ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿರುವ ಡಿ.ಕೆ.ಶಿವಕುಮಾರ್ ಅವರಿಂದ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್‌ ಹುಡುಕಾಟ ಆರಂಭಿಸುತ್ತಿದ್ದಂತೆಯೇ ಪಕ್ಷದ ಘಟಾನುಘಟಿ ನಾಯಕರು ತೀವ್ರ ಪೈಪೋಟಿ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿರುವ ಡಿ.ಕೆ.ಶಿವಕುಮಾರ್ ಅವರಿಂದ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್‌ ಹುಡುಕಾಟ ಆರಂಭಿಸುತ್ತಿದ್ದಂತೆಯೇ ಪಕ್ಷದ ಘಟಾನುಘಟಿ ನಾಯಕರು ತೀವ್ರ ಪೈಪೋಟಿ ಆರಂಭಿಸಿದ್ದಾರೆ. ಇದರಿಂದಾಗಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹೈಕಮಾಂಡ್ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಮೇಲ್ವರ್ಗಕ್ಕೆ ಸೇರಿದ (ಒಕ್ಕಲಿಗ) ಡಿ.ಕೆ.ಶಿವಕುಮಾರ್ ಅವರು ತೆರವು ಮಾಡಲಿರುವ ಕೆಪಿಸಿಸಿ ಹುದ್ದೆ ಹಾಗೂ ಹಿಂದುಳಿದ ವರ್ಗದ ಮೇರು ನಾಯಕ (ಕುರುಬ) ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ತೆರವು ಮಾಡಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಿಂದುಳಿದ, ಪರಿಶಿಷ್ಟ ಅಥವಾ ಲಿಂಗಾಯತ ಸಮುದಾಯದಿಂದ ಸಮರ್ಥ ನಾಯಕರನ್ನು ಆಯ್ಕೆ ಮಾಡುವ ಉಮೇದಿ ಹೈಕಮಾಂಡ್ ಹೊಂದಿದೆ.

ಈ ಹುದ್ದೆಗೆ ಕಳೆದ ಹಲವು ತಿಂಗಳಿನಿಂದಲೂ ನಾಯಕ ಸಮುದಾಯದ ಸತೀಶ್‌ ಜಾರಕಿಹೊಳಿ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಆದರೆ, ಇದೀಗ ಪರಿಶಿಷ್ಟ ಜಾತಿಯ ಡಾ। ಜಿ.ಪರಮೇಶ್ವರ್‌, ಲಿಂಗಾಯತ ಸಮುದಾಯದಿಂದ ಅಪ್ಪಾಜಿ ನಾಡಗೌಡ, ಈಶ್ವರ್ ಖಂಡ್ರೆ ಹಾಗೂ ಬೋವಿ ಸಮುದಾಯದ ಶಿವರಾಜ ತಂಗಡಗಿ ಅವರ ಹೆಸರು ಕೂಡ ಮುನ್ನೆಲೆಗೆ ಬಂದಿದ್ದು, ತೀವ್ರ ಪೈಪೋಟಿ ನಿರ್ಮಾಣವಾಗಿದೆ.

ಅಪ್ಪಾಜಿ ಬಗ್ಗೆ ಒಲವು, ಆದ್ರೂ ಕಷ್ಟ:

ಈ ಪೈಕಿ ಈಶ್ವರ ಖಂಡ್ರೆ ಹಾಗೂ ಅಪ್ಪಾಜಿ ನಾಡಗೌಡ ಅವರ ಹೆಸರನ್ನು ಪರಿಗಣಿಸುವ ಮನಸ್ಸು ಹೈಕಮಾಂಡ್‌ಗೆ ಇದ್ದರೂ ಮುಖ್ಯಮಂತ್ರಿ ಹುದ್ದೆಯನ್ನು ಮೇಲ್ವರ್ಗಕ್ಕೆ ನೀಡಿರುವುದರಿಂದ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಗೆ ಪ್ರಮುಖವಾಗಿ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ ಪರಿಗಣನೆಗೆ ಬಂದಿರುವುದರಿಂದ ಲಿಂಗಾಯತ ಸಮುದಾಯಕ್ಕೆ ಈ ಹುದ್ದೆ ನೀಡುವ ಬಗ್ಗೆ ಹಿಂಜರಿಕೆಯಿದೆ.

ಹೀಗಾಗಿ ಹಿಂದುಳಿದ ಅಥವಾ ಪರಿಶಿಷ್ಟರಿಗೆ ಈ ಹುದ್ದೆ ನೀಡುವ ಸಂಭವನೀಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಈ ಲೆಕ್ಕಾಚಾರದ ಪ್ರಕಾರ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ ಹೆಸರು ಪ್ರಧಾನವಾಗಿ ಕೇಳಿ ಬರುತ್ತಿದೆಯಾದರೂ ಇದಕ್ಕೆ ಹಲವು ಆತಂಕಗಳು ಸೃಷ್ಟಿಯಾಗಿವೆ.

ಮುಖ್ಯವಾಗಿ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಗಾದಿ ಜತೆ ಪ್ರಬಲ ಖಾತೆಯ ಸಚಿವರಾಗಿಯೂ ಮುಂದುವರೆಯುವ ಅಪೇಕ್ಷೆಯನ್ನು ಹೈಕಮಾಂಡ್‌ ಮುಂದೆ ವ್ಯಕ್ತಪಡಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಈ ಮೂಲಗಳ ಪ್ರಕಾರ ಸಚಿವ ಸ್ಥಾ ನ (ಒಂದು ವರ್ಷದ ಮಟ್ಟಿಗೆ) ಹಾಗೂ ಅಧ್ಯಕ್ಷ ಹುದ್ದೆ ನೀಡುವುದಕ್ಕೆ ಹೈಕಮಾಂಡ್‌ಗೆ ಹಿಂಜರಿಕೆಯೇನೂ ಇಲ್ಲ. ಆದರೆ, ಸತೀಶ್‌ ಜಾರಕಿಹೊಳಿ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‌ ಪ್ರಮುಖ ನಾಯಕರಿಂದ ಕೆಲ ಆಕ್ಷೇಪಣೆಗಳು ಬಂದಿರುವುದು ಹಾಗೂ ಇದರಲ್ಲಿ ತಥ್ಯ ಇರುವುದರಿಂದ ಈ ಬಗ್ಗೆ ಹೈಕಮಾಂಡ್‌ ಮರು ಚಿಂತನೆ ಮಾಡುವಂತಾಗಿದೆ.

ಈ ರೀತಿ ಹೈಕಮಾಂಡ್‌ ಮರು ಚಿಂತನೆ ಮಾಡಲು ಸತೀಶ್‌ ಅವರ ಅತ್ಯಂತ ಪ್ರಬಲ ಎಡಪಂಥೀಯ ಧೋರಣೆ ಪ್ರಮುಖ ಕಾರಣ. ಕೆಲ ಸಾಂಪ್ರದಾಯಿಕ ಆಚರಣೆಗಳು ಹಾಗೂ ಮೌಢ್ಯಕ್ಕೆ ಸಂಬಂಧಿಸಿ ಸತೀಶ್‌ ಅವರ ನಿಲುವು ಅತ್ಯಂತ ಕಠಿಣವಾಗಿದೆ. ಈ ನಿಲುವಿನ ನಾಯಕ ಅಧ್ಯಕ್ಷರಾದರೆ ಮೃದು ಹಿಂದುತ್ವ ಧೋರಣೆ ಪ್ರತಿಪಾದಿಸಬೇಕು ಎಂಬ ನಿಲುವು ಹೊಂದಿರುವ ರಾಜ್ಯ ಕಾಂಗ್ರೆಸ್ ನಾಯಕತ್ವದ ಬಯಕೆಗೆ ಹಿನ್ನಡೆಯಾಗುತ್ತದೆ ಎಂಬ ಭಾವನೆಯಿದೆ.

ಅಲ್ಲದೆ, ಬೆಳಗಾವಿ ರಾಜಕಾರಣದ ವಿಚಾರದಲ್ಲಿ ಜಾರಕಿಹೊಳಿ ಕುಟುಂಬ ಪಕ್ಷ ಭೇದ ಮರೆತು ಒಗ್ಗೂಡುವುದು ಕೂಡ ಕಾಂಗ್ರೆಸ್ ನಾಯಕತ್ವದ ಆಕ್ಷೇಪಣೆಗಳಲ್ಲಿ ಒಂದಾಗಿದೆ. ಸತೀಶ್ ಜಾರಕಿಹೊಳಿ ಸಹೋದರರು ಬಿಜೆಪಿಯ ಪ್ರಮುಖ ಸ್ಥಾನಗಳಲ್ಲಿರುವುದು ಹಾಗೂ ಇಡೀ ಜಾರಕಿಹೊಳಿ ಕುಟುಂಬ ಚುನಾವಣೆ ಸಂದರ್ಭದಲ್ಲಿ ಪರೋಕ್ಷವಾಗಿ ಕುಟುಂಬದ ಸದಸ್ಯರ ಗೆಲುವಿಗಾಗಿ ತೆರೆಮರೆಯಲ್ಲಿ ಪ್ರಯತ್ನಿಸುವ ವಿಚಾರವನ್ನು ಈ ನಾಯಕರು ಹೈಕಮಾಂಡ್‌ ಮುಂದಿಟ್ಟಿದ್ದಾರೆ.

ಇಷ್ಟಾಗಿಯೂ ಪ್ರಬಲ ನಾಯಕ ಸಮುದಾಯದ ಮೇಲೆ ಸತೀಶ್ ಹೊಂದಿರುವ ಹಿಡಿತ ಹಾಗೂ ಸಿದ್ದರಾಮಯ್ಯ ಅವರ ನಂತರ ತಾವೇ ಅಹಿಂದ ನಾಯಕರಾಗಬೇಕು ಎಂದು ಸತೀಶ್ ಜಾರಕಿಹೊಳಿ ನಡೆಸುತ್ತಿರುವ ಪ್ರಯತ್ನಗಳು ಹೈಕಮಾಂಡ್ ಗಮನದಲ್ಲಿದೆ. ಹೀಗಾಗಿ ಅವರ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಿಲ್ಲವಾದರೂ ಪರ್ಯಾಯ ಹೆಸರುಗಳನ್ನು ಪರಿಗಣಿಸಲು ಮುಂದಾಗಿದೆ.ಪರಂ ಆಸಕ್ತಿ:

ಇದೇ ವೇಳೆ ಪರಿಶಿಷ್ಟ ಪಂಗಡದ ಪ್ರಮುಖ ನಾಯಕ ಡಾ। ಜಿ.ಪರಮೇಶ್ವರ್‌ ಅವರು ಕೆಪಿಸಿಸಿ ಅಧ್ಯಕ್ಷ ಗಾದಿಗೆ ಆಸಕ್ತಿ ತೋರಿರುವುದು ಪೈಪೋಟಿ ತೀವ್ರಗೊಳ್ಳುವಂತೆ ಮಾಡಿದೆ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಪರಮೇಶ್ವರ್ ಅವರಿಗೆ ಈ ಹುದ್ದೆ ತಪ್ಪಿರುವುದು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಹೆಸರು ಉಪ ಮುಖ್ಯಮಂತ್ರಿ ಹುದ್ಗೆಗೆ ಆಕಾಂಕ್ಷಿ ಆಗಿರುವುದರಿಂದ ಪರಮೇಶ್ವರ್‌ ಅವರಿಗೆ ಗೌರವಯುತ ಸ್ಥಾನಮಾನ ನೀಡುವ ಅನಿವಾರ್ಯತೆ ಹೈಕಮಾಂಡ್‌ಗೆ ನಿರ್ಮಾಣವಾಗಿದೆ.

ಹೀಗಾಗಿ ವಿಧಾನಸಭೆ ಸ್ಪೀಕರ್‌ ಹುದ್ದೆಗೂ ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದರೂ ಪರಮೇಶ್ವರ್ ಅವರು ಕೆಪಿಸಿಸಿ ಹುದ್ದೆಯ ಮೇಲೆ ಆಸಕ್ತಿ ತೋರಿರುವುದು ಹೊಸ ಬೆಳವಣಿಗೆ. ಈಗಾಗಲೇ ಎಂಟು ವರ್ಷಗಳ ಕಾಲ ಕೆಪಿಸಿಸಿ ಹುದ್ದೆ ನಿರ್ವಹಿಸಿದ್ದ ಪರಮೇಶ್ವರ್‌ ಅವರಿಗೆ ಮತ್ತೆ ಸದರಿ ಹುದ್ದೆ ನೀಡುವುದರಿಂದ ದಲಿತ ಸಮುದಾಯವನ್ನು ಸಂತೈಸಬಹುದು ಎಂಬ ಲೆಕ್ಕಾಚಾರವೂ ಇದೆ.ತಂಗಡಗಿ ಹೆಸರು ಮುನ್ನೆಲೆಗೆ:

ಒಂದು ವೇಳೆ ಪರಮೇಶ್ವರ್‌ರನ್ನು ಸ್ಪೀಕರ್‌ ಹುದ್ಗೆಗೆ ಪರಿಗಣಿಸಿದರೆ ಬೋವಿ ಸಮುದಾಯದ ಶಿವರಾಜ ತಂಗಡಗಿ ಅವರ ಹೆಸರನ್ನು ಹೈಕಮಾಂಡ್ ಕೆಪಿಸಿಸಿ ಹುದ್ದೆಗೆ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದವರಾದ ತಂಗದಡಿ ಎಸ್‌.ಸಿ. ಸಮುದಾಯದಲ್ಲಿ ಪ್ರಭಾವಿ ಆಗಿರುವುದು ಹಾಗೂ ಪಕ್ಷ ಸಂಘಟನೆಯಲ್ಲಿ ಸಾಮರ್ಥ್ಯ ತೋರಿದ್ದಾರೆ. ತಂಗಡಗಿ ಅವರೊಂದಿಗೆ ಈ ಬಗ್ಗೆ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತುಕತೆ ನಡೆಸಿದ್ದಾರೆ ಎಂದೂ ಹೇಳಲಾಗಿದೆ.