ಸಾರಾಂಶ
ಸುಸ್ಥಿರ ಅಭಿವೃದ್ಧಿಗೆ ಮಾನವರ ಶ್ರೇಯೋಭಿವೃದ್ಧಿಯ ಜೊತೆಗೆ ಪ್ರಾಣಿಗಳ ಸಂರಕ್ಷಣೆಯನ್ನೂ ಮಾಡಬೇಕು. ವನ್ಯಜೀವಿಗಳನ್ನು ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ವನ್ಯಜೀವಿ ತಜ್ಞ ಡಾ। ಕೆ.ಉಲ್ಲಾಸ ಕಾರಂತ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸುಸ್ಥಿರ ಅಭಿವೃದ್ಧಿಗೆ ಮಾನವರ ಶ್ರೇಯೋಭಿವೃದ್ಧಿಯ ಜೊತೆಗೆ ಪ್ರಾಣಿಗಳ ಸಂರಕ್ಷಣೆಯನ್ನೂ ಮಾಡಬೇಕು. ವನ್ಯಜೀವಿಗಳನ್ನು ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ವನ್ಯಜೀವಿ ತಜ್ಞ ಡಾ। ಕೆ.ಉಲ್ಲಾಸ ಕಾರಂತ ಅಭಿಪ್ರಾಯಪಟ್ಟಿದ್ದಾರೆ.
ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಅಂಕಿತ ಪುಸ್ತಕ’ ಹೊರತಂದಿರುವ ‘ಕನ್ನಡಪ್ರಭ’ದ ಪುರವಣಿ ಸಂಪಾದಕ ಗಿರೀಶ್‌ರಾವ್ ಹತ್ವಾರ್(ಜೋಗಿ) ಅವರ ‘ನಿರ್ಗಮನ’ ಕಾದಂಬರಿ, ‘ಸಾಲು’ ಕವನ ಸಂಕಲನ ಮತ್ತು ಎಂ.ಆರ್.ದತ್ತಾತ್ರಿ ಅವರ ‘ಸರ್ಪಭ್ರಮೆ’ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವನ್ಯಜೀವಿ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಮುಂದಿನ ಜನಾಂಗಕ್ಕೆ ನಾವು ವನ್ಯಜೀವಿಗಳನ್ನು ಕೊಡುಗೆಯಾಗಿ ನೀಡಬೇಕೆಂದರೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಅವುಗಳನ್ನು ಈಗಲೇ ಉಳಿಸುವ ಕೆಲಸಕ್ಕೆ ಮುಂದಾಗಬೇಕು.
ವೈಯಕ್ತಿಕವಾಗಿ ಪ್ರಾಣಿಗಳಿಗೆ ಹಿಂಸೆ ಆಗದಂತೆ ನೋಡಿಕೊಳ್ಳಬೇಕು. ಅಭಯಾರಣ್ಯಗಳೇ ನಮಗೆ ಬೇಡ ಎಂಬ ಮನೋಭಾವ ಸರಿಯಲ್ಲ. ಮಾನವನ ಅಭಿವೃದ್ಧಿಗೆ ಒತ್ತು ನೀಡುವ ಜೊತೆಗೆ ವನ್ಯಜೀವಿಗಳನ್ನೂ ಸಂರಕ್ಷಿಸಬೇಕು ಎಂದು ಕರೆ ನೀಡಿದರು.
1950-60 ರ ದಶಕದಲ್ಲಿ ವನ್ಯಜೀವಿಗಳು ಸಂಕಷ್ಟದಲ್ಲಿದ್ದವು. 1970ರ ನಂತರ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಕಾನೂನು ಜಾರಿಯಾದ ನಂತರ ಒಂದಷ್ಟು ಸುಧಾರಣೆ ಆಯಿತು.
ಈಗ ಜನರಿಗೆ ವನ್ಯಜೀವಿ ಸಂರಕ್ಷಣೆ ಬಗ್ಗೆ ಆಸಕ್ತಿ ಬಂದಿದೆ. ಆದರೆ ಬೆಂಗಳೂರಿನಲ್ಲಿ ನಾಯಿಗೆ ಬ್ರೆಡ್ ಹಾಕುವುದನ್ನೇ ಕೆಲವರು ವನ್ಯಜೀವಿ ಸಂರಕ್ಷಣೆ ಎನ್ನುತ್ತಾರೆ.
ಕಾಡಿನಲ್ಲಿರುವ ವನ್ಯಜೀವಿಗಳನ್ನು ನೋಡುವುದರ ಬದಲಿಗೆ ಲಂಟಾನಾದಲ್ಲಿ ಆನೆಗಳನ್ನು ನಿರ್ಮಿಸಿ ಖುಷಿಪಡುತ್ತಾರೆ. ನಾವು ಬದುಕಬೇಕೆಂದರೆ ಪರಿಸರವನ್ನು ಅವಲಂಬಿಸಿ ಜೀವಿಸುವ ಎಲ್ಲ ಪ್ರಾಣಿಗಳೂ ಬದುಕಬೇಕು. ಇದು ಪ್ರಕ್ರತಿಯ ನಿಯಮವೂ ಹೌದು ಎಂದು ಸ್ಪಷ್ಟಪಡಿಸಿದರು.
ವನ್ಯ ಜೀವಿಗಳೆಂದರೆ ಬೆನ್ನೆಲುಬಿರುವ ಪ್ರಾಣಿಗಳಾಗಿದ್ದು ಕಾಡಿನಲ್ಲಿ ನೈಸರ್ಗಿಕವಾಗಿ ವಾಸಿಸುತ್ತಿರಬೇಕು. ಇದು ವೈಜ್ಞಾನಿಕ ವ್ಯಾಖ್ಯೆಯಾಗಿದೆ. ಭೂಮಿಯನ್ನು ಶಕ್ತಿಯ ರೂಪವಾಗಿ ಬಳಸಿಕೊಂಡಿದ್ದರಿಂದ ಕಾಡುಪ್ರಾಣಿಗಳ ಸಂಖ್ಯೆ ಕಡಿಮೆಯಾಯಿತು.
ವೈಜ್ಞಾನಿಕ ತಳಹದಿಯಲ್ಲಿ ವನ್ಯಜೀವಿ ಸಂರಕ್ಷಣೆಗೆ ತನ್ನದೇ ಆದ ಮೂರು ಗುರಿಗಳಿವೆ. ವಿನಾಶದ ಅಂಚಿಗೆ ತಲುಪಿರುವ ಪ್ರಾಣಿಗಳನ್ನು ಗುರುತಿಸಬೇಕು, ಇಂತಹ ಪ್ರಾಣಿಗಳನ್ನು ಸಂರಕ್ಷಿಸಬೇಕು ಎಂದು ಕಾರಂತ ವಿವರಿಸಿದರು.
ಹಿರಿಯ ಲೇಖಕ ಗಜಾನನ ಶರ್ಮ ಮಾತನಾಡಿ, ಅಂಕಿತ ಪುಸ್ತಕ ಪ್ರಕಾಶನವು ಜೋಗಿ ಮತ್ತು ದತ್ತಾತ್ರಿ ಅವರ ಕೃತಿಗಳನ್ನು ಹೊರತಂದು ಒಳ್ಳೆಯ ಕಾರ್ಯ ಮಾಡಿದೆ. ಈ ಕೃತಿಗಳು ಓದುಗರ ಮನ ಗೆಲ್ಲಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಲೇಖಕರಾದ ಜೋಗಿ, ಎಂ.ಆರ್.ದತ್ತಾತ್ರಿ, ಪತ್ರಕರ್ತ ಹರೀಶ್ ಕೇರ ಉಪಸ್ಥಿತರಿದ್ದರು.