ಸಾರಾಂಶ
ಗದಗ: ಅಭಿವೃದ್ಧಿಗೆ ನರೇಗಾ ವರದಾನವಾಗಿದೆ ಎಂದು ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.
ತಾಲೂಕಿನ ಅಂತೂರ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ನರೇಗಾ ಯೋಜನೆಯಡಿ ಉದ್ಯೋಗ ಚೀಟಿಯ ಮಹತ್ವ, ದೊರೆಯುವ ಸೌಲಭ್ಯವನ್ನು ಪಡೆಯಲು ನಿಯಮಾನುಸಾರ ಕೂಲಿ ಕಾರ್ಮಿಕರು ಕೆಲಸ ನಿರ್ವಹಣೆ ಮಾಡಬೇಕು. ಗಂಡು, ಹೆಣ್ಣಿಗೆ ಸಮಾನ ಕೂಲಿ ನೀಡಲಾಗುವುದು. ಅಳತೆಗೆ ತಕ್ಕಂತೆ ಕೆಲಸ ನಿರ್ವಹಣೆ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದ ಕೂಲಿ ಮೊತ್ತ ಲಭ್ಯವಾಗುತ್ತದೆ ಎಂದು ಹೇಳಿದರು.''''ನರೇಗಾ ಯೋಜನೆಯ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ, ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ'''' ಎಂಬ ಶೀರ್ಷಿಕೆಯಡಿ ಏ. 1ರಿಂದ ನರೇಗಾ ಯೋಜನೆಯಡಿ ಗ್ರಾಪಂ ವ್ಯಾಪ್ತಿಯ ಪ್ರತಿಯೊಬ್ಬ ನೋಂದಾಯಿತ ಕೂಲಿಕಾರರಿಗೆ ನಿರಂತರವಾಗಿ 100 ದಿನಗಳ ಕೆಲಸ ಪಡೆಯುವ ಅವಕಾಶ ಹೊಂದಿದ್ದು ನಮೂನೆ-6ರಲ್ಲಿ ಗ್ರಾಪಂಗೆ ಅರ್ಜಿ ಸಲ್ಲಿಸಿ ಕೆಲಸ ಪಡೆಯಬಹುದು ಹಾಗೂ ಪ್ರಸ್ತುತ ಆರ್ಥಿಕ ವರ್ಷ ಕೂಲಿ ಮೊತ್ತದಲ್ಲಿ ಭಾರಿ ಏರಿಕೆ ಕಂಡಿದ್ದು ₹349ಗಳಿದ್ದ ಕೂಲಿ ದರ ₹370ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ಪ್ರಕಾಶಗೌಡ ಪಾಟೀಲ ಮಾತನಾಡಿ, ಯೋಜನೆಯಡಿ ಪ್ರತಿ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಿಸಿ ವಾರ್ಷಿಕ 100 ಮಾನವ ದಿನಗಳ ಕೂಲಿ ಕೆಲಸ ನೀಡಲಾಗುತ್ತದೆ. ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಸಹಾಯಕ ನಿರ್ದೇಶಕ ಕುಮಾರ ಪೂಜಾರ ಮಾತನಾಡಿ, ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಈಗ ಅಪ್ಲಿಕೇಶನ್ ಗಮನ ಸೆಳೆದಿದೆ. ಕೇಂದ್ರ ಸರ್ಕಾರ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ನ್ಯಾಶನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ ಅಪ್ಲಿಕೇಶನ್ ಕಡ್ಡಾಯಗೊಳಿಸಿದೆ. ಇದರಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರರ ಹಾಜರಾತಿಗಳನ್ನು ಜಿಯೋ ಟ್ಯಾಗ್ ಫೋಟೋಗ್ರಾಫ್ ಮುಖಾಂತರ ಪ್ರತಿ ದಿನ ಎರಡು ಬಾರಿ ಕಡ್ಡಾಯವಾಗಿ ಸೆರೆಹಿಡಿಯಲು ಸೂಚಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಎಸ್. ಚಟ್ರಿ ಮಾತನಾಡಿದರು.