ಸಾರಾಂಶ
ಶಿರಸಿ: ಹೆಣ್ಣುಮಕ್ಕಳನ್ನು ಸದೃಢರಾಗಿಸಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಕೂಲಿ ಕೆಲಸ ಹಾಗೂ ವೈಯಕ್ತಿಕ ಅಭಿವೃದ್ಧಿ ಕಾಮಗಾರಿಗಳನ್ನು ನೀಡುತ್ತಿದೆ. ಸಂಪೂರ್ಣ ಸದುಪಯೋಗ ಆಗಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ ಹೇಳಿದರು.
ಅವರು ಶನಿವಾರ ತಾಲೂಕಿನ ಇಸಳೂರು ಗ್ರಾಪಂನಲ್ಲಿ ನಡೆದ ಸ್ತ್ರೀ ಚೇತನ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿ, ಉದ್ಯೋಗ ಖಾತ್ರಿಯಡಿ ವರ್ಷದಲ್ಲಿ ಕುಟುಂಬವೊಂದಕ್ಕೆ ೧೦೦ ದಿನಗಳ ಕೆಲಸ ನೀಡಲಾಗುತ್ತಿದ್ದು, ಯೋಜನೆಯಡಿ ಎ.೧ರಿಂದ ಅನ್ವಯವಾಗುವಂತೆ ಕೂಲಿ ಮೊತ್ತವನ್ನು ₹೩೪೯ ರಿಂದ ₹೩೭೦ಕ್ಕೆ ಹೆಚ್ಚಳ ಮಾಡಲಾಗಿದೆ ಇದರ ಸದುಪಯೋಗ ಕೂಲಿಕಾರರು ಪಡೆಯಬೇಕು ಎಂದರು.ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಮಾತನಾಡಿ, ಜನರು ಕೆಲಸಕ್ಕಾಗಿ ಬೇರೆಡೆ ವಲಸೆ ಹೋಗದೆ ಇದ್ದಲ್ಲಿಯೇ ನರೇಗಾದಡಿ ಕೆಲಸ ಪಡೆಯಬೇಕು. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಿಳಾ ಕೂಲಿಕಾರರಿಗೆ ಕೆಲಸದಲ್ಲಿ ಆದ್ಯತೆ ನೀಡಲಾಗಿದೆ. ಗಂಡು ಹೆಣ್ಣು ಎಂದು ಭೇದ ಭಾವ ಮಾಡದೇ ಎಲ್ಲರಿಗೂ ಸಮಾನ ವೇತನ ಒದಗಿಸಲಾಗುತ್ತಿದೆ. ಜೊತೆಗೆ ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡುವುದಲ್ಲದೆ, ಕೆಲವೆಡೆ ಶಿಶುಗಳ ಆರೈಕೆಗಾಗಿ ಕೂಸಿನ ಮನೆ ವ್ಯವಸ್ಥೆ ಕಲ್ಪಿಸಲಾಗಿದೆ ಇದರ ಸೌಲಭ್ಯ ಪಡೆಯಬೇಕು ಎಂದರು.
ಈ ವೇಳೆ ಕೂಲಿಕಾರರಿಗೆ ಕಾಮಗಾರಿ ಸ್ಥಳದಲ್ಲಿ ಅಪಘಾತ ಸಂಭವಿಸಿ ಜೀವ ಹಾನಿ ಅಥವಾ ಶಾಶ್ವತ ಅಂಗ ವೈಫಲ್ಯವಾದ ಸಂದರ್ಭದಲ್ಲಿ ಕಾರ್ಮಿಕರಿಗೆ ಪಿಎಂಜೆಜೆಬಿವಾಯ್ ಮತ್ತು ಪಿಎಂಎಸ್‌ಬಿವೈ ಯೋಜನೆಯಡಿ ವಿಮಾ ಸೌಲಭ್ಯ ಸಹ ಒದಗಿಸಲಾಗುತ್ತದೆ. ಹೀಗೆ ಗ್ರಾಮೀಣ ಭಾಗದ ಜನರಿಗೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ಯೋಜನೆಯಡಿ ಸಾಕಷ್ಟು ಅನುಕೂಲಗಳಿದ್ದು, ಮಹಿಳೆಯರು ಸ್ತ್ರೀ ಚೇತನ ಅಭಿಯಾನದ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಲಾಯಿತು.ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಶೆಟ್ಟರ್, ಪಿಡಿಒ ಜಯವೀರ ಭಟ್, ಕಾರ್ಯದರ್ಶಿ ವೆಂಕಟ್ರಮಣ, ಎನ್‌ಆರ್‌ಎಲ್‌ಎಮ್ ವಲಯ ಮೇಲ್ವಿಚಾರಕ ಕಿರಣ್ ಭಟ್, ಬಿಎಫ್‌ಟಿ ಶೋಭಾ ಗೌಡ, ಪಂಚಾಯತ್ ಸಿಬ್ಬಂದಿ ಇದ್ದರು.