ಸಾರಾಂಶ
ಹುಬ್ಬಳ್ಳಿ:
ನವೆಂಬರ್‌ನಲ್ಲಿ ಕ್ರಾಂತಿ ಆಗುವುದಿಲ್ಲ. ಬದಲಿಗೆ ಸರ್ಕಾರವೇ ಪತನವಾಗಲಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬದಲಾವಣೆ ಆಗುವುದಿಲ್ಲ. ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗುವುದಿಲ್ಲ. ಸರ್ಕಾರವೇ ಪತನವಾಗುತ್ತದೆ ಎಂದರು. ಅಧಿಕಾರದ ತಿಕ್ಕಾಟದಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹೈಕಮಾಂಡ್, ಅಂತರಾಳ ನನಗೆ ಗೊತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಹೇಳುತ್ತಿದ್ದಾರೆ. ಅಂದರೆ ಪಕ್ಷದಲ್ಲಿ ಅಧಿಕಾರದ ಒಡಂಬಡಿಕೆ ಆಗಿದೆ ಎಂದರ್ಥ ಅಲ್ಲವೇ ಎಂದ ಅವರು, ಒಂದು ವೇಳೆ ಅಧಿಕಾರ ಹಂಚಿಕೆ ಕುರಿತಂತೆ ಒಡಂಬಡಿಕೆ ಆಗಿಲ್ಲ ಎಂದಾದರೆ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಡಿಕೆಶಿ ಹೇಳಲಿ ಎಂದು ಸವಾಲೆಸೆದರು.ಆರ್‌ಎಸ್‌ಎಸ್ ಏನೂ ಮಾಡಲು ಆಗಲ್ಲ:
ಆರ್‌ಎಸ್‌ಎಸ್ ಬಗ್ಗೆ ಯಾರು ಏನೇ ಮಾತನಾಡಿದರೂ ಏನೇನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ ಶೆಟ್ಟರ್, ಆರ್‌ಎಸ್‌ಎಸ್ ಬಗ್ಗೆ ಮಾತನಾಡದಿದ್ದರೆ ತಿಂದ ಕೂಳು ಅರಗುವುದಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆಗೆ ತಿರುಗೇಟು ನೀಡಿದರು.ಅಪ್ಪನ ಪ್ರಭಾವದಿಂದ ಪ್ರಿಯಾಂಕ ಖರ್ಗೆ ಮಂತ್ರಿಯಾಗಿದ್ದಾರೆ. ಇಲ್ಲದಿದ್ದರೆ ಮೊದಲ ಬಾರಿ ಶಾಸಕರಾದ ಖರ್ಗೆಗೆ ಮಂತ್ರಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಆರ್‌ಎಸ್‌ಎಸ್ ದೊಡ್ಡದಾಗಿ ಬೆಳೆದಿದೆ, ಮತ್ತೂ ಬೆಳೆಯಲಿದೆ. ಇವರೆಷ್ಟೇ ನಿಷೇಧಿಸಲು ಮುಂದಾದರೂ ಏನೇನೂ ಆಗುವುದಿಲ್ಲ. ಆರ್‌ಎಸ್‌ಎಸ್ ಬಗ್ಗೆ ಕೆಟ್ಟದಾಗಿ ಮಾತನಾಡುವುದೇ ಇವರ ಚಟವಾಗಿದೆ ಎಂದು ಕಿಡಿಕಾರಿದರು.