ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ

| Published : Nov 12 2024, 01:33 AM IST / Updated: Nov 12 2024, 09:50 AM IST

Tushar Girinath

ಸಾರಾಂಶ

ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ, ಬಾಕಿ ತೆರಿಗೆ ವಸೂಲಿ ಮಾಡುವಂತೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಬೆಂಗಳೂರು : ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ, ಬಾಕಿ ತೆರಿಗೆ ವಸೂಲಿ ಮಾಡುವಂತೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆಸ್ತಿ ತೆರಿಗೆ ಸಂಗ್ರಹ ಸೇರಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸೋಮವಾರ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ (ಎಸ್‌ಎಎಸ್) ಅಡಿ ತಪ್ಪು ಮಾಹಿತಿ ನೀಡಿ ನಂತರ ಪರಿಷ್ಕರಣೆ ಮಾಡಿಕೊಂಡಿರುವ ಪ್ರಕರಣಗಳಲ್ಲಿ ತೆರಿಗೆ ವಸೂಲಿ ಪ್ರಮಾಣ ಹೆಚ್ಚಿಸಬೇಕು. ಅದಕ್ಕಾಗಿ ಆಯಾ ವಲಯ ವ್ಯಾಪ್ತಿಯಲ್ಲಿಯೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ನ. 30ಕ್ಕೆ ಒಟಿಎಸ್‌ ಮುಕ್ತಾಯ : ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ (ಒಟಿಎಸ್‌) ಯೋಜನೆ ಅಡಿ ಆಸ್ತಿ ತೆರಿಗೆ ಬಾಕಿ ಪಾವತಿಸುವವರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗುತ್ತಿದೆ. ಈ ಯೋಜನೆ ನ.30ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಇದರ ಬಗ್ಗೆ ಸುಸ್ತಿದಾರರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಅಲ್ಲದೆ, ಡಿ.1ರಿಂದ ಅವರು ಪಾವತಿಸಬೇಕಿರುವ ಬಾಕಿ ತೆರಿಗೆ ದುಪ್ಪಟ್ಟಾಗಲಿದೆ ಎಂಬುದನ್ನೂ ತಿಳಿಸಬೇಕು. ಅದಕ್ಕಾಗಿ ವಲಯವಾರು ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಆಯುಕ್ತರು ತಿಳಿಸಿದರು. ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್‌ ಮೌದ್ಗಿಲ್‌, ಸುರಳ್ಕರ್‌ ವಿಕಾಸ್‌ ಕಿಶೋರ್, ಡಾ. ಕೆ.ಹರೀಶ್‌ಕುಮಾರ್‌, ಅವಿನಾಶ್‌ ಮೆನನ್‌ ರಾಜೇಂದ್ರನ್‌, ಪ್ರೀತಿ ಗೆಹ್ಲೋಟ್‌ ಇತರರಿದ್ದರು.