78 ವರ್ಷದ ವೃದ್ಧೆ ಹನುಮವ್ವ ಯಲ್ಲಪ್ಪ ಮೊಹಿತೆ ಕೂಡ ನರೇಗಾ ಕೆಲಸ ಪ್ರಾರಂಭವಾದರೆ ಸಾಕು, ನಾನು ಕೆಲಸಕ್ಕೆ ಬರುತ್ತೇನೆ ಎಂದು ಉತ್ಸಾಹದಿಂದ ನಮೂನೆ ೬ರಲ್ಲಿ ಹೆಸರು ಬರೆಸಿ ಖುಷಿಯಿಂದ ಕೆಲಸಕ್ಕೆ ಬರುತ್ತಿದ್ದಾರೆ.

ಎಸ್.ಎಂ. ಸೈಯದ್

ಗಜೇಂದ್ರಗಡ: ಈ ಇಬ್ಬರು ವೃದ್ಧೆಯರ ವಯಸ್ಸು ೮೦ರ ಆಸುಪಾಸಿನಲ್ಲಿದ್ದರೂ ಕೆಲಸ ಮಾಡುವ ಹುಮ್ಮಸ್ಸು ಮಾತ್ರ ಕುಗ್ಗಿಲ್ಲ! ಇಳಿವಯಸ್ಸಿನಲ್ಲೂ ದುಡಿದು ಜೀವನ ನಡೆಸಬೇಕು ಎಂಬ ಛಲಕ್ಕೆ ನರೇಗಾ ಯೋಜನೆ ಆಸರೆಯಾಗಿದೆ.

ತಾಲೂಕಿನ ರಾಂಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಾಪುರ ಗ್ರಾಮದ ನಿವಾಸಿ ೮೦ ವರ್ಷದ ಹನುಮವ್ವ ಹನುಮಪ್ಪ ಮೊಹಿತೆ ಅವರ ದುಡಿಮೆಗೆ ನರೇಗಾ ವರದಾನವಾಗಿದೆ. ಹನುಮವ್ವನಿಗೆ ಪತಿ ಇಲ್ಲ. ಇಬ್ಬರು ಗಂಡುಮಕ್ಕಳು ಇದ್ದು, ಒಬ್ಬ ಮಗ ಬೇರೆ ಮನೆ ಮಾಡಿದ್ದಾರೆ. ಇನ್ನೊಬ್ಬ ೮ ವರ್ಷಗಳ ಹಿಂದೆ ದುಡಿಯಲು ಹೋದವ ಮರಳಿ ಮನೆಗೆ ಬಂದಿಲ್ಲ. ಈಗ ಸೊಸೆಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಇವರಿಗೆ ೨ ಎಕರೆ ಒಣಬೇಸಾಯದ ಜಮೀನಿದ್ದು, ಜೀವನಕ್ಕೆ ಸಾಕಾಗುವುದಿಲ್ಲ. ಸೊಸೆ ಕೂಲಿ ಕೆಲಸ ಮಾಡುತ್ತಿದ್ದರು. ಸೊಸೆ ಜತೆಗೆ ನರೇಗಾ ಯೋಜನೆಯಲ್ಲಿ ಹನುಮವ್ವ ಸುಮಾರು ೨೦ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ನಾನು ಕೆಲಸಕ್ಕೆ ಬರುತ್ತೇನೆ...: ಇನ್ನೊಬ್ಬ 78 ವರ್ಷದ ವೃದ್ಧೆ ಹನುಮವ್ವ ಯಲ್ಲಪ್ಪ ಮೊಹಿತೆ ಕೂಡ ನರೇಗಾ ಕೆಲಸ ಪ್ರಾರಂಭವಾದರೆ ಸಾಕು, ನಾನು ಕೆಲಸಕ್ಕೆ ಬರುತ್ತೇನೆ ಎಂದು ಉತ್ಸಾಹದಿಂದ ನಮೂನೆ ೬ರಲ್ಲಿ ಹೆಸರು ಬರೆಸಿ ಖುಷಿಯಿಂದ ಕೆಲಸಕ್ಕೆ ಬರುತ್ತಿದ್ದಾರೆ.

ಈ ಹನುಮವ್ವನಿಗೂ ಪತಿ ಇಲ್ಲ. ಇಬ್ಬರು ಗಂಡುಮಕ್ಕಳು ಇದ್ದು, ಹಿರಿಯ ಮಗನೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಕುಳಿತುಕೊಳ್ಳದೆ ಮಕ್ಕಳಿಗೆ ಸಹಾಯ ಮಾಡಬೇಕು ಎನ್ನುವ ಹಂಬಲಕ್ಕೆ ಮಕ್ಕಳು ಹಾಗೂ ಸೊಸೆಯಂದಿರ ಜತೆಗೆ ನರೇಗಾ ಯೋಜನೆಯಡಿ ದುಡಿಯುತ್ತಾ ನೆಮ್ಮದಿ ಬದುಕು ನಡೆಸುತ್ತಿದ್ದಾರೆ. ಇವರು ಸಹ ಸುಮಾರು ೨೦ ವರ್ಷಗಳಿಂದ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇನ್ನೂ ದುಡಿಯುವ ಶಕ್ತಿ ಇದೆ: ಬೇಸಿಗೆಯಲ್ಲಿ ಹಳ್ಳಿಯೊಳಗೆ ಜಮೀನಿನ ಕೆಲಸ ಇರುವುದಿಲ್ಲ. ಉದ್ಯೋಗ ಖಾತ್ರಿ ಕೆಲಸ ಆರಂಭವಾದರೆ ಎಲ್ಲರೂ ಕೆಲಸಕ್ಕೆ ಬರುತ್ತಾರೆ. ಅದರಲ್ಲಿ ನಾವು ಕೆಲಸಕ್ಕೆ ಬಂದು ನಾಲ್ಕು ರುಪಾಯಿ ದುಡಿತಿವಿ. ದೇಹದಲ್ಲಿ ಇನ್ನೂ ದುಡಿಯುವ ಶಕ್ತಿ ಇದೆ. ಮನೆಯಲ್ಲಿ ಖಾಲಿ ಕುಳಿತುಕೊಳ್ಳುವ ಬದಲು ಉದ್ಯೋಗ ಖಾತ್ರಿ ಕೆಲಸಕ್ಕೆ ಬರುತ್ತೇವೆ ಎಂದು ವೃದ್ಧೆ ಹನುಮವ್ವ ಮೊಹಿತೆ ತಿಳಿಸಿದರು.

ಶೇ. 50ರಷ್ಟು ರಿಯಾಯಿತಿ: ಗ್ರಾಮೀಣ ಪ್ರದೇಶದಲ್ಲಿ ನರೇಗಾ ಜಾಬ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕೂಲಿಕಾರರು ಯೋಜನೆಯಡಿ ಕೆಲಸ ಮಾಡಬಹುದು. ಇದರಲ್ಲಿ ಯಾವುದೇ ವಯಸ್ಸಿನ ಮಿತಿ ಇಲ್ಲ. ದುಡಿಯುವ ಶಕ್ತಿ ಇದ್ದವರು ಎಲ್ಲರೂ ಕೆಲಸ ಮಾಡಬಹುದು. ವಯೋವೃದ್ಧರಿಗೆ ಹಾಗೂ ವಿಕಲಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ತಾಪಂ ಸಹಾಯಕ ನಿರ್ದೇಶಕ(ಗ್ರಾ.ಉ.) ವಿಶ್ವನಾಥ ರಾಠೋಡ ತಿಳಿಸಿದರು.