಕರಣ, ಎನ್‌ಡಿಪಿಎಸ್ ಪ್ರಕರಣಗಳಿವೆ. ಧಾರವಾಡ, ಗದಗ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ 36 ಪ್ರಕರಣಗಳು ದಾಖಲಾಗಿವೆ. ದರೋಡೆ, ಬೆದರಿಕೆ, ಕಳ್ಳತನ ಹೇಗೆ ಮಾಡಬೇಕು ಎಂಬುದರ ಕುರಿತು ಸ್ನೇಹಿತರಿಗೆ ಐಡಿಯಾಗಳನ್ನು ಕೊಡುತ್ತಿದ್ದ. ಹಾಗಾಗಿ ಎಲ್ಲರೂ ಇವನನ್ನು ಸೈಂಟಿಸ್ಟ್ ಮಂಜ್ಯಾ ಎಂದು ಕರೆಯಲಾಗುತ್ತದೆ.ಹಿಂದೆಯೂ ಗಲಾಟೆಯೊಂದರಲ್ಲಿ ಪೊಲೀಸರು ಈ ಆರೋಪಿ ಮಂಜ್ಯಾನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಲುವಾಗಿ ಕರೆತರುತ್ತಿದ್ದ ವೇಳೆ ಮಂಜ್ಯಾ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದರು. ಕೆಲ ದಿನಗಳ ಬಳಿಕ ಮಂಜ್ಯಾನೇ ನ್ಯಾಯಾಲಯಕ್ಕೆ ಹಾಜರಾಗಿದ್ದ. ನಂತರವೂ ಇದೇ ರೀತಿಯ ಕಳ್ಳತನ ಮುಂದುವರಿಸಿದ್ದನು. ಕೊನೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುವುದಾಗಿ ಎನ್. ಶಶಿಕುಮಾರ ತಿಳಿಸಿದರು.
ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ, ಎಸಿಪಿಗಳಾದ ಯು.ಬಿ. ಚಿಕ್ಕಮಠ, ಶಿವಪ್ರಕಾಶ ನಾಯಕ ಸೇರಿದಂತೆ ಹಲವರಿದ್ದರು.