ಸಾರಾಂಶ
ರಾಜ್ಯ ಸರ್ಕಾರದ ಗ್ಯಾರಂಟಿ ಜಾರಿಯಿಂದ ಕಾಂಗ್ರೆಸ್‌ಗೆ ಹೆಚ್ಚು ಮತ ಬರುವ ವಿಶ್ವಾಸಕೇಂದ್ರದ ಸಾಧನೆ, ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಜನಮತ ಎಂಬುದು ನಾಯಕರ ಅಂಬೋಣ
ಕನ್ನಡಪ್ರಭವಾರ್ತೆ ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಏ.26 ರಂದು ನಡೆದ ಮತದಾನದಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಶೇ.72 ರಷ್ಟು ಮತದಾನ ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಈಗ ಲೀಡ್ ಚರ್ಚೆಗಳು ಆರಂಭವಾಗಿವೆ.ಕಾಂಗ್ರೆಸ್ ಪಕ್ಷದ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ ಪತ್ರಿಕೆಯೊಂದಿಗೆ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಟಿ.ರಘುಮೂರ್ತಿ ಮಾರ್ಗದರ್ಶನದಲ್ಲಿ ನಾಲ್ಕು ಬಾರಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಲಾಗಿದೆ. ಪ್ರತಿ ಮನೆ ಮನೆಗೂ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಬಗ್ಗೆ ಮತದಾರರಿಗೆ ವಿಶ್ವಾಸ ಮೂಡಿಸಿದ್ದು, ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ನೀಡಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರಿಗೆ ವರವಾಗಲಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಪಕ್ಷ ಚಳ್ಳಕೆರೆ ಕ್ಷೇತ್ರದಲ್ಲಿ ಹೆಚ್ಚು ಮತ ಗಳಿಸಿದ್ದರೂ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೆಚ್ಚು ಮತಗಳ ಅಂತರದಿಂದ ಜಯಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿಯೊಂದಿಗೆ ಬಿಜೆಪಿ ಎಲ್ಲಾ ಹಂತದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಕ್ಷೇತ್ರದೆಲ್ಲೆಡೆ ಪ್ರಚಾರ ನಡೆಸಿದ್ದಲ್ಲದೆ, ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲಾಗಿದ್ದು, ಇದು ಬಿಜೆಪಿ ಅಭ್ಯರ್ಥಿಗೆ ಲೀಡ್ ತಂದುಕೊಡಲಿದೆ ಎಂದರು.ನರೇಂದ್ರ ಮೋದಿಯವರ ಜನಪರ ಕಾರ್ಯಕ್ರಮ ಮತದಾರರ ವಿಶ್ವಾಸ ಹೆಚ್ಚಿಸಿದೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವು ಸಾಧಿಸಿ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಅಲಂಕರಿಸುವ ಎಲ್ಲಾ ಸಾಧ್ಯಗಳಿವೆ ಎಂದಿದ್ಧಾರೆ. ವಿಶೇಷವಾಗಿ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಅಭ್ಯರ್ಥಿ ಗೆಲುವಿಗಾಗಿ ಸಾಕಷ್ಟು ಪರಿಶ್ರಮ ವಹಿಸಿದ್ದಾರೆ ಎಂದರು.
ಒಟ್ಟಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಪಕ್ಷ ಸರ್ಕಾರದ ಐದು ಗ್ಯಾರಂಟಿಗಳನ್ನು ನಂಬಿ ಕುಳಿತಿದ್ದರೆ, ಬಿಜೆಪಿಯೂ ಸಹ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಅಭಿವೃದ್ಧಿ ಕಾರ್ಯಗಳ ಗ್ಯಾರಂಟಿ ಆಧಾರದ ಮೇಲೆ ಗೆಲವಿನ ಲೆಕ್ಕಾಚಾರ ಹಾಕುತ್ತಿದೆ.