ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ರಾಜ್ಯದ ಐದು ಜಿಲ್ಲೆಗಳಲ್ಲಿ ಹಗಲು ದರೋಡೆ , ಹಲ್ಲೆ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಂದ ತಪ್ಪಿಸಿಕೊಂಡು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಕುಖ್ಯಾತ ರೌಡಿಶೀಟರ್ ಮೇಲೆ ಗುಂಡಿನ ದಾಳಿ ನಡೆಸಿದರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಆಲೂರು ಗ್ರಾಮದ ಜಯಂತ್ @ ಬ್ಯಾಟರಿ ಜಯಂತ್ (26) ಪೊಲೀಸರಿಂದ ಗುಂಡಿನ ದಾಳಿಗೊಳಗಾದ ರೌಡಿಶೀಟರ್ .ಘಟನಾ ವಿವರ : ಇತ್ತೀಚಿಗೆ ರೌಡಿಶೀಟರ್ ಜಯಂತ್ ನೆಲಮಂಗಲ ತಾಲೂಕಿನಾದ್ಯಂತ ಒಬ್ಬಂಟಿಯಾಗಿ ಹೋಗುವವರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಅವರಿಂದ ಚಿನ್ನಾಭರಣ, ಹಣ ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಾಬಸ್‌ಪೇಟೆ ಪೊಲೀಸರು ತಂಡವೊಂದನ್ನು ರಚಿಸಿ ಈತನ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಅದರಂತೆ ಈತ ಆ.31ರಂದು ಸಂಜೆ ಸುಮಾರು 5.30 ಗಂಟೆಯ ಸಮಯದಲ್ಲಿ ಬಾಣಾವಾಡಿ ಗ್ರಾಮದ ಮುಖಾಂತರ ದಾಬಸ್‌ಪೇಟೆ ಕಡೆ ಬೈಕ್ ನಲ್ಲಿ ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಬಸ್‌ಪೇಟೆ ಪೊಲೀಸ್ ಠಾಣೆಯ ಪಿಐ ರಾಜು ನೇತೃತ್ವದಲ್ಲಿ ಸಿಬ್ಬಂದಿಗಳಾದ ರಂಗನಾಥ್, ಇಮ್ರಾನ್, ಸುನೀಲ್, ಸುಧಾಕರ್, ರೇಣುಕಾ ಪ್ರಸಾದ್ ತಂಡ ಕಂಬಾಳು ಬಳಿಯಿಂದ ಆತನನ್ನು ಬೆನ್ನಟ್ಟಿ ಹಿಂಬಾಲಿಸಿಕೊಂಡು ಬಂದಿದ್ದು, ಗೊಟ್ಟಿಗೆರೆ ಕ್ರಾಸ್ ಬಳಿ ಎದುರುಗಡೆಯಿಂದ ಸಿಬ್ಬಂದಿಗಳಾದ ಇಮ್ರಾನ್ ಹಾಗೂ ಸುನೀಲ್ ಹೋದಾಗ ಅವರ ಬೈಕ್ ಗೆ ಈತನೇ ಗುದ್ದಿ ಬೈಕ್ ನಿಂದ ಅವರನ್ನು ಬೀಳಿಸಿ ನೀಲಗಿರಿ ತೋಟದ ಕಡೆಗೆ ತಪ್ಪಿಸಿಕೊಂಡು ಹಿಂದೆಯೇ ಹಿಡಿಯಲು ಹೋದ ಸಿಬ್ಬಂದಿ ಇಮ್ರಾನ್ ಕೈಗೆ ಡ್ರ್ಯಾಗರ್ ನಿಂದ ಚುಚ್ಚಿ ಹಲ್ಲೆಗೆ ಮುಂದಾದಾಗ ಇನ್ಸ್ ಪೆಕ್ಟರ್ ರಾಜು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದು ಆತನ ಬಲಗಾಲಿಗೆ ಗುಂಡು ತಗುಲಿ ಗಂಭೀರ ಗಾಯವಾಗಿ ಸ್ಥಳದಲ್ಲೇ ಬಿದ್ದಿದ್ದಾನೆ.56 ಪ್ರಕರಣದ ಆರೋಪಿ: ರೌಡಿಶೀಟರ್ ಜಯಂತ್ ರಾಜ್ಯದ ಐದು ಜಿಲ್ಲೆಯ ವಿವಿಧ ಠಾಣೆಯ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈತನ ಮೇಲೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ 14 ಪ್ರಕರಣ, ಗ್ರಾಮಾಂತರ ಠಾಣೆಯ 8 ಪ್ರಕರಣ, ಟೌನ್ ಠಾಣೆ 5 ಪ್ರಕರಣ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ 3 ಪ್ರಕರಣ, ತ್ಯಾಮಗೊಂಡ್ಲು ಪೊಲೀಸ್ ಠಾಣೆಯ 2 ಪ್ರಕರಣ, ಮಾದನಾಯ್ಕನಹಳ್ಳಿಯಲ್ಲಿ 3 ಪ್ರಕರಣ, ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯ 2 ಪ್ರಕರಣ, ಕೋರಾ ಪೊಲೀಸ್ ಠಾಣೆ, ಯಲ್ಲಿ 1 ಪ್ರಕರಣ, ತಿಲಕ್ ಪಾರ್ಕ್ ಠಾಣೆ ಗುಬ್ಬಿ ಠಾಣೆ, ಹೆಬ್ಬೂರು ಠಾಣೆ, ಕೊರಟಗೆರೆ ಠಾಣೆ ಯಲ್ಲಿ ತಲಾ ಒಂದು ಪ್ರಕರಣ ರಾಮನಗರ ಜಿಲ್ಲೆಯ ಕುದೂರು ಠಾಣೆಯಲ್ಲಿ 2 ಪ್ರಕರಣ, ಬಿಡದಿ ಠಾಣೆಯಲ್ಲಿ ಒಂದು ಪ್ರಕರಣ, ತಾವರಕೆರೆ ಠಾಣೆಯಲ್ಲಿ 2 ಪ್ರಕರಣ ಮಂದ್ಯ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಬೆಂಗಳೂರು ನಗರ ಜಿಲ್ಲೆಯ ಸೋಲದೇವನಹಳ್ಳಿ, ಜ್ಞಾನಭಾರತಿ, ಪೀಣ್ಯ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 56 ಪ್ರಕರಣಗಳು ದಾಖಲಾಗಿವೆ.ಎರಡನೇ ಬಾರಿಗೆ ಗುಂಡಿನ ದಾಳಿ : ಈಗಾಗಲೇ ರೌಡಿ ಶೀಟರ್ ಜಯಂತ್ ಮೇಲೆ 22 ಮಾಚ್ 2019ರಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ವೀರನಂಜಿಪುರ ಗ್ರಾಮದ ಸಮೀಪ ಅಂದಿನ ದಾಬಸ್‌ಪೇಟೆ ಪೊಲೀಸ್ ಠಾಣೆಯ ಪಿಎಸೈ ಆಗಿದ್ದ ಶಂಕರ್ ನಾಯಕ್ ಗುಂಡಿನ ದಾಳಿ ನಡೆಸಿದ್ದರೂ ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿ ಮತ್ತೆ ಗುಂಡಿನ ದಾಳಿಗೆ ಒಳಗಾಗಿದ್ದಾನೆ.
ಎಎಸ್ಪಿ ಭೇಟಿ: ಪೊಲೀಸರ ಗುಂಡಿನ ದಾಳಿ ನಡೆದ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ನಾಗೇಶ್ ಡಿವೈಎಸ್ ಪಿ ಜಗದೀಶ್ ಕೆ.ಎಸ್, ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಪಿಐ ರಂಜನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆಸ್ಪತ್ರೆಯಲ್ಲಿ ಚಿಕಿತ್ಸೆ : ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಆರೋಪಿ ಜಯಂತ್ ನನ್ನು ದಾಬಸ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಗೊಂಡಿದ್ದ ಸಿಬ್ಬಂದಿ ಇಮ್ರಾನ್ ಅವರನ್ನು ಪಟ್ಟಣದ ವಿಕೇರ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ, ವಿದ್ವಂಸಕ ಕೃತ್ಯ ತಪಾಸಣಾ ತಂಡ, ಸೋಕೋ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.