ನವೆಂಬರ್ ನಿತ್ಯೋತ್ಸವ ಆಯೋಜನೆ ಶ್ಲಾಘನೀಯ: ಹೆರಗನಹಳ್ಳಿ ದಿನೇಶ್

| Published : Nov 10 2024, 01:48 AM IST

ಸಾರಾಂಶ

ಬಿ.ಎಂ.ಶ್ರೀಕಂಠಯ್ಯ, ಜೀಶಂಪ, ಡಾ.ಎಚ್.ಎಲ್.ನಾಗೇಗೌಡ, ಹಂದೇನಹಳ್ಳಿಯ ಯಕ್ಷಗಾನ ಕವಿ ಕೆಂಪಣ್ಣ, ಬಿಂಡಿಗನವಿಲೆ ವೆಂಕಟಾಚಾರ್ಯ, ಬೋಗಾದಿಯ ಬಿ.ಸಿ. ರಾಮಚಂದ್ರ ಶರ್ಮ, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಸಾಹಿತಿಗಳು ಮತ್ತು ಕವಿಗಳು ನಾಗಮಂಗಲದವರು ಎಂಬುದು ನಮ್ಮ ಹೆಮ್ಮೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿ ಶ್ರೀಮಂತ ಗೊಳಿಸಿದ ತಾಲೂಕು ಎಂಬ ಹಗ್ಗಳಿಕೆಗೆ ಪಾತ್ರವಾಗಿರುವ ನಾಗಮಂಗಲದಲ್ಲಿ ನವೆಂಬರ್ ನಿತ್ಯೋತ್ಸವವನ್ನು ಆಯೋಜಿಸಿರುವ ತಾಲೂಕು ಕಸಾಪ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಾಹಿತಿ ಹೆರಗನಹಳ್ಳಿ ದಿನೇಶ್ ಹೇಳಿದರು.

ತಾಲೂಕಿನ ಕದಬಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ನವೆಂಬರ್ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಿ.ಎಂ.ಶ್ರೀಕಂಠಯ್ಯ, ಜೀಶಂಪ, ಡಾ.ಎಚ್.ಎಲ್.ನಾಗೇಗೌಡ, ಹಂದೇನಹಳ್ಳಿಯ ಯಕ್ಷಗಾನ ಕವಿ ಕೆಂಪಣ್ಣ, ಬಿಂಡಿಗನವಿಲೆ ವೆಂಕಟಾಚಾರ್ಯ, ಬೋಗಾದಿಯ ಬಿ.ಸಿ. ರಾಮಚಂದ್ರ ಶರ್ಮ, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಸಾಹಿತಿಗಳು ಮತ್ತು ಕವಿಗಳು ನಾಗಮಂಗಲದವರು ಎಂಬುದು ನಮ್ಮ ಹೆಮ್ಮೆ ಎಂದರು.

ತಾಲೂಕಿನವರೇ ಆದ ಬಿ.ಎಂ. ಶ್ರೀಕಂಠಯ್ಯ, ಕರಾಕೃ, ಎಚ್.ಎಲ್. ನಾಗೇಗೌಡ, ಹ.ಕ. ರಾಜೇಗೌಡ, ವ.ನಂ. ಶಿವರಾಮ್, ನಾಗತಿಹಳ್ಳಿ ಚಂದ್ರಶೇಖರ್, ನಾಗತಿಹಳ್ಳಿ ರಮೇಶ್ ಸೇರಿದಂತೆ ಹಲವರ ಸಾಹಿತ್ಯ ಕೃತಿಗಳು ಅತ್ಯಂತ ಶ್ರೇಷ್ಠವಾದವು. ಈ ಎಲ್ಲ ಸಾಹಿತಿಗಳನ್ನು ಪಡೆದ ನಾವೇ ಧನ್ಯರು. ಕನ್ನಡವನ್ನು ಹೆಚ್ಚು ಬಳಸುವ ಜೊತೆಗೆ ಬೇರೆಯವರಿಗೂ ಕನ್ನಡ ಭಾಷೆಯನ್ನು ಕಲಿಸುವ ಮೂಲಕ ನಮ್ಮ ಮಾತೃಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕು ಎಂದು ಹೇಳಿದರು.

ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್. ಚಂದ್ರಶೇಖರ್ ಮಾತನಾಡಿ, ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ ಅದೊಂದು ದೊಡ್ಡ ಶಕ್ತಿ. ಮನಸ್ಸುಗಳನ್ನು ಬೆಸೆಯುವ ಭಾವ ಸೇತು. ನಾವೆಲ್ಲರೂ ಈ ಭಾಷೆಯನ್ನು ಉಳಿಸಿ ಬಳಸಿ ಬೆಳೆಸುವ ಕಾರ್ಯ ಮಾಡಬೇಕಿದೆ. ಕನ್ನಡ ಭಾಷೆಯಲ್ಲಿ ಹೆಚ್ಚೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿ ಶ್ರೀಮಂತ ಗೊಳಿಸುವ ಕಾರ್ಯ ಮಾಡಬೇಕಿದೆ ಎಂದರು.

ಇದೇ ವೇಳೆ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪಟ್ಟಣದ ಹೊಂಗಿರಣ ಎಜುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊಂಗಿರಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆ ಪ್ರಾಂಶುಪಾಲೆ ಜಿ.ಬಿ.ಅನಿತ ಅಧ್ಯಕ್ಷತೆ ವಹಿಸಿದ್ದರು. ಸಿ.ಎನ್.ಅಶೋಕ್, ನಾ.ರೈತ, ಆನಂದಮೂರ್ತಿ. ಟಿ.ವಿ. ಕೌಶಿಕ್, ಮಂಜುನಾಥ್ ನಾಯಕ್. ಎಚ್.ಎಸ್.ಹರೀಶ್, ಶ್ರೀನಿವಾಸ ಮೂರ್ತಿ, ಮನೋಜ್ ಸೇರಿದಂತೆ ಹಲವರು ಇದ್ದರು.