ಇಂದಿನ ದಿನಗಳಲ್ಲಿ ಶಿಕ್ಷಣ, ಸಂಸ್ಕಾರ ಮಹತ್ವದ್ದಾಗಿದೆ: ಬೂದೀಶ್ವರ ಶ್ರೀ

| Published : Dec 15 2023, 01:31 AM IST

ಇಂದಿನ ದಿನಗಳಲ್ಲಿ ಶಿಕ್ಷಣ, ಸಂಸ್ಕಾರ ಮಹತ್ವದ್ದಾಗಿದೆ: ಬೂದೀಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ತಾಲೂಕಿನ ಜಂತ್ಲಿ-ಶಿರೂರ ಗ್ರಾಮದ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ ಶ್ರೀಮಠದಲ್ಲಿ ೨೯ನೇ ವರ್ಷದ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಹೊಸಹಳ್ಳಿ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಶ್ರೀಗಳು ಮಾತನಾಡಿದರು.

ಜಂತ್ಲಿ-ಶಿರೂರಿನ ಚನ್ನವೀರ ಶರಣರ ಮಠದಲ್ಲಿ ಪುರಾಣ ಮಂಗಲೋತ್ಸವಮುಂಡರಗಿ: ಮಕ್ಕಳಿಗೆ ಸರಿಯಾದ ಶಿಕ್ಷಣ ಮತ್ತು ಸಂಸ್ಕಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಮಕ್ಕಳು ತಪ್ಪು ಮಾಡಿದರೆ ಅದಕ್ಕೆ ನೀವು ಕಾರಣರು ಎಂದು ಹೊಸಳ್ಳಿಯ ಜ.ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು. ತಾಲೂಕಿನ ಜಂತ್ಲಿ-ಶಿರೂರ ಗ್ರಾಮದ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ ಶ್ರೀಮಠದಲ್ಲಿ ೨೯ನೇ ವರ್ಷದ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿ, ಹಿಂದೆ ಹೆಚ್ಚು ವಿದ್ಯಾವಂತರಿದ್ದರೆ ಅವರಿಗೆ ಉನ್ನತ ಹುದ್ದೆ ಪಡೆಯಲಿ ಎಂದು ದೂರದ ಊರಿಗೆ ಕಳುಹಿಸುತ್ತಿದ್ದರು. ಮಧ್ಯಮ ಶಿಕ್ಷಣ ಪಡೆದವರಿಗೆ ಕೃಷಿ ಕೆಲಸಕ್ಕೆ ಕಳುಹಿಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಅತೀ ಹೆಚ್ಚು ವಿದ್ಯಾವಂತರಾದವರು ಕೃಷಿಯಲ್ಲಿ ಹೊಸ ಸಾಧನೆಗಳನ್ನು ಮಾಡುತ್ತಿರುವುದರಿಂದ ಕೃಷಿಗೆ ಸಾಕಷ್ಟು ಮಹತ್ವ ಬಂದಿದೆ ಎಂದರು.

ರೈತರಿಗೆ ನಿಜವಾದ ಸಂಪತ್ತು ಎಂದರೆ ಮನೆಯಲ್ಲಿ ದನಗಳ ಸಾಲು, ಕಟ್ಟಿಮೆಲೆ ದವಸಾಧಾನ್ಯಗಳ ನಿಟ್ಟು, ಅಡುಗೆ ಮನೆಯಲ್ಲಿ ಹಾಲಿನ ಗಡಗಿ, ಹಿತ್ತಲದಲ್ಲಿ ಮೇವಿನ ಬಣವಿ, ಹೊಲದೊಳಗೆ ಒಡ್ಡು ಇವುಗಳನ್ನು ನೋಡಿ ರೈತರ ಸಂಪತ್ತನ್ನು ಅಳಿಯುತ್ತಿದ್ದರು. ಈಗ ಕಾಲ ಬದಲಾಗಿ ಎಲ್ಲವು ಮಾಯವಾಗಿದೆ ಎಂದರು.

ನಂದಿವೇರಿ ಶ್ರೀಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಅಪರೂಪವಾಗಿರುವ ಮನುಷ್ಯ ಜನ್ಮದಲ್ಲಿ ನಾವು ಜನಿಸಿರುವುದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ, ಪರಿಸರ ಪ್ರೇಮ ಹಾಗೂ ಸಂಸ್ಕಾರ ನೀಡಬೇಕು, ಪಾಲಕರಿಗೆ ಏನೇ ಕಷ್ಟ ಬರಲಿ ಮಕ್ಕಳಿಗೆ ಶಿಕ್ಷಣ ನೀಡಿದರೆ ಅವರು ಸ್ವಾಭಿಮಾನಿಗಳಾಗಿ ಬದಕಲು ಕಲೆಯುತ್ತಾರೆ. ಪಾಲಕರು ಆಸ್ತಿ ಗಳಿಸಲು ಯೋಚಿಸದೆ ಮಕ್ಕಳನ್ನು ಆಸ್ತಿಗಳನ್ನಾಗಿ ಮಾಡಿ. ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಶಾಲೆಗಳು ಶಿಕ್ಷಣ ಕಲಿಸುತ್ತದೆ ಪಾಲಕರು ಸಂಸ್ಕಾರ ಕಲಿಸಬೇಕು. ಮಕ್ಕಳು ಹೇಳಿದ್ದನ್ನು ಕೇಳುವದಿಲ್ಲ ಮಾಡಿದ್ದನ್ನು ಕಲಿಯುತ್ತವೆ. ಅದ್ದರಿಂದ ಮನೆಯಿಂದ ಸಂಸ್ಕಾರ ಆರಂಭವಾಬೇಕು. ಇಂದಿನ ದಿನಗಳಲ್ಲಿ ಕೃಷಿ ಉತ್ತಮ, ವ್ಯಾಪಾರ ಮಧ್ಯಮ, ನೌಕರಿ ಕನಿಷ್ಠವಾಗಿದೆ ಎಂದು ಹೇಳಿದರು.

ಸುಕ್ಷೇತ್ರ ಬಳಗಾನೂರ, ಜಂತ್ಲಿ ಶಿರೂರಿನ ಶ್ರೀಶಿವಶಾಂತವೀರ ಶರಣರು ಮಾತನಾಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ದಂಪತಿಗಳು ಗುರು-ಹಿರಿಯರನ್ನು ಗೌರವಿಸಿ ಆದರ್ಶ ಜೀವನ ನಡೆಸಬೇಕು ಎಂದರು.

ಈ ವೇಳೆ ಕಣಗಿನಹಾಳ, ಜಂತ್ಲಿ ಶಿರೂರ ಧರ್ಮರಮಠದ ಧರ್ಮರಾಜ ಅಜ್ಜನವರು, ಯುವ ಮುಖಂಡ ಮಿಥುನ ಪಾಟೀಲ, ವೆಂಕಟೇಶ ಕುಲಕರ್ಣಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಹೇಮಣ್ಣ ಪೂಜಾರ, ಹೊಂಬಳ, ಗ್ರಾಪಂ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಇದ್ದರು. ೨೪ ಜೋಡಿ ಸಾಮೂಹಿಕ ವಿವಾಹಗಳು ಜರುಗಿದವು. ತಿಂಗಳವರೆಗೆ ಪುರಾಣ ಪ್ರವಚನ ಮಾಡಿದ ಪ್ರವಚನಕಾರರಾದ ಶಿವಲಿಂಗಯ್ಯಶಾಸ್ತ್ರಿ ಹಿರೇಮಠ ಸಿದ್ದಾಪೂರ ಅವರನ್ನು ಸನ್ಮಾನಿಸಲಾಯಿತು. ಶಿವಣ್ಣ ನಾವಳ್ಳಿ ಕಾರ್ಯಕ್ರಮ ನಿರೂಪಿಸಿದರು. ನಂತರ ನರಗುಂದ ಜೈ ಕಿಸಾನ ಕಲಾ ತಂಡದಿಂದ ಜನಪದ ಜಾತ್ರೆ ಜರುಗಿತು.