ಸಮೀವುಲ್ಲಾ ವಿರುದ್ಧ ಎನ್ ಆರ್‌ ಸಂತೋಷ್ ಆರೋಪ

| Published : Oct 02 2024, 01:04 AM IST

ಸಾರಾಂಶ

ಅರಸೀಕೆರೆ ನಗರಸಭೆ ಅಧ್ಯಕ್ಷ ಸಮಿವುಲ್ಲಾರವರು ಬಹಳ ಆತುರವಾಗಿ ಸಾಮಾನ್ಯ ಸಭೆಯನ್ನು ಕರೆದಿದ್ದಾರೆ. ಇದರ ಮೂಲ ಉದ್ದೇಶ ಇವರು ಮತ್ತು ಕೆಲವು ಸದಸ್ಯರು ಅಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿರುವ ಹಿನ್ನೆಲೆ ಅವರಿಗೆ ಅನರ್ಹತೆಯ ಭೀತಿ ಕಾಡುತ್ತಿದ್ದು, ಆ ಸಮಯದಲ್ಲಿ ಕೆಲವು ಭ್ರಷ್ಟಾಚಾರ ನಡೆಯುವ ಲಕ್ಷಣಗಳು ಕಂಡುಬಂದಿರುತ್ತದೆ ಎಂದು ಎಂದು ಜೆಡಿಎಸ್ ಮುಖಂಡ ಎನ್.ಆರ್‌ ಸಂತೋಷ್ ಗಂಭೀರವಾಗಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಅರಸೀಕೆರೆ ನಗರಸಭೆ ಅಧ್ಯಕ್ಷ ಸಮಿವುಲ್ಲಾರವರು ಬಹಳ ಆತುರವಾಗಿ ಸಾಮಾನ್ಯ ಸಭೆಯನ್ನು ಕರೆದಿದ್ದಾರೆ. ಇದರ ಮೂಲ ಉದ್ದೇಶ ಇವರು ಮತ್ತು ಕೆಲವು ಸದಸ್ಯರು ಅಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿರುವ ಹಿನ್ನೆಲೆ ಅವರಿಗೆ ಅನರ್ಹತೆಯ ಭೀತಿ ಕಾಡುತ್ತಿದ್ದು, ಆ ಸಮಯದಲ್ಲಿ ಕೆಲವು ಭ್ರಷ್ಟಾಚಾರ ನಡೆಯುವ ಲಕ್ಷಣಗಳು ಕಂಡುಬಂದಿರುತ್ತದೆ ಎಂದು ಎಂದು ಜೆಡಿಎಸ್ ಮುಖಂಡ ಎನ್.ಆರ್‌ ಸಂತೋಷ್ ಗಂಭೀರವಾಗಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕೆಲವು ನಿಯಮಬಾಹಿರ ಹಾಗೂ ಅವೈಜ್ಞಾನಿಕವಾದ ಲೇಔಟ್‌ಗಳ ಮಂಜೂರಾತಿಯನ್ನು ಆತುರವಾಗಿ ಸಾಮಾನ್ಯಸಭೆಗೆ ತಂದಿರುವುದು, ಈಗಾಗಲೇ ನಮ್ಮ ಸದಸ್ಯರು ಪೌರಾಯುಕ್ತರಿಗೆ ಈ ಲೇಔಟ್‌ಗಳು ನಿಯಮಬಾಹಿರವಾಗಿದ್ದು ಸಾಮಾನ್ಯ ಸಭೆಗೆ ತರಬಾರದು ಎಂದು ೨೦೨೪ ಸೆಪ್ಟಂಬರ್‌ ೨೧ರಂದು ಅರ್ಜಿ ಕೊಟ್ಟಿದ್ದು, ಖಾತೆ ಮಾಡದಂತೆ ಮನವಿ ಸಲ್ಲಿಸಿರುತ್ತಾರೆ. ಆದರೂ ಸಹ ಪೌರಾಯುಕ್ತರು ಮತ್ತು ಅಧ್ಯಕ್ಷರು ಅಪ್ಪಣೆಯ ಮೇರೆಗೆ ೧೨ ಲೇಔಟ್‌ಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡಿಲ್ಲದಿದ್ದರೂ ಅಧಿಕಾರಿಗಳಿಂದ ಸುಳ್ಳು ವರದಿ ಪಡೆದು ಸಾಮಾನ್ಯಸಭೆಗೆ ತಂದಿದ್ದಾರೆ. ೧೨ ಲೇಔಟ್‌ಗಳಿಂದ ಸುಮಾರು ಒಟ್ಟು ೨೫೦ ನಿವೇಶನಗಳ ಖಾತೆ ತೆರೆಯಬೇಕಾಗಿದ್ದು, ನಮಗೆ ಬಂದ ಮಾಹಿತಿ ೧೦೮,೦೦೦ ಪ್ರಕಾರ ಒಂದು ನಿವೇಶನಕ್ಕೆ ೧ ಲಕ್ಷದಿಂದ ೨ ಲಕ್ಷದವರೆಗೆ ಹಣ ವಸೂಲಿ ಮಾಡಲಾಗಿದೆ. ಹಾಗೂ ಇದರ ಪ್ರಕಾರ ಎರಡು ಕೋಟಿಯಿಂದ ಮೂರು ಕೋಟಿವರೆಗೆ ಹಗರಣ ಆಗಿದೆ ಎಂಬ ಮಾಹಿತಿ ಇದೆ ಎಂದು ಅನುಮಾನಿಸಿದರು.

ಅರಸೀಕೆರೆ ತಾಲೂಕಿನ ಇತಿಹಾಸದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರದ ವಿಚಾರವಾಗಿ ಕಾಣುತ್ತಿದೆ. ಈ ಹಿಂದೆಯೂ ಸಹ ಕೆಲವು ಲೇಔಟ್‌ಗಳಲ್ಲಿ ರಸ್ತೆ, ಚರಂಡಿ ಕಾಮಗಾರಿ ಮಾಡದೆ ಅ ಲೇಔಟ್‌ಗಳಿಗೆ ನಗರಸಭೆಯ ಅನುದಾನಗಳಲ್ಲಿ ಕಾಮಗಾರಿ ಮಾಡಿರುವ ಉದಾಹರಣೆಗಳು ಇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿರುತ್ತದೆ. ಇದರಿಂದ ಅಭಿವೃದ್ಧಿ ಶುಲ್ಕವನ್ನು ಲೇಔಟ್ ಮಾಲೀಕರಿಂದ ಹಣ ಪಡೆದುಕೊಳ್ಳುವುದು ಇಲ್ಲವೆ ಅದರ ಬದಲು ಅವರ ಆಪ್ತರ ಹೆಸರಿಗೆ ನಿವೇಶನ ಪಡೆಯುವುದಾಗಿದೆ. ಲೇಔಟ್ ಮಾಲೀಕರಲ್ಲಿ ನನ್ನ ಮನವಿ ಏನೆಂದರೆ ನಿವೇಶನ ಪಡೆದುಕೊಳ್ಳುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಹಾಗೆ ಸಾರ್ವಜನಿಕರು ಲೇಔಟ್ ನ ಸಂಪೂರ್ಣ ಮಾಹಿತಿ ಪಡೆದ ನಂತರ ನಿವೇಶನ ಖರೀದಿ ಮಾಡಬೇಕು ಎಂದರು.

ಈಗಾಗಲೇ ಜಿಲ್ಲಾಧಿಕಾರಿಗಳಿಗೂ ಈ ಲೇಔಟ್‌ಗಳ ಅಕ್ರಮದ ಬಗ್ಗೆ ದೂರು ನೀಡಿದ್ದು, ಜಿಲ್ಲಾಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ ಅಕ್ರಮ ವರದಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ. ಅಧಿಕಾರಿಗಳು ಅಂದಾಜು ಪಟ್ಟಿಯಂತೆ ಕಾಮಗಾರಿಯನ್ನು ಮಾಡಿಸುವುದರ ಜೋತೆಗೆ ಲೇಔಟ್‌ನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎರಡನೇ ವಿಚಾರ ಎಂದರೆ ನಮ್ಮ ಜೆಡಿಎಸ್ ಪಕ್ಷದ ಸದಸ್ಯರಾದ ಶ್ರೀಮತಿ ಸುಜಾತ ರಮೇಶ್ ಕೊಟ್ಟಿರುವ ದೂರಿನ ಅನ್ವಯ ಮಾನ್ಯ ಜಿಲ್ಲಾಧಿಕಾರಿಗಳು ಬಹಳ ವಿಳಂಬ ಮಾಡುತ್ತಿದ್ದು, ಕಾನೂನಿನ ಪ್ರಕಾರ ೬೦ ದಿನಗಳಲ್ಲಿ ಪ್ರಕರಣವನ್ನು ಇತ್ಯರ್ಥ ಪಡಿಸಬೇಕಾಗಿತ್ತು. ಆದಷ್ಟು ಬೇಗ ವಿಚಾರಣೆ ಮಾಡಿ ತೀರ್ಪು ನೀಡಬೇಕೆಂದು ಮನವಿ ಮಾಡುತ್ತೇನೆ. ಇಲ್ಲವಾದಲ್ಲಿ ನಾವು ಹೈಕೋರ್ಟ್‌ಗೆ ಹೋಗುವ ಸಂದರ್ಭ ಬಂದರು ಹಿಂಜರಿಯುವುದಿಲ್ಲ ಎಂದರು. ಮೂರನೇ ವಿಚಾರ ಏನೆಂದರೆ ಪ್ರಸ್ತುತ ಅರಸೀಕೆರೆ ತಾಲೂಕಿನಲ್ಲಿ ೪೫ ಅಂಗನವಾಡಿ ಕಾರ್ಯಕರ್ತೆಯರು, ೧೨೬ ಸಹಾಯಕಿಯರು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು. ಈ ವಿಚಾರದಲ್ಲಿ ಕೆಲವು ಮಧ್ಯವರ್ತಿಗಳ ಮುಖಾಂತರ ಅಧಿಕಾರಿಗಳು ಒಂದು ಹುದ್ದೆಗೆ ಒಂದು ಲಕ್ಷ ರುಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಹಾಗೂ ಜೇನುಕಲ್ ನಗರದ ಅಂಗನವಾಡಿಯಲ್ಲಿ ಈಗಾಗಲೇ ಒಂದು ಉರ್ದು ಭಾಷೆಯ ಕಾರ್ಯಕರ್ತೆ ಇದ್ದರೂ ಕೂಡ ಮತ್ತೆ ಅಲ್ಲಿಗೆ ಉರ್ದು ಭಾಷೆಯ ಹುದ್ದೆಯನ್ನು ಆಹ್ವಾನಿಸಿರುವುದು. ಇದರಿಂದ ಬೇರೆ ವರ್ಗದ ಜನಕ್ಕೆ ಮೋಸ ಮಾಡಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಂಚಣ್ಣ, ರಮೇಶ್, ಉಮೇಶ್, ಪುಟ್ಟಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.