ಸಾರಾಂಶ
ವಾರ್ಷಿಕ ಉರುಸ್ । ಎಂ.ಶ್ರೀನಿವಾಸ್ ಅಭಿಮತ । ಹಜರತ್ ಹಯಾತ್ ಷಾ ಅಲೈಯವರ 136ನೇ ಸಮಾರಂಭ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಬ್ರಿಟಿಷರ ಅವಧಿ 1889ರಿಂದಲೂ ಇಲ್ಲಿ ಉರುಸ್ ನಡೆಯುತ್ತಿದೆ. ದೊಡ್ಡ ಸಂತರಾಗಿದ್ದ ಹಜರತ್ ಹಯಾತ್ ಷಾ ವಲಿ ಅವರ ವರ್ಷಾಚರಣೆ ನಡೆಯುತ್ತದೆ. ಈ ಮೂಲಕ ನರಸಿಂಹರಾಜಪುರ ಹಿಂದೂ-ಮುಸ್ಲಿಮರ ಬಾಂಧವ್ಯದ ಪ್ರತೀಕವಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಮಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.
ನಗರದ ಟಿ.ಬಿ.ಸರ್ಕಲ್ ಸಮೀಪದ ಸೋಮವಾರ ರಾತ್ರಿ ಉರುಸ್ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಹಜರತ್ ಹಯಾಜ್ ಷಾ ವಲಿ ಅಲೈ ಅವರ 136ನೇ ವಾರ್ಷಿಕ ಉರುಸ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.1960ರಿಂದ ಇಲ್ಲಿ ಕವಾಲಿ ಪ್ರಾರಂಭವಾಗಿದೆ. ನರಸಿಂಹರಾಜಪುರದ ಇತಿಹಾಸದಲ್ಲಿ ಹಿಂದೂ ಮುಸ್ಲಿಂ ಸಂಘರ್ಷ ಇಲ್ಲದೆ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಪರಸ್ಪರ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇಂದಿನ ಯುವ ಜನರು ಇಲ್ಲಿಯ ಇತಿಹಾಸ ಕೇಳಿ ತಿಳಿದುಕೊಳ್ಳಬೇಕು. 100 ವರ್ಷದ ಹಿಂದೆ ಈ ಊರು ಎಡೇ ಹಳ್ಳಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು.ಮೈಸೂರು ಮಹಾರಾಜರಾದ ನರಸಿಂಹರಾಜ ಒಡೆಯರ್ ಇಲ್ಲಿಗೆ ಆಗಮಿಸಿದ ನೆನಪಿಗಾಗಿ ನರಸಿಂಹರಾಜಪುರ ಎಂದು ಹೆಸರ ಬದಲಾವಣೆಯಾಯಿತು ಎಂದು ಹೇಳಿದರು.
ನರಸಿಂಹರಾಜಪುರ ಎಂದು ಹೆಸರು ಬದಲಾದ ಸಂಭ್ರಮದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿಗೆ ಬಂದಾಗ ಹೊನ್ನೇಕೊಡಿಗೆ ಸಂಪರ್ಕ ಸೇತುವೆಗಾಗಿ 5 ಕೋಟಿ ರು. ಮಂಜೂರು ಮಾಡಿದ್ದರು. ಈಗ ಆ ಸೇತುವೆ ನಿರ್ಮಾಣಕ್ಕೆ 35 ಕೋಟಿ ರುಪಾಯಿ ಬೇಕಾಗಿದ್ದು ಆ ಹಣವನ್ನು ಸಹ ಮಂಜೂರು ಮಾಡಿದ್ದಾರೆ. ಸೇತುವೆ ಸಮೀಪದವರೆಗೆ ಹೋಗಲು ರಸ್ತೆ ನಿರ್ಮಾಣಕ್ಕೆ 5 ಕೋಟಿ ರು. ಮಂಜೂರು ಮಾಡಿದ್ದಾರೆ. ರಸ್ತೆ ಅಗಲೀಕರಣಕ್ಕೆ 60 ಕೋಟಿ ರು. ಮಂಜೂರಾಗಿದೆ. ಸೇತುವೆ ಸಮೀಪದಲ್ಲಿ 3 ಎಕರೆ ಜಾಗ ಮಂಜೂರಾಗಿದ್ದು ಅಲ್ಲಿ ರೆಸಾರ್ಟ್ ಸೇರಿದಂತೆ ಪ್ರವಾಸೋದ್ಯಮದ ಅಭಿವೃದ್ದಿಗೆ ಉಪಯೋಗಿಸುತ್ತೇವೆ ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ನರಸಿಂಹರಾಜಪುರದಲ್ಲಿ ಎಲ್ಲಾ ಧರ್ಮದವರು ಒಟ್ಟಾಗಿ ಸಹಬಾಳ್ವೆ ನಡೆಸುತ್ತಿರುವುದು ಭಾರತ ದೇಶಕ್ಕೇ ಮಾದರಿಯಾಗಿದೆ. ಇಲ್ಲಿನ ದರ್ಗಾ ಹಾಗೂ ಮಾರಿಕಾಂಬ ಜಾತ್ರೆಗೆ ಇತಿಹಾಸವಿದೆ. ಪ್ರವಾಸಿ ಮಂದಿರ ಸಮೀಪ ಇರುವ ದರ್ಗಾಕ್ಕೆ 136 ವರ್ಷಗಳ ಇತಿಹಾಸವಿದೆ. ಹಿಂದೆ ರೋಗಗಳು ಬಾರದಂತೆ ಇಲ್ಲಿನ ದರ್ಗಾಕ್ಕೆ, ಮಾರಿಕಾಂಬಕ್ಕೆ ಜನರು ಹರಕೆ ಹೇಳಿಕೊಳ್ಳುತ್ತಿದ್ದರು ಎಂದರು.
ಅಮ್ಮ ಪೌಂಡೇಷನ್ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ಯಾವುದೇ ಧಾರ್ಮಿಕ ಕೇಂದ್ರಗಳು ರಾಜಕೀಯ ಮುಕ್ತವಾಗಿರಬೇಕು.ಪ್ರಾಮಾಣಿಕತೆಯಿಂದ ಎಲ್ಲರೂ ಬದುಕಿದರೆ ಸಮಾಜವು ಒಳ್ಳೆಯ ಹಾದಿಯಲ್ಲಿ ಸಾಗುತ್ತದೆ ಎಂದರು.ಅಧ್ಯಕ್ಷತೆಯನ್ನು ಉರುಸ್ ಆಚರಣಾ ಸಮಿತಿ ಅಧ್ಯಕ್ಷ ಜನಾಬ್ ಜೀಶಾನ್ ವಹಿಸಿದ್ದರು. ಮಾರಿಕಾಂಬ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಉಪಾಧ್ಯಕ್ಷೆ ಉಮಾ ಕೇಶವ್,ಸದಸ್ಯ ಮನೋಹರ್ ಪಾಷಾ, ಜಾಮಿಯಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಸಾದಿಕ್ ಬಾಷಾ, ಜಾಮಿಯಾ ಮಸೀದಿಯ ಮಾಜಿ ಅಧ್ಯಕ್ಷ ಆಬಿದ್ ಸಾಬ್, ವಿವಿಧ ಮಸೀದಿಯ ಮುಖಂಡರು ಭಾಗವಹಿಸಿದ್ದರು.
ನಂತರ ಸಾಮೂಹಿಕ ಅನ್ನ ಸಂತರ್ಪಣೆ, ರಾಜಸ್ಥಾನ, ದೆಹಲಿಯಿಂದ ಬಂದ ಗಾಯಕರಿಂದ ಖವಾಲಿ ನಡೆಯಿತು.