ರೈತರು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ದೊರಕಬೇಕು ಎಂಬ ಬೇಡಿಕೆಯೊಂದಿಗೆ ಆರಂಭವಾದ ಹೋರಾಟದಲ್ಲಿ ಎದುರಿಸಿದ ನೋವು ಮತ್ತು ತ್ಯಾಗ ಇಂದಿಗೂ ರೈತ ಸಮುದಾಯಕ್ಕೆ ಸ್ಫೂರ್ತಿಯಾಗಿದೆ. ರೈತರ ಹಕ್ಕುಗಳ ರಕ್ಷಣೆಗೆ ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ರೈತರ ನ್ಯಾಯಯುತ ಹಕ್ಕುಗಳಿಗಾಗಿ ನಡೆದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ರೈತರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ನ.24 ರೈತ ಚಳವಳಿ ಇತಿಹಾಸದಲ್ಲೇ ಮರೆಯಲಾಗದ ದಿನವಾಗಿದೆ ಎಂದು ರೈತ ಹೋರಾಟಗಾರ್ತಿ ಸುನಂದ ಜಯರಾಮ್ ಅಭಿಪ್ರಾಯಪಟ್ಟರು.

ತಾಲೂಕಿನ ಗೆಜ್ಜಲಗೆರೆಯಲ್ಲಿ ನಡೆದ 1982ರ ನವೆಂಬರ್ 24ರಂದು ಕಬ್ಬಿಗೆ ಸೂಕ್ತ ಬೆಲೆ ನೀಡುವಲ್ಲಿ ತಾರತಮ್ಯ ಖಂಡಿಸಿ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾಗ ಅಂದಿನ ಸರ್ಕಾರ ನಡೆಸಿದ ಪೊಲೀಸ್ ಗೋಲಿಬಾರ್‌ ನಿಂದ ಪ್ರಾಣ ಕಳೆದುಕೊಂಡ ಗೆಜ್ಜಲಗರೆ ಗ್ರಾಮದ ಸಿದ್ದಪ್ಪ, ವಳಗೆರೆಹಳ್ಳಿ ನಾಥೇಗೌಡರ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದರು.

ಗೋಲಿಬಾರ್ ನಿಂದ ರೈತರು ಸಾವನ್ನಪ್ಪಿದ್ದು ರೈತ ಹೋರಾಟದ ಇತಿಹಾಸದಲ್ಲಿ ನೋವಿನ ಅಧ್ಯಾಯವಾಗಿದೆ. ರೈತರ ಹಕ್ಕುಗಳಿಗಾಗಿ ಧ್ವನಿ ಎತ್ತಿದ ಅನ್ನದಾತರು ತಮ್ಮ ಜೀವವನ್ನೇ ತ್ಯಾಗ ಮಾಡಿದ ಈ ಘಟನೆಯನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ನ. 24ರಂದು ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ರೈತರು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ದೊರಕಬೇಕು ಎಂಬ ಬೇಡಿಕೆಯೊಂದಿಗೆ ಆರಂಭವಾದ ಹೋರಾಟದಲ್ಲಿ ಎದುರಿಸಿದ ನೋವು ಮತ್ತು ತ್ಯಾಗ ಇಂದಿಗೂ ರೈತ ಸಮುದಾಯಕ್ಕೆ ಸ್ಫೂರ್ತಿಯಾಗಿದೆ. ರೈತರ ಹಕ್ಕುಗಳ ರಕ್ಷಣೆಗೆ ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಹೇಳಿದರು.

ಇಂದಿಗೂ ರೈತರು ಕಬ್ಬಿನ ಬೆಲೆ ನಿಗದಿ, ಉತ್ಪಾದನಾ ವೆಚ್ಚದ ಹೆಚ್ಚಳ, ಕೃಷಿ ಸಾಲ, ನೀರಾವರಿ, ಬೆಳೆ ವಿಮೆ ಹಾಗೂ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಬೆಲೆ ದೊರೆಯದಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಗಳು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕೃಷಿಗೆ ಪೂರಕ ನೀತಿಗಳನ್ನು ಜಾರಿಗೊಳಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ರೈತರ ಬದುಕಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು. ರೈತ ಮುಖಂಡರಾದ ಜಿ.ಟಿ.ಚಂದ್ರಶೇಖರ್, ಮೋಹನ್, ದೇವೇಗೌಡ, ಹುಲಿಗೆರೆಪುರ ವೀರಪ್ಪ , ಜಯರಾಮ್, ಗುರುಮೂರ್ತಿ, ನಿಂಗಪ್ಪ, ವೀರಪ್ಪ, ಮಹಿಳಾ ಹೋರಾಟಗಾರರಾದ ಶಾಂತಮ್ಮ, ಅನುಪಮ, ನಾಗಮ್ಮ, ಆಶಾ, ಜಯಮ್ಮ, ಕೆಂಪಚಾರಿ, ಶಾಂತಮ್ಮ, ಪುಷ್ಪ, ಗೌರಮ್ಮ ರೈತ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.