ಮಲ್ಲಿಗೆನಾಡಿಗೆ ನರೇಗಾ ಪ್ರಶಸ್ತಿ ಖುಷಿ ತಂದಿದೆ: ಶಾಸಕ ಕೃಷ್ಣನಾಯ್ಕ

| Published : Feb 06 2025, 11:48 PM IST

ಮಲ್ಲಿಗೆನಾಡಿಗೆ ನರೇಗಾ ಪ್ರಶಸ್ತಿ ಖುಷಿ ತಂದಿದೆ: ಶಾಸಕ ಕೃಷ್ಣನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ 8 ತಾಲೂಕು ಪಂಚಾಯಿತಿಗಳಲ್ಲಿ ಹೂವಿನಹಡಗಲಿ ಒಂದಾಗಿದೆ.

ಹೂವಿನಹಡಗಲಿ: ನರೇಗಾ ಯೋಜನೆಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗುರಿ ಮೀರಿ ಸಾಧನೆ ಮಾಡಿರುವ ನಮ್ಮ ತಾಲೂಕು ಪಂಚಾಯಿತಿಗೆ ವಿಭಾಗೀಯ ಮಟ್ಟದಲ್ಲಿ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿಯಲ್ಲಿರುವ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 8 ತಾಲೂಕು ಪಂಚಾಯಿತಿಗಳಲ್ಲಿ ಹೂವಿನಹಡಗಲಿ ಒಂದಾಗಿದ್ದು, ಕಚೇಯಲ್ಲಿ ಸಿಬ್ಬಂದಿ ಕೊರತೆಯ ನಡುವೆ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡಿ, ನರೇಗಾ ಯೋಜನೆಯಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದಾರೆ. ನಾನು ಕೂಡ ನಿರಂತರ ಪಿಡಿಒಗಳ ಸಭೆ ಮಾಡಿ, ಕಾಮಗಾರಿಗಳ ಸಾಧಕ ಬಾಧಕಗಳನ್ನು ಚರ್ಚಿಸಿದ್ದರಿಂದ ಅವಾರ್ಡ್‌ ಬರಲು ಕಾರಣವಾಗಿದೆ ಎಂದರು.

ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿಯೂ ಒಳ ಚರಂಡಿ ವ್ಯವಸ್ಥೆ ಮಾಡಲು, ನರೇಗಾ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಈಗಾಗಲೇ ಮೊದಲ ಹಂತದಲ್ಲಿ ಮಾನ್ಯರ ಮಸಲವಾಡಕ್ಕೆ ₹1.50 ಕೋಟಿ, ಹಿರೇಕೊಳಚಿಗೆ ₹80 ಲಕ್ಷ ಅನುದಾನ ನೀಡಲಾಗಿದೆ. ಈ ಹಿಂದೆ ನರೇಗಾ ಯೋಜನೆಯಲ್ಲಿ ಕೇವಲ ₹5 ಲಕ್ಷ ಕಾಮಗಾರಿ ಮಂಜೂರಾಗುತ್ತಿದ್ದವು. ಈಗ ಸಮಗ್ರ ಅಭಿವೃದ್ಧಿ ಮಾಡಲು ಕೋಟಿಗಟ್ಟಲೇ ಹಣ ಮಂಜೂರಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡಲು ಸಾಕಷ್ಟು ಅವಕಾಶಗಳನ್ನು ನೀಡಿದೆ ಎಂದರು.

ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಲು ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿಮಾಣ ಮಾಡಲಾಗಿದೆ. ಆದರೆ ಅವುಗಳು ನಿರುಪಯುಕ್ತ ಕೇಂದ್ರಗಳಾಗಿವೆ ಎಂಬ ಪ್ರಶ್ನೆಗೆ, ಸ್ವಚ್ಛತೆ ದೃಷ್ಟಿಯಿಂದ ಜನರ ಸಹಕಾರವೂ ಬಹಳ ಮುಖ್ಯ. ಈ ಕುರಿತು ಆಯಾ ಸ್ಥಳಗಳಿಗೆ ಭೇಟಿ ನೀಡಿ ಆಗಿರುವ ತೊಂದರೆಗಳನ್ನು ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಹಣ್ಣಿ ಶಶಿಧರ, ವಾರದ ಗೌಸ್‌ ಮೋಹಿದ್ದೀನ್‌, ತೋಟಾನಾಯ್ಕ, ತಾಪಂ ಇಒ ಎಂ.ಉಮೇಶ, ನರೇಗಾ ಎಡಿ ವೀರಣ್ಣ ನಾಯ್ಕ, ತಾಪಂ ಎಡಿ ಹೇಮಾದ್ರಿ ನಾಯ್ಕ ಸೇರಿದಂತೆ ಇತರರಿದ್ದರು.