ಸಾರಾಂಶ
ಹಂಪಿಯಲ್ಲಿ ಶಿಲ್ಪಕಲಾ ಶಿಬಿರ ಆಯೋಜನೆ/ ಉತ್ಸವಕ್ಕೆ ಭರದ ಸಿದ್ಧತೆಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆವಿಶ್ವ ವಿಖ್ಯಾತ ಹಂಪಿ ಉತ್ಸವದ ಸದ್ದು ಎಲ್ಲೆಡೆ ಜೋರಾಗಿದ್ದು, ಜಿಲ್ಲಾಡಳಿತ ಕೂಡ ಹೊಸ ಹುರುಪಿನೊಂದಿಗೆ ಉತ್ಸವಕ್ಕೆ ಭರದ ಸಿದ್ಧತೆ ನಡೆಸುತ್ತಿದೆ. ಉತ್ಸವದ ಹಿನ್ನೆಲೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಈಗ ಶಿಲ್ಪಿಗಳು ಹಂಪಿಯಲ್ಲಿ ವಿವಿಧ ಶಿಲ್ಪಗಳನ್ನು ಕೆತ್ತನೆ ಮಾಡುತ್ತಿದ್ದಾರೆ.
ಹಂಪಿ ಉತ್ಸವ ಫೆಬ್ರವರಿ 28, ಮಾರ್ಚ್ 1 ಮತ್ತು 2ರಂದು ಮೂರು ದಿನಗಳವರೆಗೆ ನಡೆಯಲಿದೆ. ಪ್ರಧಾನ ವೇದಿಕೆ ಸೇರಿದಂತೆ ಐದು ವೇದಿಕೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ವಿಜಯನಗರ ವಾಸ್ತುಶಿಲ್ಪದಲ್ಲಿ ಪ್ರಧಾನ ವೇದಿಕೆ ಅರಳಿದೆ.ಬೆಂಗಳೂರಿನ ಉಡುಪಾಸ್ ಸಂಸ್ಥೆ ಹಾಗೂ ವಿಜಯನಗರ ಜಿಲ್ಲಾಡಳಿತ ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ಹಂಪಿ ಸ್ಮಾರಕಗಳ ಗುಚ್ಛವನ್ನು ಬಳಸಿಕೊಂಡು ಅತ್ಯಾಕರ್ಷಕ ವೇದಿಕೆ ನಿರ್ಮಾಣ ಮಾಡುತ್ತಿದೆ.
120 ಅಡಿ ಅಗಲ, 80 ಅಡಿ ಉದ್ದ ಅಳತೆಯಲ್ಲಿ ಪ್ರಧಾನ ವೇದಿಕೆ ನಿರ್ಮಿಸಲಾಗುತ್ತಿದೆ. ಜೊತೆಗೆ ಆಕರ್ಷಕ ಲೈಟಿಂಗ್ ವ್ಯವಸ್ಥೆ ಕೂಡ ಮಾಡಲಾತ್ತಿದೆ. ಎಲ್‌ಇಡಿ ಪರದೆ ಕೂಡ ಅಳವಡಿಕೆ ಮಾಡಲಾಗುತ್ತಿದ್ದು, ವೇದಿಕೆ ಮುಂಭಾಗದಲ್ಲಿ 70 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ವಿಐಪಿ ಹಾಗೂ ವಿವಿಐಪಿ ಆಸನಗಳನ್ನು ಕೂಡ ವ್ಯವಸ್ಥೆ ಮಾಡಲಾಗುತ್ತಿದ್ದು, ಕಲಾವಿದರು, ಗಣ್ಯಾತಿ ಗಣ್ಯರಿಗಾಗಿ ಗ್ರೀನ್ ರೂಂ ನಿರ್ಮಾಣ ಮಾಡಲಾಗುತ್ತಿದೆ.ಶಿಲ್ಪಗಳ ಕೆತ್ತನೆ:
ವಿಜಯನಗರ ಸಾಮ್ರಾಜ್ಯ ಕಲೆ, ಸಾಹಿತ್ಯ, ಸಂಸ್ಕೃತಿ, ವಾಸ್ತುಶಿಲ್ಪಕ್ಕೆ ಅಗಾಧವಾದ ಕೊಡುಗೆ ನೀಡಿದೆ. ವಾಸ್ತುಶಿಲ್ಪ ಕಲೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಹಂಪಿ ಉತ್ಸವದಲ್ಲೂ ಹತ್ತು ಜನ ಶಿಲ್ಪಿಗಳಿಗೆ ವಿವಿಧ ಬಗೆಯ ಶಿಲ್ಪಗಳನ್ನು ಅರಳಿಸಲು ಅವಕಾಶ ನೀಡಲಾಗಿದೆ. ಈಗಾಗಲೇ ಶಿಲ್ಪಕಲಾ ಶಿಬಿರ ಆರಂಭಗೊಂಡಿದ್ದು, ಈ ಶಿಲ್ಪಗಳನ್ನು ಹಂಪಿ ಉತ್ಸವದಲ್ಲಿ ಮೂರು ದಿನಗಳವರೆಗೆ ಪ್ರದರ್ಶನಕ್ಕೂ ಅವಕಾಶ ಮಾಡಿಕೊಡಲಾಗುತ್ತಿದೆ.ವಿವಿಧ ಬಗೆಯ ಶಿಲ್ಪಗಳು:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ವಿಜನಯಗರ ಜಿಲ್ಲಾಡಳಿತದ ವತಿಯಿಂದ ಶಿಲ್ಪಕಲಾ ಶಿಬಿರ ಆಯೋಜಿಸಲಾಗಿದ್ದು, ಮೈಸೂರಿನಿಂದ ಕೃಷ್ಣ ಶಿಲೆ ತರಿಸಲಾಗಿದೆ. ಹತ್ತು ಜನ ಶಿಲ್ಪಿಗಳು ವಿವಿಧ ವಾಸ್ತುಶಿಲ್ಪ ಶೈಲಿಗಳಲ್ಲಿ ಶಿಲ್ಪಗಳನ್ನು ಅರಳಿಸುತ್ತಿದ್ದಾರೆ.ರಾಯಚೂರಿನ ಜಾನೇಕಲ್‌ನ ವೀರೇಶ್ ಬಡಿಗೇರ ಹೊಯ್ಸಳ ಶೈಲಿಯಲ್ಲಿ ಡವಣಿ ನುಡಿಸುವ ಯಕ್ಷ ಮೂರ್ತಿ ಅರಳಿಸುತ್ತಿದ್ದಾರೆ. ಗದಗನ ಗಜೇಂದ್ರಗಡದ ಮುತ್ತಣ್ಣ ಅಳವಂಡಿ ಅವರು ಹೊಯ್ಸಳ ಶೈಲಿಯಲ್ಲಿ ಲಿಪಿ ಯಕ್ಷ ಮೂರ್ತಿ ಕೆತ್ತನೆ ಮಾಡುತ್ತಿದ್ದರೆ, ಗಂಗಾವತಿಯ ಪ್ರಶಾಂತ್ ಎನ್. ಸೋನಾರ್ ಹೊಯ್ಸಳ ಶೈಲಿಯಲ್ಲಿ ವೀಣಾಧಾರಿ ಯಕ್ಷಮೂರ್ತಿ ಕೆತ್ತನೆ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಮೆಟ್ರಿಯ
ಎನ್. ಗಣೇಶ್ ಆಚಾರ್ಯ ಅವರು ಧ್ಯಾನ ಆಂಜನೇಯ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ.ವಿಜಯನಗರ ಜಿಲ್ಲೆ ಉಜ್ಜಯನಿಯ ಅವಿನಾಶ್ ಕುಮಾರ್ ವಿಜಯನಗರ ಶೈಲಿಯಲ್ಲಿ ಶಿಲಾಬಾಲಿಕೆ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ. ವಿಜಯನಗರ ಜಿಲ್ಲೆ ಇಟಗಿಯ ಎ. ಪ್ರಕಾಶ್ ಹೊಯ್ಸಳ ಶೈಲಿಯಲ್ಲಿ ಧನ್ವಂತರಿ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ. ಗದಗ ಜಿಲ್ಲೆ ಅಂತೂರ ಬೆಂತೂರಿನ ರಮೇಶ್ ಬಿ. ಕಮ್ಮಾರ ಹೊಯ್ಸಳ ಶೈಲಿಯಲ್ಲಿ ಸೂರ್ಯ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ. ಹೊಸಪೇಟೆಯ
ಚಂದನ್ ಆಚಾರ್ಯ ಗಣೇಶ ಮೂರ್ತಿ ಕೆತ್ತನೆ ಮಾಡುತ್ತಿದ್ದಾರೆ. ವಿಜಯನಗರ ಜಿಲ್ಲೆಯ ಪ್ರಮೋದ್ ಆಚಾರ್ಯ ಚಾಲುಕ್ಯ ಶೈಲಿಯಲ್ಲಿಕಾರ್ತಿಕೇಯ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ. ಹೊಸಪೇಟೆಯ ಶಿಲ್ಪಿ ಅಭಿಷೇಕ ಬಿ. ಗೌತಮಬುದ್ಧ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ.
ಐತಿಹಾಸಿಕ ಹಂಪಿ ಉತ್ಸವದಲ್ಲಿ ಶಿಲ್ಪಕಲಾ ಶಿಬಿರ ಆಯೋಜನೆ ಮಾಡುವ ಮೂಲಕ ಶಿಲ್ಪಕಲೆಗೂ ಉತ್ತೇಜನ ನೀಡುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಶಿಲ್ಪಿಕಲೆಗೂ ಮನ್ನಣೆ ನೀಡಿದಂತಾಗಿದೆ ಎನ್ನುತ್ತಾರೆ ಶಿಲ್ಪಿಗಳಾದ ವೀರೇಶ್ ಬಡಿಗೇರ, ಮುತ್ತಣ್ಣ ಅಳವಂಡಿ, ಪ್ರಶಾಂತ್ ಎನ್. ಸೋನಾರ್.