ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಸಭೆ ಉಪ ಚುನಾವಣೆಗೆ ನಿರೀಕ್ಷೆಯಂತೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಮರ್ಥ್ ಮಲ್ಲಿಕಾರ್ಜುನ್ ಹಾಗೂ ಬಾಗಲಕೋಟೆ ಕ್ಷೇತ್ರಕ್ಕೆ ಉಮೇಶ್ ಮೇಟಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಪ್ರಕಟಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿ-ಫಾರಂ ವಿತರಿಸಿದ್ದಾರೆ.ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿರುವ ಸೋಮವಾರ ಬೆಳಗ್ಗೆ 11.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಸಮರ್ಥ್ ಅವರು ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ.
ಬಳಿಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಬಾಗಲಕೋಟೆಗೆ ತೆರಳಲಿದ್ದು, ಮಧ್ಯಾಹ್ನ 2 ಗಂಟೆಗೆ ಬಾಗಲಕೋಟೆ ತಹಸೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿರುವ ಉಮೇಶ್ ಹುಲ್ಲಪ್ಪ ಮೇಟಿ ಅವರಿಗೆ ಸಾಥ್ ನೀಡಲಿದ್ದಾರೆ.ವಾರಸುದಾರರಿಗೆ ಮಣೆ:
ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯಿಂದ ತೆರವಾದ ದಾವಣಗೆರೆ ದಕ್ಷಿಣ, ಎಚ್.ವೈ.ಮೇಟಿ ಅವರ ಸಾವಿನಿಂದ ತೆರವಾದ ಬಾಗಲಕೋಟೆ ಕ್ಷೇತ್ರ ಎರಡಕ್ಕೂ ಕಾಂಗ್ರೆಸ್‌ನಿಂದ ವಾರಸುದಾರರಿಗೆ ಟಿಕೆಟ್ ಅಂತಿಮಗೊಳಿಸಲಾಗಿದೆ.
ಬಾಗಲಕೋಟೆ ಕ್ಷೇತ್ರಕ್ಕೆ ಎಚ್.ವೈ.ಮೇಟಿ ಪುತ್ರರಲ್ಲಿ ಒಬ್ಬರಿಗೆ ಟಿಕೆಟ್ ಎಂಬುದು ಖಚಿತವಾಗಿತ್ತು. ಅಂತಿಮವಾಗಿ ಜನ ಬೆಂಬಲ, ಕ್ಷೇತ್ರದ ಸಮೀಕ್ಷೆ ಆಧರಿಸಿ ಉಮೇಶ್ ಅವರಿಗೆ ಟಿಕೆಟ್ ಖಚಿತಪಡಿಸಲಾಗಿದೆ.
ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ಗಾಗಿ ಅಲ್ಪಸಂಖ್ಯಾತರು ಹಾಗೂ ಶಾಮನೂರು ಕುಟುಂಬದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಟಿಕೆಟ್ ಘೋಷಣೆಗೂ ಮೊದಲೇ ಸಮರ್ಥ್ ಮಲ್ಲಿಕಾರ್ಜುನ್ ಹಾಗೂ ಅಲ್ಪಸಂಖ್ಯಾತರ ಪರ ಸಾಧಿಕ್ ಪೈಲ್ವಾನ್ ನಾಮಪತ್ರವನ್ನೂ ಸಲ್ಲಿಕೆ ಮಾಡಿದ್ದರು.ಶುಕ್ರವಾರ ಹಾಗೂ ಶನಿವಾರ ನಡೆದ ಸರಣಿ ಸಭೆಗಳ ಬಳಿಕ ಅಂತಿಮವಾಗಿ ಕಾಂಗ್ರೆಸ್‌ನ ಅಲ್ಪಸಂಖ್ಯಾತ ನಾಯಕರನ್ನು ಮನವೊಲಿಸಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್‌ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಭಾನುವಾರ ಬೆಳಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಉಪಚುನಾವಣೆ ಅಭ್ಯರ್ಥಿಗಳನ್ನು ಪ್ರಕಟಿಸಿದರು.ಬಿ-ಫಾರಂ ವಿತರಿಸಿದ ಡಿಕೆಶಿ:
ಭಾನುವಾರ ಬೆಳಗ್ಗೆ ಸಮರ್ಥ್ ಪರವಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಡಿ.ಕೆ.ಶಿವಕುಮಾರ್ ನಿವಾಸಕ್ಕೆ ತೆರಳಿ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಬಿ-ಫಾರಂ ಸ್ವೀಕರಿಸಿದರು.ಇನ್ನು ಉಮೇಶ್ ಮೇಟಿ ಪರವಾಗಿ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ನಾಯಕ ಮಂಜುನಾಥ್ ಅವರು ಡಿ.ಕೆ.ಶಿವಕುಮಾರ್ ಅವರಿಂದ ಬಿ-ಫಾರಂ ಪಡೆದುಕೊಂಡರು.
-ಬಾಕ್ಸ್-ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ಮಾ.23
ನಾಮಪತ್ರ ಪರಿಶೀಲನೆ- ಮಾ.24ನಾಮಪತ್ರ ಹಿಂಪಡೆಯಲು ಅಂತಿಮ ದಿನ- 26
ಮತದಾನ ದಿನಾಂಕ- ಏ.9ಫಲಿತಾಂಶ - ಮೇ 4.ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ನಿಶ್ಚಿತ; ವಿಜಯೇಂದ್ರ:
ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿನ ಸರಣಿ ಭ್ರಷ್ಟಾಚಾರಗಳ ವಿರುದ್ಧ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ಹೀಗಾಗಿ, ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹುಬ್ಬಲ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದೆ. ಕಾಂಗ್ರೆಸ್ ಆಡಳಿತದಲ್ಲಿನ ಸರಣಿ ಭ್ರಷ್ಟಾಚಾರಗಳ ವಿರುದ್ಧ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ಎರಡೂ ಕ್ಷೇತ್ರದಲ್ಲಿ ವಾತಾವರಣ ಬಿಜೆಪಿ ಪರವಾಗಿದ್ದು, ನಮ್ಮ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು.ಹುಬ್ಬಳ್ಳಿ ಮೂಲಕ ಬಾಗಲಕೋಟೆಗೆ ಪ್ರಯಾಣ ಬೆಳೆಸುವ ಮಾರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕುಸುಗಲ್ಲ ರಸ್ತೆಯ ಸಿದ್ಧಾರೂಢ ಟಿಫಿನ್ ಸೆಂಟರ್‌ಗೆ ಭೇಟಿ ನೀಡಿದರು. ಈ ವೇಳೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮಿರ್ಚಿ-ಮಂಡಕ್ಕಿ ಸವಿದು, ಚಹಾ ಕುಡಿದರು.2 ಕ್ಷೇತ್ರದಲ್ಲೂ ಬಿಜೆಪಿ ಬಾವುಟ ಹಾರಿಸುತ್ತೇವೆ; ಬೊಮ್ಮಾಯಿ:
ಉಪ ಚುನಾವಣೆ ನಡೆಯುತ್ತಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಹಳ ಲೆಕ್ಕಾಚಾರ ಹಾಕಿ ದಾವಣಗೆರೆಯಲ್ಲಿ ಟಿಕೆಟ್ ನೀಡಿದ್ದೇವೆ. ಬರುವಂತಹ ದಿನಗಳಲ್ಲಿ ಬಡವರು, ಎಸ್ಸಿ, ಎಸ್ಟಿ ಜನರಿಂದ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತದೆ. ಆಶ್ಚರ್ಯಕರ ಫಲಿತಾಂಶ ದಾವಣಗೆರೆಯಲ್ಲಿ ದೊರೆಯುತ್ತದೆ. ಬಾಗಲಕೋಟೆಯಲ್ಲಿ ವಿಜಯಪಥದಲ್ಲಿ ನಾವು ಹೋಗುತ್ತಿದ್ದೇವೆ. ಕಳೆದ ಬಾರಿ ಕಾಂಗ್ರೆಸ್ ಸೇರಿದ್ದ ಅನೇಕ ಮುಖಂಡರು ಈಗ ಬಿಜೆಪಿ ಸೇರುತ್ತಿದ್ದಾರೆ. ಹೀಗಾಗಿ ಬಾಗಲಕೋಟೆಯಲ್ಲಿ ದೊಡ್ಡ ಪ್ರಮಾಣದ ಅಂತರದಲ್ಲಿ ಗೆಲ್ಲುತ್ತೇವೆ. ದಾವಣಗೆರೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸುತ್ತೇವೆ ಎಂದರು.ದಾವಣಗೆರೆ, ಬಾಗಲಕೋಟೆ ಕ್ಷೇತ್ರ ನಮ್ದೆ; ಡಿಕೆಶಿ:‘ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಮರ್ಥ್ ಮಲ್ಲಿಕಾರ್ಜುನ್, ಬಾಗಲಕೋಟೆ ಕ್ಷೇತ್ರದಿಂದ ಉಮೇಶ್ ಮೇಟಿ ಅವರಿಗೆ ಒಮ್ಮತದ ತೀರ್ಮಾನದಂತೆ ಟಿಕೆಟ್ ನೀಡಿದ್ದು, ಒಗ್ಗಟ್ಟಿನಿಂದ ಚುನಾವಣೆ ಮಾಡಿ ಎರಡೂ ಕ್ಷೇತ್ರ ಗೆಲ್ಲಿಸಿಕೊಂಡು ಬರುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತರು ಟಿಕೆಟ್ ಕೇಳಿದ್ದರು. ಜನಸಂಖ್ಯೆ ಆಧಾರದ ಮೇಲೆ ಕೇಳಿರುವುದರಲ್ಲಿ ತಪ್ಪಿಲ್ಲ. ನಾನು, ಮುಖ್ಯಮಂತ್ರಿ, ಜಮೀರ್ ಅಹಮದ್, ನಾಸೀರ್ ಹುಸೇನ್, ಸಲೀಂ ಅಹ್ಮದ್, ಹುಸೇನ್, ಹ್ಯಾರಿಸ್, ಜಬ್ಬಾರ್ ಅವರು ಎಲ್ಲ ಅಲ್ಪಸಂಖ್ಯಾತ ನಾಯಕರು, ಎಐಸಿಸಿ ಕಾರ್ಯದರ್ಶಿಗಳ ಜತೆ ಮಾತನಾಡಿ ಕೊನೆಗೆ ಒಮ್ಮತದ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.ಅಲ್ಪಸಂಖ್ಯಾತ ನಾಯಕರಿಂದ ಏನಾದರೂ ಬೇಡಿಕೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇಳುತ್ತಾರೆ, ಪಕ್ಷ ಏನು ಹೇಳುತ್ತದೆಯೋ ಅದಕ್ಕೆ ಮಲ್ಲಿಕಾರ್ಜುನ್ ಅವರೂ ಬದ್ಧರಾಗಿದ್ದಾರೆ. ಕನಕಪುರದಲ್ಲಿ ನಿಲ್ಲಬೇಡ ಅಂದ್ರೆ ನಾನೂ ನಿಲ್ಲಲ್ಲ. ಆಸೆ ಪಡುವುದು ತಪ್ಪಲ್ಲ. ಮೇಟಿ ಕುಟುಂಬದಲ್ಲಿ ನನಗೆ ಮಲ್ಲಿಕಾರ್ಜುನ ಅವರಿಗೆ ನೀಡುವುದಕ್ಕೆ ಆಸೆಯಿತ್ತು. ಮೇಟಿ ಕುಟುಂಬದಲ್ಲಿಯೇ ಹಲವರಿಗೆ ಆಸೆ ಇರುವಾಗ ಬೇರೆ ಕ್ಷೇತ್ರದಲ್ಲೂ ಸಹಜವಲ್ಲವೇ ಎಂದರು.ಬಿಜೆಪಿ, ಜೆಡಿಎಸ್‌ನಲ್ಲೇ ಒಮ್ಮತ ಇಲ್ಲ. ಇಬ್ಬರು ಗಲಾಟೆ ಮಾಡಿದ್ದಕ್ಕೆ ಮೂರನೆಯವರಿಗೆ ನೀಡಿದ್ದಾರೆ. ದಾವಣಗೆರೆಗೆ ಶಿವಶಂಕರಪ್ಪ ಅವರು ಮಾಡಿರುವ ಸೇವೆ, ಅಭಿವೃದ್ಧಿ ಅತ್ಯುತ್ತಮವಾಗಿದೆ. ಬೆಂಗಳೂರು ನಗರಕ್ಕಿಂತ ಚೆನ್ನಾಗಿ ದಾವಣಗೆರೆಯಿದೆ. ಹೀಗಾಗಿ ಎಲ್ಲವನ್ನೂ ಪರಿಗಣಿಸಿ ಟಿಕೆಟ್ ನೀಡಲಾಗಿದೆ ಎಂದು ಪ್ರತಿಪಾದಿಸಿದರು.ಜಬ್ಬಾರ್ ಮೂರು ಬಾರಿ ಎಂಎಲ್‌ಸಿ:ಶಿವಶಂಕರಪ್ಪ ಅವರೇ ನನ್ನ ನಂತರ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಎಂದಿದ್ದರಂತೆ ಎಂಬ ಪ್ರಶ್ನೆಗೆ, ಅದಕ್ಕೆ ನಾವು ಮೂರು ಬಾರಿ ಜಬ್ಬಾರ್ ಅವರನ್ನು ಎಂಎಲ್‌ಸಿ ಮಾಡಿರುವುದು. ಜಬ್ಬಾರ್ ಅವರನ್ನು ಇದೇ ಶಿವಶಂಕರಪ್ಪ ಅವರು ಎಸ್.ಎಂ.ಕೃಷ್ಣ ಅವರ ಕಾಲ, ಸಿದ್ದರಾಮಯ್ಯ ಅವರ ಕಾಲದಲ್ಲೂ ಎಂಎಲ್‌ಸಿ ಮಾಡಿದ್ದಾರೆ. ಪರಿಷತ್ ಸ್ಥಾನವನ್ನು ಮಾನೆ ಅವರ ಬದಲಿಗೆ ಧಾರವಾಡದಿಂದ ಸಲೀಂ ಅವರಿಗೆ ನೀಡಿದೆವು. ಆಗಾಗ್ಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಹೇಳಿದರು.ಪ್ರತಿಪಕ್ಷಗಳು ಯಾವ ಚುನಾವಣೆ ಗೆದ್ದಿವೆ? ಅವರ ಸ್ಥಾನಗಳನ್ನು ನಾವು ಗೆದ್ದುಕೊಂಡು ಬಂದಿದ್ದೇವೆ. ಬಸವರಾಜ ಬೊಮ್ಮಾಯಿ ಅವರ ಸ್ಥಾನ, ಕುಮಾರಸ್ವಾಮಿ ಅವರ ಸ್ಥಾನ ಗೆದ್ದಿದ್ದೇವಲ್ಲವೇ ಎಂದು ಶಿವಕುಮಾರ್ ಪ್ರಶ್ನಿಸಿದರು.